Advertisement

ಪ್ರತಿಭೆಗಳಿಗೆ ಹೊಸ ವೇದಿಕೆ

01:15 PM Apr 10, 2020 | Suhan S |

ಈಗಂತೂ ಸಿನಿಮಾ ಆಸಕ್ತರಿಗೆ ಹೊಸ ಹೊಸ ವೇದಿಕೆ ಸಿಗುತ್ತಿವೆ. ಅದರಲ್ಲೂ ತಾನು ಸಿನಿಮಾ ನಟ ಆಗಬೇಕು ಅಂದುಕೊಂಡವರಂತೂ ಹಲವು ನಟನೆ ಶಾಲೆಗಳಿಗೆ ಹೋಗಿ ತರಬೇತಿ ಪಡೆಯುತ್ತಾರೆ. ಈಗ ಇಲ್ಲೊಂದು ಹೊಸ ವೇದಿಕೆ ಹುಟ್ಟುಹಾಕಿದ್ದಾರೆ ನಿರ್ದೇಶಕ ಅರವಿಂದ್‌ ಕೌಶಿಕ್‌.

Advertisement

ಹೌದು, ಅವರೀಗ “ಕ್ಲೋಸಪ್‌ ಸ್ಟೋರಿಸ್‌’ ಎಂಬ ಹೊಸ ಕಾನ್ಸೆಪ್ಟ್ ಮೂಲಕ ಅಭಿನಯದಲ್ಲಿ ಆಸಕ್ತಿ ಇರುವವರಿಗೆ ಒಂದು ಹೊಸ ವೇದಿಕೆ ಹುಟ್ಟುಹಾಕಿದ್ದಾರೆ. ಅಂದಹಾಗೆ, ಹೊಸ ಯೋಚನೆ ಬಗ್ಗೆ ಮಾತನಾಡುವ ಅವರು, “ನನಗೆ ಈ ಯೋಚನೆ ಬಂದಿದ್ದು, ನಟನೊಬ್ಬನಿಗೆ ಕ್ಲೋಸಪ್‌ನಲ್ಲಿ ಅಭಿನಯ ಮಾಡೋದು ಮುಖ್ಯ ಆಗುತ್ತೆ. ಮುಖದ ಮೂಲಕ ಅಭಿನಯದಲ್ಲೇ ಕಥೆ ಹೇಳ್ಳೋಕೆ ಅವನಿಂದ ಸಾಧ್ಯನಾ? ಎಂಬ ಪ್ರಶ್ನೆ ಕಾಡುತ್ತಿತ್ತು. ಸಾಮಾನ್ಯವಾಗಿ ಸಿನಿಮಾ ಅಂದಾಕ್ಷಣ ಕಥೆ ಹೇಳ್ಳೋಕೆ ಪರಿಕರ ಇರುತ್ತೆ. ಎದುರು ಇನ್ನೊಬ್ಬ ನಟ ಇರ್ತಾರೆ. ಬೇಕಿರುವ ಹಿನ್ನೆಲೆ ಸಂಗೀತ ಇರುತ್ತೆ. ಅದ್ಯಾವುದೂ ಇಲ್ಲದೆ ನಟ ತನ್ನ ಕ್ಲೋಸಪ್‌ ಮುಖದ ಮೂಲಕವೇ ನಟಿಸಿ ಆ ಕಥೆಯನ್ನು ಅರ್ಥ ಮಾಡಿಸೋಕೆ ಆಗುತ್ತಾ? ಎಂಬ ಕಾನ್ಸೆಪ್ಟ್ ಈ “ಕ್ಲೋಸಪ್‌ ಸ್ಟೋರಿಸ್‌’ ಎನ್ನುತ್ತಾರೆ ಅರವಿಂದ್‌ ಕೌಶಿಕ್‌.

