Advertisement

ಪಡೀಲ್‌ ಪರಿಸರದಲ್ಲಿ ನೆರೆ ಸಮಸ್ಯೆ; ಶಾಶ್ವತ ಪರಿಹಾರ ಅಗತ್ಯ

02:35 PM Aug 01, 2022 | Team Udayavani |

ಮಹಾನಗರ: ಮುಂಗಾರು ಬಿರುಸು ಪಡದು ಮಂಗಳೂರು ನಗರದಲ್ಲಿ ಶನಿವಾರ ಸುರಿದ ಭಾರೀ ಮಳೆಗೆ ಪಡೀಲ್‌ ಪರಿಸರದಲ್ಲಿ ಕೃತಕ ನೆರೆಯಿಂದಾಗಿ ಅವಾಂತರ ಸೃಷ್ಟಿಯಾಗಿತ್ತು. ಕೆಲವು ವರ್ಷಗಳಿಗೆ ಹೋಲಿಸಿದರೆ ಪಡೀಲ್‌ ಪರಿಸರದಲ್ಲಿ ಈ ವರ್ಷದ ಭಾರೀ ಮಳೆಗೆ ಉಂಟಾದ ನೆರೆ ವ್ಯಾಪಕವಾಗಿತ್ತು. ಈ ಸಮಸ್ಯೆಯಿಂದ ಸುತ್ತಲಿನ ಸಾರ್ವಜನಿಕರು ಸಂಕಷ್ಟಪಡುತ್ತಿದ್ದು, ಶಾಶ್ವತ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.

Advertisement

ಸುಮಾರು 20 ವರ್ಷಗಳ ಹಿಂದೆ ಪಡೀಲ್‌, ಕಣ್ಣೂರು, ಅಡ್ಯಾರ್‌ ಪ್ರದೇಶ ಗದ್ದೆಯಿಂದ ಕೂಡಿತ್ತು. ಸದ್ಯ ವಿಶಾಲ ಗದ್ದೆಗಳಿಗೆ ಮಣ್ಣು ತುಂಬಿಸಿ ಕಟ್ಟಡಗಳನ್ನು ಕಟ್ಟಲಾಗಿದೆ. ನೀರಿನ ತೋಡುಗಳು ಮಾಯವಾಗಿವೆ. ಕಾಲಾನುಕ್ರಮೇಣ ಬಹುಮಹಡಿ ಕಟ್ಟಡಗಳು ಸುತ್ತಲೂ ತಲೆ ಎತ್ತಿದೆ. ಸಣ್ಣ ಓಣಿ ರಸ್ತೆಗಳು ಅಗಲಗೊಂಡಿದೆ. ಹೆದ್ದಾರಿಯೂ ಚತುಷ್ಪತಗೊಂಡಿದೆ. ಆದರೆ ಸುಮಾರು ಐದು ಕಿಲೋ ಮೀಟರ್‌ ದೂರದಿಂದ ಹರಿದು ಬರುವ ರಾಜಕಾಲುವೆ ಮಾತ್ರ ಇನ್ನೂ ವಿಸ್ತರಣೆಗೊಂಡಿಲ್ಲ. ಇದೇ ಕಾರಣಕ್ಕೆ ನೆರೆ ನೀರು ರಾಜಕಾಲುವೆಯಲ್ಲಿ ಸರಾಗವಾಗಿ ಹರಿಯದೆ ರಸ್ತೆಗೆ ನುಗ್ಗುತ್ತಿದೆ.

ಕಿರಿದಾದ ರಾಜಕಾಲುವೆ!

ಇಲ್ಲಿನ ರಾಜಕಾಲುವೆಗೆ ಸರಿಪಲ್ಲ, ಕನ್ನಡಗುಡ್ಡೆ ಸೇರಿ ಸುಮಾರು ಐದು ಕಿ.ಮೀ. ವ್ಯಾಪ್ತಿ ನೀರು ಹರಿದು ಬರುತ್ತದೆ. ಈ ರಾಜಕಾಲುವೆ ತೀರಾ ಕಿರಿದಾಗಿದೆ. ನೀರಿನ ರಭಸ ತಡೆಯುವ ಶಕ್ತಿ ಕಾಲುವೆಗಳಿಗಿಲ್ಲ. ಪರಿಣಾಮ, ಪಡೀಲ್‌ ಬಳಿ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯದೆ ರಸ್ತೆಗೆ ನುಗ್ಗಿ ಸಮಸ್ಯೆಗೆ ಕಾರಣವಾಗುತ್ತದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ. ಹೀಗಿದ್ದಾಗ, ಸಮಸ್ಯೆಗೆ ಪರಿಹಾರ ಶೀಘ್ರ ದೊರಕಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಅಧಿಕಾರಿಗಳಿಂದ ಪರಿಶೀಲನೆ

Advertisement

ಸ್ಥಳೀಯ ಮನಪಾ ಸದಸ್ಯೆ ಚಂದ್ರಾವತಿ “ಸುದಿನ’ಕ್ಕೆ ಪ್ರತಿಕ್ರಿಯಿಸಿ,” ಪಡೀಲ್‌, ಕೊಡಕ್ಕಲ್‌ ಸುತ್ತಲಿನ ಪ್ರದೇಶ ಈ ಹಿಂದೆ ಗದ್ದೆಯಿಂದ ಕೂಡಿತ್ತು. ಸದ್ಯ ಅಭಿವೃದ್ಧಿ ಹೊಂದಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ವೇಳೆ ಇಲ್ಲಿನ ರಾಜಕಾಲುವೆ ವಿಸ್ತ ರಣೆಗೊಂಡಿಲ್ಲ. ಇದೇ ಕಾರಣಕ್ಕೆ ನೀರು ಸಮರ್ಪಕವಾಗಿ ಹರಿಯುವುದಿಲ್ಲ. ಈಗಾಗಲೇ ಎರಡು ಬಾರಿ ರಾಜಕಾಲುವೆ ಹೂಳೆತ್ತಲಾಗಿದೆ. ಆದರೂ ಶನಿವಾರ ಸುರಿದ ಭಾರೀ ಮಳೆಗೆ ತೋಡಿನಲ್ಲಿ ಒಂದು ಲೋಡ್‌ ಕಸ ಸಂಗ್ರಹವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಎನ್‌ಐಟಿಕೆ ತಜ್ಞರು, ಸಣ್ಣ ನೀರಾವರಿ ಇಲಾಖೆ ಮತ್ತು ಪಾಲಿಕೆ ಅಧಿಕಾರಿಗಳು ಕೆಲ ದಿನಗಳ ಹಿಂದೆ ಈ ಪ್ರದೇಶ ಪರಿಶೀಲಿಸಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ಭರವಸೆ ಇದೆ’ ಎನ್ನುತ್ತಾರೆ.

ಸದ್ಯದಲೇ ಹೆದ್ದಾರಿ ಪ್ರಾಧಿಕಾರ ಸಭೆ: ಕೆಲವು ದಿನಗಳ ಹಿಂದೆ ಎರಡು ಬಾರಿ ಸುರಿದ ಬಿರುಸಿನ ಮಳೆಗೆ ಪಡೀಲ್‌ ಸುತ್ತಲಿನ ಪ್ರದೇಶ ಜಲಾವೃತ ಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಗಿತ್ತು. ಇಲ್ಲಿನ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹೋಗದಿರುವುದು ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ಸದ್ಯದಲ್ಲೇ ಪಾಲಿಕೆಯಿಂದ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಸಭೆ ಕರೆದು ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. –ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next