Advertisement

ತ್ಯಾಜ್ಯ ಸಮಸ್ಯೆ ಪರಿಹಾರಕ್ಕೆ ತಜ್ಞರ ಸಮಿತಿ

12:49 PM Apr 23, 2018 | |

ಬೆಂಗಳೂರು: ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಘಟಕಗಳ ಸಮರ್ಪಕ ನಿರ್ವಹಣೆಗೆ ಶಿಫಾರಸುಗಳನ್ನು ಪಡೆಯಲು ಹೈಕೋರ್ಟ್‌ ಆದೇಶದಂತೆ ನಾಲ್ವರು ತಜ್ಞರನ್ನೊಳಗೊಂಡ ತಾಂತ್ರಿಕ ಸಮಿತಿಯನ್ನು ಬಿಬಿಎಂಪಿ ರಚಿಸಿದೆ. 

Advertisement

ನಗರದಲ್ಲಿ ತ್ಯಾಜ್ಯ ವಿಲೇವಾರಿ ವೈಜ್ಞಾನಿಕವಾಗಿ ಆಗುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಇತ್ತೀಚೆಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಬಿಬಿಎಂಪಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತಲ್ಲದೆ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗಾಗಿ ತಜ್ಞರ ಸಮಿತಿ ರಚಿಸಿ, ಸಮಿತಿ ನೀಡುವ ಶಿಫಾರಸುಗಳನ್ನು ಅನುಷ್ಠಾನಗೊಳಿಸುವಂತೆ ಪಾಲಿಕೆಗೆ ಸೂಚಿಸಿತ್ತು. 

ಅದರಂತೆ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಸೆಲ್ವಕುಮಾರ್‌, ಕೆಸಿಡಿಸಿ ಮಾಜಿ ನಿರ್ದೇಶಕ ಬಸವಯ್ಯ, ವ್ಯಾಪ್‌ಕೋಸ್‌ ಸಂಸ್ಥೆಯ ವಿಶ್ವನಾಥ್‌ ನಾಯರ್‌, ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಶಿವಕುಮಾರ್‌ ಬಾಬು ಅವರನ್ನೊಳಗೊಂಡ ತಾಂತ್ರಿಕ ಸಮಿತಿ ರಚಿಸಿರುವ ಪಾಲಿಕೆ, ತ್ಯಾಜ್ಯ ಘಟಕಗಳ ನಿರ್ವಹಣೆಗೆ ಸಮಿತಿ ನೀಡುವ ಸಲಹೆಗಳ ಮೂಲಕ ನಗರದಲ್ಲಿನ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. 

ಸಮಿತಿಯು ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ವಿಧಾನ, ಘಟಕಗಳ ಸುತ್ತಲೂ ಬಫ‌ರ್‌ ವ್ಯಾಪ್ತಿ ಕಾಯ್ದುಕೊಳ್ಳುವುದು, ಮಿಥೇನ್‌ ಗ್ಯಾಸ್‌ ಸೃಷ್ಟಿ, ತ್ಯಾಜ್ಯ ನೀರು (ಲಿಚೆಟ್‌) ನಿರ್ವಹಣೆ, ದುರ್ವಾಸನೆ ಹರಡುವುದನ್ನು ತಡೆಯುವ ಕುರಿತು ಬಿಬಿಎಂಪಿಗೆ ಸಲಹೆಗಳನ್ನು ನೀಡಲಿದ್ದು, ಇದನ್ನು ಆಧರಿಸಿ ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಕಾರ್ಯಕ್ರಮ ರೂಪಿಸಬೇಕಿದೆ.

ಗರಂ ಆಗಿದ್ದ ಕೋರ್ಟ್‌: ಸರ್ಕಾರದ ವತಿಯಿಂದ 250 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ 6 ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಾಗಿದ್ದರೂ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿಯಾಗದೆ ಕ್ವಾರಿಗಳಿಗೆ ಸೇರುತ್ತಿದೆ. ಜತೆಗೆ ಹಲವು ಘಟಕಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ ಘಟಕಗಳನ್ನು ಸ್ಥಗಿತಗೊಳಿಸಿರುವ ಬಗ್ಗೆ ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

Advertisement

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ, ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಸ್ಥಗಿತಗೊಂಡಿರುವ ತ್ಯಾಜ್ಯ ಘಟಕಗಳನ್ನು ಮಾರ್ಷಲ್‌ಗ‌ಳನ್ನು ನೇಮಿಸಿಕೊಂಡು ಪುನಾರಂಭಿಸುವಂತೆ ಸೂಚಿಸಿತ್ತು. ಜತೆಗೆ, ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ತಜ್ಞರ ಸಮಿತಿಯಿಂದ ಶಿಫಾರಸುಗಳನ್ನು ಪಡೆಯುವಂತೆಯೂ ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿತ್ತು.

