ಲಾಕ್‌ಡೌನ್‌ನಿಂದಾಗಿ ಜಗತ್ತೇ ಆರ್ಥಿಕ ಕುಸಿತದಿಂದಾಗಿ ಕೈಚೆಲ್ಲಿ ಕುಳಿತ ಹೊತ್ತು. ಮುಂಬೈನಲ್ಲಿರುವ ಕನ್ನಡತಿ ಶ್ರೀಮತಿ ಅಪರ್ಣಾ ರಾವ್- “ನಾನೂ ಬೆಳೆಯಬೇಕು. ಜೊತೆಗೆ ಬೇರೆಯವರನ್ನೂ ಬೆಳೆಸಬೇಕು’ ಎಂಬ ಉದ್ದೇಶದಿಂದ ಫೇಸ್ ಬುಕ್‌ನಲ್ಲಿ ಮೇ 25ರಂದು “ಮಹಿಳಾ ಮಾರುಕಟ್ಟೆ’ ಎಂಬ ಗುಂಪು ಆರಂಭಿಸಿ ದರು. ಮುಂದೆ ಆದದ್ದು ಪವಾಡ! ದಿನದಿಂದ ದಿನಕ್ಕೆ ಸದಸ್ಯರ ಸಂಖ್ಯೆ ಬೆಳೆಯತೊಡಗಿತು. ಕೆಲವೇ ದಿನಗಳಲ್ಲಿ ಶೋಭಾ ರಾವ್ ಮತ್ತು ಸಮೀಕ್ಷಾ ಚರ್ಚಾನಿರ್ವಾಹಕರಾಗಿ ಕೈಜೋಡಿಸಿ ದರು. ಇಂದಿಗೆ ಗುಂಪಿನ ಸದಸ್ಯರ ಸಂಖ್ಯೆ ಹನ್ನೆರಡು ಸಾವಿರ ದಾಟಿದೆ. ಇದು ಮಹಿಳೆಯ ರಿಂದಲೇ, ಮಹಿಳೆಯರಿಗಾಗಿ, ಮಹಿಳೆಯರೇ ನಿರ್ವಹಿಸುತ್ತಿರುವ, “ಮಹಿಳಾಮಾರುಕಟ್ಟೆ’ ಎಂಬ ಫೇಸ್‌ಬುಕ್ ಗುಂಪಿನ ಯಶೋಗಾಥೆ!
ವಿಚಾರ ವಿನಿಮಯ : ಮನೆಯೊಳಗೆ ಇದ್ದುಕೊಂಡೇ ತಮ್ಮನ್ನು ಆರ್ಥಿಕವಾಗಿ ಸಬಲರಾಗಿಸಿಕೊಳ್ಳಲು ಬಯಸುವ ಹೆಣ್ಮಕ್ಕಳಿಗೆ “ಮಹಿಳಾ ಮಾರುಕಟ್ಟೆ’ ಒಂದು ಉತ್ತಮ ವೇದಿಕೆಯನ್ನು ಒದಗಿಸಿದೆ. ಆಹಾರೋತ್ಪನ್ನಗಳು, ಕೃಷಿ ಉತ್ಪನ್ನಗಳು, ವಸ್ತ್ರಾಭರಣ, ಕರಕುಶಲವಸ್ತುಗಳು – ಇವೆಲ್ಲವೂ ರಾಜ್ಯದ ಉದ್ದಗಲದ ಮಹಿಳೆಯರ ನಡುವೆ ವಿನಿಮಯವಾಗುತ್ತಿವೆ. ಮಹಿಳಾ ಮಾರುಕಟ್ಟೆ ಕೇವಲ ವಸ್ತುಗಳ ವಿನಿಮಯಕ್ಕಷ್ಟೇ ಸೀಮಿತವಾಗಿಲ್ಲ. ವಾರಕ್ಕೊಂದು ದಿನ ಆನ್ ಲೈನ್ ಕ್ಲಾಸ್‌ಗಳ, ವೃತ್ತಿ ಸಂಬಂಧ ಸೇವೆಗಳ, ಟೈಲರಿಂಗ್ ಸೇವೆಗಳ ವಿಷಯಗಳನ್ನು ಬಿತ್ತರಿಸುತ್ತದೆ. ಮತ್ತೂಂದು ದಿನ ಸಲಹೆ ಸೂಚನೆ, ಅನುಭವ ಹಂಚಿಕೆ, ಚಿಂತನ, ಮಂಥನಕ್ಕೂ ಅವಕಾಶ ಕೊಡಲಾಗಿದೆ. ಕೊಳ್ಳುಗರು ಮತ್ತು ಮಾರಾಟಗಾರರಿಗೆ ಆದ ಸಮಸ್ಯೆಗಳನ್ನು ಆ ದಿನ ಹೇಳಿಕೊಂಡು ಪರಿಹರಿಸಿಕೊಳ್ಳುವ ಅವಕಾಶವಿದೆ. ಅಷ್ಟೇ ಅಲ್ಲ, ಸ್ವಂತ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಆಗಾಗ ಫೇಸ್ ಬುಕ್ ಲೈವ್ ಮೂಲಕ ವಿಚಾರ ವಿನಿಮಯಕ್ಕೆ ಆಹ್ವಾನಿಸಲಾಗುತ್ತದೆ. ಗುಂಪಿನೊಳಗೇ ಇರುವ ಪರಿಣಿತ ಮಹಿಳೆಯರು ತಮ್ಮ ಕುಶಲತೆ ಮತ್ತು ಅನುಭವವನ್ನು, ಫೇಸ್‌ಬುಕ್ ಲೈವ್ ನಲ್ಲಿ ಹೇಳಿಕೊಳ್ಳುತ್ತಾರೆ.
