Advertisement

ಹಳೇ ಕ್ಲೈಮ್ಯಾಕ್ಸ್‌ಗೊಂದು ಹೊಸ ಟ್ವಿಸ್ಟ್‌

05:56 PM Aug 10, 2018 | Team Udayavani |

“ಒಬ್ಬಳು ಅವನ ಲೈಫ‌ಲ್ಲಿ ಆ್ಯಂಟಿ ಕ್ಲೈಮ್ಯಾಕ್ಸ್‌ ಬರೆದರೆ, ಇನ್ನೊಬ್ಬಳು ಅವನ ಲೈಫ್ಗೆ ಹೊಸ ಕ್ಲೈಮ್ಯಾಕ್ಸ್‌ ಬರೀತಾಳೆ…’ ಇಷ್ಟು ಹೇಳಿದ ಮೇಲೆ ಇದೊಂದು ತ್ರಿಕೋನ ಪ್ರೇಮ ಕಥೆ ಇರಬೇಕೆಂದು ಊಹಿಸಿದರೆ ಅದು ತಪ್ಪು. ಸಿನಿಮಾ ಅಂದಮೇಲೆ ಕ್ಲೈಮ್ಯಾಕ್ಸ್‌ ಇರಲೇಬೇಕು. ಆದರೆ, ಈ ಸಿನಿಮಾದಲ್ಲಿ ಒಂದಲ್ಲ, ಎರಡು ಕ್ಲೈಮ್ಯಾಕ್ಸ್‌ಗಳಿವೆ. ಸಿನಿಮಾದಲ್ಲಿ ಕೆಟ್ಟದ್ದು, ಒಳ್ಳೇದು ಇರುವಂತೆ, ಈ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲೂ ಒಳ್ಳೇದು, ಕೆಟ್ಟದ್ದು ಇದೆ. ಹಾಗಂತ, ಅದು ರುಚಿಸುತ್ತಾ? ಈ ಪ್ರಶ್ನೆಗೆ ಉತ್ತರಿಸೋದು ಕಷ್ಟ. ಇಲ್ಲಿ ವಿಶೇಷವೇನಿದೆ ಅಂತ ಕೇಳುವಂತಿಲ್ಲ.

Advertisement

ಹಾಗೆ ಹೇಳುವಂತೆಯೂ ಇಲ್ಲ. ಒಂದು ಸಣ್ಣ ಕಥೆಯನ್ನು ಹಿಗ್ಗಾ ಮುಗ್ಗಾ ಎಳೆಯಲಾಗಿದೆಯಷ್ಟೇ. ಇಡೀ ಸಿನಿಮಾದಲ್ಲಿ ಏನೇನಿದೆ ಅನ್ನುವುದಕ್ಕಿಂತ ಕೊನೆಯಲ್ಲಿ ಒಂಚೂರು ಸಂದೇಶವಿದೆ. ಅದೊಂದೇ ಚಿತ್ರದ ತೂಕ. ಆದರೆ, ಇಡೀ ಚಿತ್ರದ “ಭಾರ’ ಹೊರುವಷ್ಟು ತೂಕವಂತೂ ಇಲ್ಲ! ಇದೊಂದು ನಂಬಿಕೆ, ಪ್ರೀತಿ, ಸಂಬಂಧ ಮತ್ತು ಬದುಕಿನ ಮೌಲ್ಯ ಕುರಿತಾದ ಚಿತ್ರಣ ಹೊಂದಿದೆ. ಇಲ್ಲಿ ಸ್ವಾರ್ಥವಿದೆ, ನಿಸ್ವಾರ್ಥವೂ ಇದೆ. ಅಪನಂಬಿಕೆ ಹಿಂದಿನ ನೋವು ನಲಿವುಗಳ ಗಂಟು ಅಪಾರವಾಗಿದೆ. ಅದನ್ನೇ ನಂಬಿ  ಕೂತು ನೋಡುವ ಪ್ರೇಕ್ಷಕನಿಗೆ ಮನರಂಜನೆ ಗಗನ ಕುಸುಮ.

