Advertisement

ಗ್ರಾಮೀಣ ವೈದ್ಯರ ಪ್ರೋತ್ಸಾಹಕ್ಕೆ ಹೊಸ ನೀತಿ

09:50 AM Feb 17, 2020 | Lakshmi GovindaRaj |

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ವೈದ್ಯರಿಗೆ ಭವಿಷ್ಯದ ವೃತ್ತಿ ಜೀವನದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಸವಲತ್ತು ಕೊಡುವ ಬಗ್ಗೆ ಚಿಂತನೆ ನಡೆದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ. ಬೆಂಗಳೂರು ಮೆಡಿಕಲ್‌ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಭಾನುವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಇಂದು ಗ್ರಾಮೀಣ ಬಡ ಜನರ ಸೇವೆಗೆ ವೈದ್ಯರ ಕೊರತೆ ಹೆಚ್ಚಾಗಿದೆ ಎಂದು ವಿಷಾದಿಸಿದರು.

Advertisement

ವಿದೇಶಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಪದವಿ ಮುಗಿಸಿದ ಬಳಿಕ ಮೂರು ವರ್ಷ ಗ್ರಾಮೀಣ ಸೇವೆ ಮಾಡಿದರೆ ಅಂತವರಿಗೆ ವೃತ್ತಿ ಜೀವನದಲ್ಲಿ ಅಲ್ಲಿನ ಸರ್ಕಾರಗಳು ನೇಮಕಾತಿ, ವಿಶೇಷ ಬಡ್ತಿ, ಅವಕಾಶಗಳು, ಸೌಲಭ್ಯಗಳನ್ನು ನೀಡುತ್ತಿವೆ. ಅದೇ ರೀತಿ ರಾಜ್ಯದಲ್ಲಿಯೂ ಗ್ರಾಮೀಣ ಸೇವೆಗೆ ಮುಂದಾಗುವವರನ್ನು ಪ್ರೋತ್ಸಾಹಿಸಬೇಕಿದೆ. ಈ ನಿಟ್ಟಿನಲ್ಲಿ ಪದವಿ ಮುಗಿಸಿದ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಸ್ವಯಂ ಪ್ರೇರಿತವಾಗಿ ನಗರವನ್ನು ಬಿಟ್ಟು ಹಳ್ಳಿಗಾಡಿನ ಕಡೆ ಮುಖ ಮಾಡಿ, ಅಲ್ಲಿನ ರೋಗಿಗಳಿಗೆ ಚಿಕಿತ್ಸೆ ನೀಡಿದರೆ ಸರ್ಕಾರದ ವತಿಯಿಂದ ವಿಶೇಷ ಪ್ರೋತ್ಸಾಹ ಸಿಗುವಂತೆ ಹೊಸ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ರೋಗಿಗಳ ವಿಶ್ವಾಸ ಗಳಿಸಿ: ಆರೋಗ್ಯವು ಪ್ರಮುಖ ಅಂಶವಾಗಿದ್ದು, ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಒಂದೊಂದು ವೈದ್ಯಕೀಯ ಕಾಲೇಜು ತೆರೆಯಲಿದೆ. ಜತೆಗೆ, ಬೆಂಗಳೂರಿನ ವೈದ್ಯಕೀಯ ಸಂಸ್ಥೆಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಮೂಲಕ ಬೆಂಗಳೂರನ್ನು “ಹೆಲ್ತ್‌ ಕ್ಯಾಪಿಟಲ್‌’ ಮಾಡಲಾಗುವುದು. ಈಗಾಗಲೇ ದೇಶದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಬೆಂಗಳೂರು ಮೆಡಿಕಲ್‌ ಕಾಲೇಜು, ದೇಶದ ಗಮನ ಮಾತ್ರವಲ್ಲದೆ, ಇಡೀ ವಿಶ್ವದ ಗಮನ ಸೆಳೆದಿದೆ ಎಂದು ಹೇಳಿದರು.