ದುಬಾರಿ ಸಾಗಾಣಿಕೆ ವೆಚ್ಚ : ಇಲ್ಲಿ ಸಮಸ್ಯೆಗಳು ಇಲ್ಲವೆಂದಲ್ಲ. ಮಹಿಳಾ ಉದ್ಯಮಿಗಳಿಗೆ ಹೊರೆಯಾಗುತ್ತಿರುವುದು ಕೊರಿಯರ್ ವೆಚ್ಚ. ಲಾಕ್‌ಡೌನ್‌ನಿಂದಾಗಿ, ಕೊರಿಯರ್ ಕಂಪನಿಗಳು ತಮ್ಮ ಸಾಗಾಣಿಕೆ ವೆಚ್ಚವನ್ನು ಏರಿಸಿವೆ. ದುಬಾರಿ ಸಾಗಾಣಿಕೆ ವೆಚ್ಚವನ್ನು ನೀವೇ ಭರಿಸಿ ಎಂದರೆ ಗ್ರಾಹಕರೂ ಒಪ್ಪುವುದು ಕಷ್ಟ. ಈಗ ಮಾಡುವುದೇನು ಎಂದುಕೊಂಡಾಗ ಕಾಣಿಸಿದ್ದೇ- ಭಾರತೀಯ ಅಂಚೆ ಇಲಾಖೆ. ನಾರೀ ಮಣಿಯರು ತಡಮಾಡಲಿಲ್ಲ. ಸೀದಾ ಅಂಚೆ ಕಛೇರಿಯತ್ತ ಮುಖಮಾಡಿ ದರು. ತಾವೇ ಪ್ಯಾಕಿಂಗ್ ಮಾಡಲು ಕಲಿತರು. ಅಂಚೆಯ ಮೂಲಕವೇ ಗ್ರಾಹಕರಿಗೆ ವಸ್ತುಗಳನ್ನು ಕಳುಹಿಸಿ, ಅದರಲ್ಲಿ ಯಶಸ್ಸನ್ನೂ ಕಂಡರು. ನಗರ ವ್ಯಾಪ್ತಿಯ ಹೆಣ್ಮಕ್ಕಳು ಡುನ್ಜೋ, ಟೆಲಿಪೋರ್ಟ್ ವ್ಯವಸ್ಥೆಗಳನ್ನು ಉಪಯೋಗಿಸಲು ಕಲಿತರು. ಈಗ ಮಹಿಳಾ ಮಾರುಕಟ್ಟೆಯ ಒಳಬಂದ ಪ್ರತಿಯೊಬ್ಬ ಮಹಿಳೆಗೂ- “ಇಲ್ಲಿ ನಾನೇನು ಮಾರಬಲ್ಲೇ? ಯಾವ ವಸ್ತು ತಯಾರಿಸುವುದರಲ್ಲಿ ನಾನು ನಿಪುಣಳಿರುವೆ? ಇಲ್ಲಿರುವ ಯಾವ ವಸ್ತು ನನಗೆ ಬೇಕು?’ ಎಂಬೆಲ್ಲಾ ಪ್ರಶ್ನೆಗಳು ಮನದೊಳಗೇ ಗುಂಯ್ಯುಡಲಾ ರಂಭಿಸುತ್ತವೆ. ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳುವ ಹಲವು ಮಹಿಳೆಯರನ್ನು ನೋಡುವಾಗ, ಉಳಿದವರಿಗೂ ಉತ್ಸಾಹ ಉಕ್ಕುತ್ತಿದೆ. ಈ ಮೂಲಕ ಆತ್ಮ ನಿರ್ಭರ ಭಾರತದತ್ತ ಮಹಿಳೆಯರೂ ಒಂದು ಹೆಜ್ಜೆ ಇರಿಸಿದ್ದಾರೆ. ಇಂಥದೊಂದು ತಂಡ ಕಟ್ಟಿದ ಅಪರ್ಣಾ ರಾವ್ ಮತ್ತು ಆಡಳಿತ ವರ್ಗದವರಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ.