ಕೆಲವೆಡೆ ಇದು ಸಿನಿಮಾನಾ ಅಥವಾ ಡಾಕ್ಯುಮೆಂಟರಿನಾ ಎಂಬ ಅನುಮಾನ ಕಾಡದೇ ಇರದು. ಅಷ್ಟರಮಟ್ಟಿಗೆ ಕೆಲ ದೃಶ್ಯಗಳು ನೋಡುಗರ ಮೇಲೆ “ಗಾಢ’ ಪರಿಣಾಮ ಬೀರುತ್ತವೆ. ನಿರ್ದೇಶಕಿ ಡಾ.ಶ್ಯಾಲಿ ಅವರಿಗೆ ಕಥೆ ಮೇಲಿರುವ ಹಿಡಿತ, ಚಿತ್ರಕಥೆ ಮತ್ತು ನಿರೂಪಣೆ ಮೇಲಿದಿದ್ದರೆ, ಬಹುಶಃ “ಕ್ಲೈಮ್ಯಾಕ್ಸ್‌’ ಭಾಗವನ್ನಾದರೂ ತೃಪ್ತಿ ಪಡಿಸಬಹುದಿತ್ತು. ಅಂಥದ್ದೊಂದು ಅವಕಾಶ ತಪ್ಪಿಹೋಗಿದೆ. ಒಂದು ಮನೆ, ಒಂದು ಕಚೇರಿ, ಒಂದಷ್ಟು ಪಾತ್ರಗಳ ಸುತ್ತವೇ ಕಥೆ ಗಿರಕಿ ಹೊಡೆಯುವುದರಿಂದ ಎಲ್ಲವೂ ಗೌಣ ಎನಿಸತೊಡಗುತ್ತದೆ.

ಮೊದಲರ್ಧ ದೃಶ್ಯಗಳು ಎಷ್ಟು ನಿಧಾನವಾಗಿ ಸಾಗುತ್ತವೋ, ದ್ವಿತಿಯಾರ್ಧದ ದೃಶ್ಯಗಳೂ ಮೊದಲರ್ಧಕ್ಕೆ ಹೊರತಾಗಿಲ್ಲ. ನಾಯಕ, ನಾಯಕಿ ನಡುವಿನ ಒಂದೆರೆಡು ದೃಶ್ಯಗಳು ಮಜ ಎಂಬುದನ್ನು ಹೊರತುಪಡಿಸಿದರೆ, ಮಿಕ್ಕಿದೆಲ್ಲವೂ ಸಜ ಎನಿಸುವುದು ಅಷ್ಟೇ ನಿಜ. ಆ “ಮಜ’ ದೃಶ್ಯಗಳನ್ನು ನೋಡುವ ಕಾತುರವಿದ್ದರೆ “ಕ್ಲೈಮ್ಯಾಕ್ಸ್‌’ನ ಸಾಹಸ ನೋಡಿ ಬರಬಹುದು. ನಾಯಕಿ ಪ್ರಿಯಾಂಕಗೆ ತಾನೊಬ್ಬ ಇಂಟರ್‌ನ್ಯಾಷನಲ್‌ ಮಾಡೆಲ್‌ ಆಗಬೇಕು, ಹಣ, ಆಸ್ತಿ ಸಂಪಾದಿಸಬೇಕೆಂಬ ಆಸೆ. ಅತ್ತ ಜಿಮ್‌ ತರಬೇತುಗಾರನಾಗಿರುವ ನಾಯಕ ನರೇಶ್‌ಗೂ ತಾನೊಬ್ಬ ಸಿನಿಮಾ ನಟ ಆಗಬೇಕೆಂಬ ಆಸೆ.

ಇಬ್ಬರ ಮೊದಲ ನೋಟ, ಸ್ನೇಹಕ್ಕೆ ತಿರುಗಿ, ಅದು ಪ್ರೀತಿಗೂ ಮುನ್ನುಡಿ ಬರೆಯುತ್ತೆ. ಅವನನ್ನು ಹೀರೋ ಮಾಡಿಸುವುದಾಗಿ ನಂಬಿಸೋ ಪ್ರಿಯಾಂಕ, ತನ್ನೊಂದಿಗೆ ಇರು ಎಂಬ ಷರತ್ತು ಹಾಕುತ್ತಾಳೆ. ನಟನಾಗುವ ಆಸೆಯಿಂದ ಅವಳೊಂದಿಗೆ ವಾಸ ಮಾಡಲು ಶುರುಮಾಡುವ ನರೇಶನಿಗೆ ದಿನ ಕಳೆದಂತೆ ತಾನು ಅವಳ ಸೇವೆ ಮಾಡುತ್ತಿದ್ದೇನೆ ಎಂಬ ಬೇಸರ. ಅತ್ತ ಆಕೆ, ಇವನನ್ನು ಕೈ ಬಿಟ್ಟು ಮಾಡೆಲ್‌ ಆಗುವ ಆಸೆಯಿಂದ ಮುಂಬೈಗೆ ಹಾರುತ್ತಾಳೆ. ಈ ಮಧ್ಯೆ ತನಗಿಂತ ವಯಸ್ಸಿನಲ್ಲಿ ಹಿರಿಯವಳಾದ ಡಾ. ಶ್ಯಾಲಿ ಎಂಬ ಉದ್ಯಮಿ ಹಾಗು ಸಮಾಜ ಸೇವಕಿ ಜೊತೆ ಪರಿಚಯ ಬೆಳೆಸಿಕೊಳ್ಳುವ ನಾಯಕ, ಶ್ಯಾಲಿಯ ಒಳ್ಳೇತನ,