ವೈದ್ಯರು ಕೇವಲ ಹಣ ಸಂಪಾದನೆಗೆ ತಮ್ಮ ವೃತ್ತಿಯನ್ನು ಮೀಸಲಿಡಬಾರದು. ಹಣ ಸಂಪಾದನೆ ಗಿಂತ ಹೆಚ್ಚಿನದಾಗಿ ರೋಗಿಗಳ ವಿಶ್ವಾಸಗಳಿಸಿಕೊಳ್ಳ ಬೇಕು. ಯಾವಾಗ ಒಬ್ಬ ವೈದ್ಯ ರೋಗಿಯ ವಿಶ್ವಾಸ ಗಳಿಸುತ್ತಾನೋ, ಆಗ ರೋಗಿ ಬದುಕಿರುವವರೆಗೂ ಅದೇ ವೈದ್ಯನನ್ನು ಹುಡುಕಿಕೊಂಡು ಬರುತ್ತಾನೆ. ಮಾನವೀಯ ಮೌಲ್ಯಗಳನ್ನು ಅಥೆಸಿಕೊಂಡು ವೃತ್ತಿ ನಿರ್ವಹಿಸಬೇಕೆಂದು ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರತಿಫ‌ಲ ಅಪೇಕ್ಷಿಸದೇ ಸೇವೆ ಮಾಡಿ; ಸುಧಾಮೂರ್ತಿ: ಇನ್ಫೋಸಿಸ್‌ ಸಂಸ್ಥೆಯ ಮುಖ್ಯಸ್ಥೆ ಡಾ.ಸುಧಾಮೂರ್ತಿ ಮಾತನಾಡಿ, ವೈದ್ಯರನ್ನು ಅನೇ ಕರು ದೇವರು ಎಂದು ಭಾವಿಸಿದ್ದಾರೆ. ಯಾವುದೇ ಪ್ರತಿಫ‌ಲವನ್ನು ಅಪೇಕ್ಷಿಸದೇ ಸೇವೆ ಮಾಡಿ, ಭವಿಷ್ಯದಲ್ಲಿ ಅದರ ಫ‌ಲ ಸಿಕ್ಕೇ ಸಿಗುತ್ತದೆ. ನಮ್ಮ ತಂದೆಯೂ ವೈದ್ಯ ರಾಗಿದ್ದು, ರೋಗಿಗಳಿಗೆ ಧೈರ್ಯ ತುಂಬುವ ಮೂಲಕ ಶೇ.25 ರಷ್ಟು ರೋಗವನ್ನು ಗುಣಪಡಿಸಬಹುದು ಎಂದು ಹೇಳುತ್ತಿದ್ದರು ಎಂದು ಸ್ಮರಿಸಿಕೊಂಡರು.

Advertisement

ಭವಿಷ್ಯದಲ್ಲಿ ಯೋಗ ಚಿಕಿತ್ಸೆಯ ಭಾಗವಾಗಲಿದೆ: ನಿಮ್ಹಾನ್ಸ್‌ ನಿರ್ದೇಶಕ ಡಾ.ಬಿ.ಎನ್‌.ಗಂಗಾಧರ್‌ ಮಾತನಾಡಿ, ವೈದ್ಯಕೀಯ ಪದವಿಗೆ ಸಾಕಷ್ಟು ಗೌರವವಿದೆ. 10 ಸಾವಿರ ಮಕ್ಕಳು ಶಾಲೆಗೆ ಸೇರಿದರೆ ಒಬ್ಬ ವೈದ್ಯಕೀಯ ಪದವಿ ಪಡೆಯುತ್ತಾನೆ. ಎಲ್ಲರೂ ಕರ್ತವ್ಯ ನಿಷ್ಠೆ ಹಾಗೂ ಮಾನವೀಯತೆ ಜತೆಗೆ ನಿಮ್ಮ ವೃತ್ತಿ ಜೀವನ ಪ್ರಾರಂಭಿಸಿ ಎಂದು ಸಲಹೆ ನೀಡಿದರು.