“ಬ್ಲಾಕ್‌ ಟಿಕೆಟ್‌ ಸ್ಟುಡಿಯೋ ‘ ಹೆಸರಿನ ಯುಟ್ಯೂಬ್‌ ಚಾನೆಲ್‌ನಲ್ಲಿ ಈ ರೀತಿಯ “ಕ್ಲೋಸಪ್‌ ಸ್ಟೋರಿಸ್‌’ ಮಾಡಿ ಒಂದಷ್ಟು ನಟರ ಕೈಯಲ್ಲಿ ಮಾಡಿಸುವ ಉದ್ದೇಶವಿದೆ. ಎರಡು ನಿಮಿಷದ ಶಾರ್ಟ್ ಫಿಲ್ಮ್ ರೀತಿಯಲ್ಲಿ ಫೇಸ್‌ ಎಕ್ಸ್‌ಪ್ರೆಷನ್‌ ಮಾತ್ರ ಇಟ್ಟುಕೊಂಡು ಮಾಡುವಂತಹ ಅಭಿನಯವದು. ಇತ್ತೀಚೆಗಷ್ಟೇ ಅದಕ್ಕೆ ಚಾಲನೆ ಕೊಡಲಾಗಿದೆ. ಇದರಲ್ಲಿ ಅನುಭವಿ ನಟರು, ಹೊಸ ಪ್ರತಿಭೆಗಳು ಕೂಡ ಪಾಲ್ಗೊಳ್ಳುತ್ತಿದ್ದಾರೆ. ಹೊಸಬರು ಸಂಪರ್ಕಿಸಿದರೆ, ಅವರಿಗೆ ನಾನೇ ಎರಡು ನಿಮಿಷದ ಸ್ಕ್ರಿಪ್ಟ್ ಮಾಡಿ ಕೊಡ್ತೀನಿ. ಅದನ್ನು ಓದಿಕೊಂಡು ಬರೀ ಕ್ಲೋಸಪ್‌ ಮೂಲಕ ನಟನೆ ಮಾಡಿ ಕಳುಹಿಸಿದರೆ, ನಾವು ಮಾಡುವ ಸಿನಿಮಾಗಳಲ್ಲಿ, ಅಥವಾ ಬೇರೆಯವರು ಮಾಡುವ ಚಿತ್ರಗಳಲ್ಲಿ ಅವಕಾಶ ಕೊಡಿಸುವ ಉದ್ದೇಶವಿದೆ.

ಇನ್ನು, ಸಿನಿಮಾದವರು ಮಾಡುವ ಆಡಿಷನ್‌ಗೆ ಹೋಗಿ ಅವರುಕೊಟ್ಟದ್ದನ್ನು ಮಾಡಿ ತೋರಿಸುವುದಕ್ಕಿಂತಲೂ ಇದು ಉತ್ತಮವಾಗಿದೆ. ಮನೆಯಲ್ಲೇ ಒಂದು ಸಣ್ಣ ವಿಡಿಯೊ ಮಾಡಿ ಅದನ್ನು ನಮಗೆ ಕಳಿಸಿದರೆ, ಅದು ಯುಟ್ಯೂಬ್‌ನಲ್ಲಿ ಹಾಕಲಾಗುತ್ತದೆ. ಅಲ್ಲಿ ಆ ಕಲಾವಿದನ ಮುಖ ಭಾವ ಹೇಗಿರುತ್ತೆ ಎಂಬುದನ್ನು ತಿಳಿಯಬಹುದು. ತುಡಿತ ಇರೋರಿಗೆ ಇದೊಂದು ಒಳ್ಳೆಯ ವೇದಿಕೆ. ಮನೆಯಲ್ಲೇ ಕುಳಿತು ಆಡಿಷನ್‌ ಕೊಡುವ ವ್ಯವಸ್ಥೆ ಈ ಮೂಲಕ ಆಗುತ್ತಿದೆ. ಈಗಾಗಲೇ ಹಲವು ನಟರು ಕೈ ಜೋಡಿಸಿರುವುದು ಹೊಸ ಬೆಳವಣಿಗೆ “ಎಂಬುದು ಅರವಿಂದ್‌ ಕೌಶಿಕ್‌ ಮಾತು.­

Advertisement

Udayavani is now on Telegram. Click here to join our channel and stay updated with the latest news.

Next