ಸಮಿತಿ ರಚನೆ ಉದ್ದೇಶವೇನು?: ಸಾರ್ವಜನಿಕ ಹಿತ ಹಾಗೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ತ್ಯಾಜ್ಯ ಸಂಸ್ಕರಣಾ ಘಟಕಗಳು ವೈಜ್ಞಾನಿಕವಾಗಿ ಕಾರ್ಯನಿರ್ವಹಿಸಬೇಕಿದೆ. ಹೀಗಾಗಿ ತ್ಯಾಜ್ಯ ಸಂಸ್ಕರಣೆ, ವಿಲೇವಾರಿ, ತಾಂತ್ರಿಕ ಲೋಪದೋಷಗಳು ಸೇರಿದಂತೆ ಇನ್ನಿತರ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ಅಗತ್ಯ ಶಿಫಾರಸುಗಳನ್ನು ನೀಡುವ ಮೂಲಕ ನಗರದಲ್ಲಿನ ತ್ಯಾಜ್ಯ ಸಮಸ್ಯೆಗೆ ಪರಿಹಾರಕ್ಕೆ ಸಲಹೆಗಳನ್ನು ನೀಡಲು ಸಮಿತಿ ರಚಿಸಲಾಗಿದೆ. 

ಸಮಿತಿಯಿಂದ ಕಾರ್ಯಾಗಾರ: ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಸಲಹೆಗಳನ್ನು ಪಡೆಯಲು ಪಾಲಿಕೆಯಿಂದ ರಚಿಸಲಾಗಿರುವ ನಾಲ್ವರು ಸದಸ್ಯರ ಸಮಿತಿಯು ಏ.25ರಂದು ಪಾಲಿಕೆಯ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು, ಘಟಕಗಳ ಎಂಜಿನಿಯರ್‌ಗಳು, ಕೆಲಸ ಮಾಡುವ ಸಿಬ್ಬಂದಿಗೆ ಸಮಸ್ಯೆಗಳ ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಸಮಿತಿ ಪರಿಶೀಲಿಸಲಿರುವ ವಿಷಯಗಳು
* ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ವಿಧಾನ
* ಘಟಕಗಳ ಸುತ್ತಲೂ ಬಫ‌ರ್‌ ವ್ಯಾಪ್ತಿ ಕಾಯ್ದುಕೊಳ್ಳುವುದು
* ಮಿಥೇನ್‌ ಗ್ಯಾಸ್‌ ಸೃಷ್ಟಿಯಾಗುವ ಕುರಿತು 
* ತ್ಯಾಜ್ಯ ನೀರು (ಲಿಚೆಟ್‌) ನಿರ್ವಹಣೆ
* ದುರ್ವಾಸನೆ ಹರಡುವುದನ್ನು ತಡೆಯುವುದು 

ನಗರದಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಆಗುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೈಕೋರ್ಟ್‌ ಆದೇಶದಂತೆ ನಾಲ್ವರು ತಜ್ಞರನ್ನು ತಾಂತ್ರಿಕ ಸಮಿತಿಗೆ ನೇಮಿಸಲಾಗಿದೆ. ಸಮಿತಿಯು ಪಾಲಿಕೆಯ ಘಟಕಗಳಲ್ಲಿನ ಸಮಸ್ಯೆಗಳ ಕುರಿತು ಸಮಿತಿ ಅಧ್ಯಯನ ನಡೆಸಿ ಪರಿಹಾರ ಕ್ರಮಗಳನ್ನು ಸೂಚಿಸಲಿದ್ದು, ಏ.25ರಂದು ಪಾಲಿಕೆಯ ಘನತ್ಯಾಜ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಒಂದು ದಿನದ ಕಾರ್ಯಾಗಾರ ನಡೆಸಲಿದೆ. 
-ಸಫ್ರಾಜ್‌ ಖಾನ್‌, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ 

Advertisement

Udayavani is now on Telegram. Click here to join our channel and stay updated with the latest news.

Next