Advertisement

ಬದುಕನ್ನು ಪ್ರೀತಿಸುವ ಕುರಿತಾದ ಪಾಠ ಕೇಳಿ, ಕ್ರಮೇಣ ಅವಳ ಕಂಪೆನಿಯಲ್ಲೇ ಕೆಲಸ ಮಾಡುತ್ತ, ಅವಳನ್ನು ಪ್ರೀತಿಸತೊಡಗುತ್ತಾನೆ. ಈ ಮಧ್ಯೆ ಕೆಲ ತಿಂಗಳ ಬಳಿಕ ಮಾಡೆಲ್‌ ಹಿಂದಿರುಗುತ್ತಾಳೆ. ಆಗ, ಅವನು ಶ್ಯಾಲಿ ಜೊತೆ ಇರುತ್ತಾನಾ, ಪ್ರಿಯಾಂಕ ಜೊತೆ ಹೋಗುತ್ತಾನಾ ಎಂಬುದು ಕಥೆ. ಈ ಬಗ್ಗೆ ನೋಡುವ ಸಣ್ಣ ಕುತೂಹಲವಿದ್ದರೆ, ನೋಡಬಹುದು. ನಾಯಕ ನರೇಶ್‌ ಇಲ್ಲಿ ತನ್ನ ಜಿಮ್‌ ಬಾಡಿ ತೋರಿಸಿರುವುದೇ ನಟನೆ ಅಂದುಕೊಂಡಿದ್ದಾರೆ. ಪ್ರತಿ ಫ್ರೆಮ್‌ನಲ್ಲೂ ದೇಹ ಪ್ರದರ್ಶಿಸಿರುವುದೇ ಅವರ ಹೆಚ್ಚುಗಾರಿಕೆ.

ಅವರ ನಟನೆಯಾಗಲಿ, ಬಾಡಿಲಾಂಗ್ವೇಜ್‌ ಬಗ್ಗೆಯಾಗಲಿ ಹೇಳುವುದೇನೂ ಇಲ್ಲ. ಅನಿತಾ ಭಟ್‌ ಇಲ್ಲಿ ಗ್ಲಾಮರಸ್‌ ಆಗಿರುವುದೇ ಪ್ಲಸ್‌. ಅವರ ನಟನೆಗೆ ಇಲ್ಲಿ ಸ್ಕೋಪ್‌ ಇರದಿದ್ದರೂ, ಬೋಲ್ಡ್‌ ಆಗಿ ರೊಮ್ಯಾನ್ಸ್‌ ಮಾಡುವ ವಿಷಯದಲ್ಲಂತೂ ಹಿಂದೆ ಬಿದ್ದಿಲ್ಲ. ಡಾ.ಶ್ಯಾಲಿ ಮಾಡಿದ್ದೇ ನಟನೆ, ಹೇಳಿದ್ದೇ ಡೈಲಾಗು. ಒಂದೇ ಸಮನೆ ಸಂಭಾಷಣೆ ಹೇಳುವ ಕಡೆ ಕೊಟ್ಟ ಗಮನ, ನಟನೆಯಲ್ಲೂ ಕೊಡಬಹುದಿತ್ತು. ಉಳಿದಂತೆ ಬಂದು ಹೋಗುವ ಪಾತ್ರಗಳ್ಯಾವೂ ಹೆಚ್ಚು ಗಮನಸೆಳೆಯಲ್ಲ. ಮಾರುತಿ ಸಂಗೀತದ ಬಗ್ಗೆ ಏನನ್ನೂ ಹೇಳುವಂತಿಲ್ಲ. ಗೌರಿ ವೆಂಕಟೇಶ್‌ ಕ್ಯಾಮೆರಾದಲ್ಲಿ “ಕ್ಲೈಮ್ಯಾಕ್ಸ್‌’ ಓಕೆ.

ಚಿತ್ರ: ಹೊಸ ಕ್ಲೈಮ್ಯಾಕ್ಸ್‌
ನಿರ್ದೇಶನ, ನಿರ್ಮಾಣ: ಡಾ. ಶ್ಯಾಲಿ
ತಾರಾಗಣ: ನರೇಶ್‌ ಗಾಂಧಿ, ಅನಿತಾಭಟ್‌, ಡಾ. ಶ್ಯಾಲಿ, ಎಂ.ಡಿ.ಕೌಶಿಕ್‌, ಶರತ್‌ ಮುಂತಾದವರು

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next