ಇಂಗ್ಲಿಷ್‌ ಚಿಕಿತ್ಸೆಯಿಂದ ಗುಣವಾಗದ ಕಾಯಿಲೆಗಳಿಗೆ ಯೋಗ ಪರಿಹಾರ ನೀಡಲಿದೆ. ಯೋಗಾಭ್ಯಾಸದಿಂದಲೇ ಸಾಕಷ್ಟು ಕಾಯಿಲೆಗಳು ಬಗೆಹರಿಯುತ್ತವೆ. ಭವಿಷ್ಯದಲ್ಲಿ ಯೋಗವು ಎಲ್ಲಾ ಪ್ರಮುಖ ಚಿಕಿತ್ಸೆಯ ಭಾಗವಾಗಲಿದೆ ಎಂದರು. ಸ್ವಾಮಿ ವಿವೇಕಾನಂದ ಯುವ ಆಂದೋಲನದ ಸಂಸ್ಥಾಪಕ ಡಾ.ಆರ್‌. ಬಾಲಸು ಬ್ರಮಣ್ಯಂ, ಬೆಂಗಳೂರು ಮೆಡಿಕಲ್‌ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಹಾಗೂ ಡೀನ್‌ ಡಾ.ಸಿ.ಆರ್‌ ಜಯಂತಿ, ಪ್ರಾಂಶುಪಾಲ ಡಾ.ಕೆ.ರಮೇಶ್‌ ಕೃಷ್ಣ ಉಪಸ್ಥಿತರಿದ್ದರು.

264 ವಿದ್ಯಾರ್ಥಿಗಳಿಗೆ ಪದವಿ; 23 ಚಿನ್ನದ ಪದಕ ವಿತರಣೆ: ಬೆಂಗಳೂರು ಮೆಡಿಕಲ್‌ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಿಂದ 2014-2019ರ ಬ್ಯಾಚ್‌ನಲ್ಲಿ ಪದವೀಧರರಾಗಿ ತೇರ್ಗಡೆ ಹೊಂದಿದ 264 ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ಪದವಿ ಪ್ರದಾನ ಮಾಡಲಾಯಿತು. ರಾಜೀವ್‌ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಪಡೆದ ಡಾ.ಅರ್ಪಿತ್‌ ಶಾಂತಗಿರಿ ಹಾಗೂ ಡಾ.ಡಿ.ಎನ್‌.ಮೇಘನಾ ಒಳಗೊಂಡಂತೆ ಕಾಲೇಜು ಮಟ್ಟದಲ್ಲಿ ವಿವಿಧ ವಿಷಯಗಳಲ್ಲಿ ಅತ್ಯುತ್ತಮರಾಗಿ ಹೊರಹೊಮ್ಮಿದ 19 ವಿದ್ಯಾರ್ಥಿಗಳಿಗೆ ಒಟ್ಟು 23 ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು.

ಮಕ್ಕಳ ಮೇಲಿನ ಪ್ರೀತಿಯಿಂದ ಪಿಡಿಯಾಟ್ರಿಕ್ಸ್‌ ವಿಷಯವನ್ನು ಆಸಕ್ತಿಯಿಂದ ಓದುತ್ತಿದ್ದೆ. ಇದೇ ವಿಷಯಕ್ಕಾಗಿ ವಿಶ್ವವಿದ್ಯಾಲಯ ಹಾಗೂ ಕಾಲೇಜು ಮಟ್ಟದಲ್ಲಿ ಚಿನ್ನದ ಪದಕ ಪಡೆದಿದ್ದು, ಸಾಕಷ್ಟು ಖುಷಿ ನೀಡಿದೆ. ಭವಿಷ್ಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಉತ್ತಮ ಮಕ್ಕಳ ತಜ್ಞೆಯಾಗಿ ಸೇವೆ ಸಲ್ಲಿಸುವೆ.
-ಡಾ.ಡಿ.ಎನ್‌.ಮೇಘನಾ, ಚಿನ್ನದ ಪದಕ ವಿಜೇತೆ

Advertisement

Udayavani is now on Telegram. Click here to join our channel and stay updated with the latest news.

Next