ಇಲ್ಲಿ ಏನೇನು ಸಿಗುತ್ತದೆ? ; ಹಲಸಿನ ಹಪ್ಪಳ, ಚಿಪ್ಸ್, ಸುಕೇಳಿ, ಕಾಳುಮೆಣಸು, ಸೂಜಿಮೆಣಸು, ಅರಿಸಿನ-ಕುಂಕುಮ, ಅಪ್ಪೆಮಿಡಿ- ಅಮ್ಮಟೆ-ನಿಂಬೆ ಇತ್ಯಾದಿ ಉಪ್ಪಿನಕಾಯಿಗಳು, ಲೇಹಗಳು, ಜಾಮ್, ಜೇನುತುಪ್ಪ, ದೇಸೀ ಹಸುವಿನ ತುಪ್ಪ, ಕೊಬ್ಬರಿ ಎಣ್ಣೆ, ಜೋನಿಬೆಲ್ಲ, ಕಾಫಿ ಪುಡಿ, ರಂಜಕ, ಗುರೆಳ್ಳು -ಅಗಸೆಬೀಜ-ಶೇಂಗಾ-ಕಡಲೆಬೇಳೆ-ಹುರಿಗಡಲೆ ಇತ್ಯಾದಿ ಚಟ್ನಿಪುಡಿ, ಸಾರು-ಸಾಂಬಾರು-ಬಿಸಿಬೇಳೆಭಾತ್ -ವಾಂಗೀಭಾತ್-ಕಷಾಯ ಇತ್ಯಾದಿ ಪುಡಿಗಳು, ಪುಳಿಯೋಗರೆ-ಚಿತ್ರಾನ್ನದ ಗೊಜ್ಜುಗಳು, ಚಕ್ಲಿ- ಕೋಡು ಬಳೆ ಹಿಟ್ಟುಗಳು, ಸಿಹಿ-ಖಾರ ತಿಂಡಿಗಳು, ಹಲಸಿನ ಹಣ್ಣಿನ ಪೆರಟಿ, ರೇಷ್ಮೆ-ಖಾದಿ-ಹತ್ತಿ-ಇಳಕಲ್ ಸೀರೆಗಳು, ವಿವಿಧ ಬ್ರಾಂಡ್ ಬಟ್ಟೆಗಳು, ಆಭರಣಗಳು, ಹತ್ತಿಯ ಬತ್ತಿಗಳು ಮತ್ತು ಹಾರಗಳು, ಉಲ್ಲನ್ ಹಾರ-ಸ್ವೆಟರ್ ಇತ್ಯಾದಿ, ಭತ್ತದ ತೆನೆಯ ತೋರಣ, ಕೌದಿ-ಮ್ಯಾಟ್ -ವಯರ್ ಬ್ಯಾಗ್- ಪರ್ಸ್‌ಗಳು, ವಿವಿಧ ವಿನ್ಯಾಸಗಳ ಸೋಪುಗಳು, ಶ್ಯಾಂಪೂ, ಮೆಹೆಂದಿ ಪುಡಿ, ಕೇಶತೈಲಗಳು, ಡ್ರೈ ಫ್ರೂಟ್ಸ್ ಮತ್ತು ಸಾಂಬಾರ ಪದಾರ್ಥಗಳು.
-ಸುರೇಖಾ ಭೀಮಗುಳಿ