Advertisement
ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಅವರ ಕಚೇರಿ ಹಾಗೂ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್ (45) ಮೃತರು. ಭಾನುವಾರ ಬೆಳಗ್ಗೆ 9.15ರ ಸುಮಾರಿಗೆ ಎಂದಿನಂತೆ ಕೆಲಸಕ್ಕೆ ಆಗಮಿಸಿದ್ದ ವೆಂಕಟೇಶ್, ಶಾಸಕರ ಕಚೇರಿ ಪಕ್ಕದಲ್ಲಿರುವ ಗೋಡಾನ್ ಮುಂಭಾಗದ ರಸ್ತೆಯಲ್ಲಿ ರಾಸಾಯನಿಕದ ಕ್ಯಾನ್ ಮುಚ್ಚಳ ತೆರೆಯುವಾಗ ಸ್ಫೋಟಗೊಂಡಿದ್ದು, ಅವರ ಮುಖ ಹಾಗೂ ಕತ್ತಿನ ಭಾಗ ಛಿದ್ರಗೊಂಡಿದೆ.
Related Articles
Advertisement
ಸ್ಫೋಟಕ್ಕೆ ಬೆಚ್ಚಿದ ಸ್ಥಳೀಯರು: ವೈಯಾಲಿಕಾವಲ್ 11ನೇ ಕ್ರಾಸ್‌ನಲ್ಲಿ ಭಾರೀ ಸದ್ದಿನೊಂದಿಗೆ ಸ್ಫೋಟ ಸಂಭವಿಸಿದ ಕೂಡಲೇ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಬಾಂಬ್ ಇರಬಹುದೇ ಎಂಬ ಆತಂಕದೊಂದಿಗೆ ಮನೆಯಿಂದ ಹೊರಗಡೆ ಓಡಿಬಂದಿದ್ದು, ಘಟನಾ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದರು.
ಸ್ಫೋಟದ ತೀವ್ರತೆಗೆ ವೆಂಕಟೇಶ್ ಮೃತದೇಹ ಐದು ಅಡಿ ದೂರ ಬಿದ್ದಿತ್ತು. ಕ್ಯಾನ್‌ನ ಪ್ಲಾಸ್ಟಿಕ್ ಚೂರುಗಳು ಘಟನಾ ಸ್ಥಳದಿಂದ ಸುಮಾರು 200 ಮೀ. ದೂರದವರೆಗೂ ಚದುರಿ ಬಿದ್ದಿದ್ದವು.ಸ್ಫೋಟದ ಸದ್ದಾದ ಕೂಡಲೇ ಮನೆಯಲ್ಲಾ ಅಲುಗಾಡಿದಂತಹ ಅನುಭವವಾಯಿತು. ಹೊರಗಡೆ ಓಡಿ ಬಂದಾಗ ಜನ ಸೇರಿದ್ದರು. ಬಳಿಕವೇ ವೆಂಕಟೇಶ್ ಮೃತಪಟ್ಟಿರುವುದು ಗೊತ್ತಾಯಿತು ಎಂದು ಸ್ಥಳೀಯರಾದ ಶ್ರೀನಿವಾಸ್ ಹೇಳಿದರು. ಬಾಂಬ್ ವದಂತಿಗೆ ಪೊಲೀಸರು ಕಂಗಾಲು!: ಘಟನೆ ಸಂಭವಿಸಿದ ಆರಂಭದಲ್ಲಿ ಕೆಮಿಕಲ್ ಸ್ಫೋಟ ಎಂದು ಖಚಿತಪಟ್ಟಿರಲಿಲ್ಲ. ಅನುಮಾನಾಸ್ಪದ ವಸು , ಬಾಂಬ್ ಸ್ಫೋಟ ಎಂಬ ವದಂತಿ ಹರಿದಾಡಿತು. ಸ್ಫೋಟ ಸಂಭವಿಸಿದ ಕೆಲ ಸಮಯಕ್ಕೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸ್ಥಳವನ್ನು ಸುಪರ್ದಿಗೆ ತೆಗೆದುಕೊಂಡರು. ಶ್ವಾನದಳ ಕೂಡ ಸ್ಥಳ ಪರಿಶೀಲನೆ ನಡೆಸಿತು. ದುರ್ಘಟನೆ ಸ್ಥಳವನ್ನು ಪೊಲೀಸರು ಸುಪರ್ದಿಗೆ ತೆಗೆದುಕೊಂಡಿದ್ದರು. ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿಯೇ ಕೆಲಕಾಲ ಮೊಕ್ಕಂ ಹೂಡಿದ್ದರು. ಹಲವು ಗಂಟೆಗಳ ಕೂಲಂಕಶ ಪರಿಶೀಲನೆ ಬಳಿಕ ಅವಧಿ ಮೀರಿದ ರಾಸಾಯನಿಕ ಸ್ಫೋಟ ಎಂಬುದು ಖಚಿತಪಟ್ಟಿತು. ಸಂಪೂರ್ಣ ತನಿಖೆ ನಡೆಯಲಿ – ಶಾಸಕ ಮುನಿರತ್ನ: ಘಟನೆ ನಡೆದ ವೇಳೆ ಶಾಸಕ ಮುನಿರತ್ನ ಮನೆಯಲ್ಲಿರಲಿಲ್ಲ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ವೆಂಕಟೇಶ್ ನನಗೆ ಬಾಲ್ಯದಿಂದಲೂ ಗೊತ್ತು. ನನ್ನ ಕಚೇರಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು. ಈ ದುರ್ಘಟನೆ ಬಗ್ಗೆ ನೋವಿದೆ. ಈ ಹಂತದಲ್ಲಿ ಏನೂ ಹೇಳಲು ಇಚ್ಛಿಸುವುದಿಲ್ಲ. ಪೊಲೀಸರು ಸಂಪೂರ್ಣ ತನಿಖೆ ನಡೆಸಲಿ. ಅಗತ್ಯವಿದ್ದರೆ ತನಿಖೆಗೆ ಸಹಕರಿಸುತ್ತೇನೆ ಎಂದರು. ಸ್ನೇಹಮಯ ವ್ಯಕ್ತಿತ್ವ: ವೆಂಕಟೇಶ್ ಅವರು ಹಲವು ವರ್ಷಗಳಿಂದ ಪರಿಚಯ. ವಯಸ್ಸಿನಲ್ಲಿ ಹಿರಿಯರಾಗಿದ್ದರೂ ಅತ್ಯಂತ ಸ್ನೇಹಮಯ ವ್ಯಕ್ತಿತ್ವ ಅವರದ್ದು. ಅವರಿಗೆ ಪತ್ನಿ ಸುಭದ್ರಾ, ಹಾಗೂ ಮೂವರು ಹೆಣ್ಣುಮಕ್ಕಳಿದ್ದಾರೆ. ಸೋಮವಾರ ಅಂತ್ಯ ಕ್ರಿಯೆ ನೆರವೇರಿಸಲಿದ್ದೇವೆ ಎಂದು ವೆಂಕಟೇಶ್ ಸಂಬಂಧಿಕರೊಬ್ಬರು ತಿಳಿಸಿದರು. ವೆಂಕಟೇಶ್ ಅವರ ಪುತ್ರಿಯರ ಆಕ್ರಂದನ ಮುಗಿಲು ಮುಟ್ಟಿತ್ತು.