ದಾವಣಗೆರೆ: ಜಾನು ವಾರುಗಳ ಅನುಕೂಲಕ್ಕಾಗಿ ಈಗಾಗಲೇ ಮಹಾತ್ಮಾಗಾಂಧಿ ನರೇಗಾ ಯೋಜನೆಯಲ್ಲಿ ದನದ ಶೆಡ್, ಗೋಕಟ್ಟೆಯಂಥ ವಿವಿಧ ಕಾಮಗಾರಿಗಳನ್ನು ಕೈಗೊಂಡಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ, ಈಗ ಜಾನುವಾರುಗಳ ಮೇವಿಗೆ ಅನುಕೂಲವಾಗುವಂತೆ ಗೋಮಾಳಗಳ ಅಭಿವೃದ್ಧಿಗೆ ಮುಂದಾಗಿದೆ.
ನರೇಗಾ ಜಲಸಂಜೀವಿನಿ ಯೋಜನೆ ಯಡಿ ಉಪಯೋಜನೆಯಾಗಿ ಗ್ರಾಮಗಳಲ್ಲಿರುವ ಗೋಮಾಳಗಳ ಅಭಿವೃದ್ಧಿಗೆ ಇಲಾಖೆ ನಿರ್ಧರಿಸಿದ್ದು, ಯೋಜನೆ ಅನುಷ್ಠಾನಕ್ಕೆ ಬೇಕಾದ ಸಮಗ್ರ ಕ್ರಿಯಾಯೋಜನೆಯನ್ನು ಪ್ರಸಕ್ತ ವರ್ಷವೇ ಸಿದ್ಧಪಡಿಸಿಕೊಂಡು ಮುಂದಿನ ಆರ್ಥಿಕ ವರ್ಷದಿಂದ ಅನುಷ್ಠಾನಗೊಳಿಸಲು ತೀರ್ಮಾನಿಸಿದೆ. ಇಲಾಖೆಯ ಈ ಮಹತ್ವಾಕಾಂಕ್ಷಿ ಯೋಜನೆಯಿಂದ ರಾಜ್ಯದ ಸಹಸ್ರಾರು ಭೂರಹಿತ ಕುಟುಂಬಗಳ ಜಾನುವಾರುಗಳಿಗೆ ಗೋಮಾಳದಲ್ಲಿ ಮೇವು ಸೌಲಭ್ಯ ದೊರಕುವ ನಿರೀಕ್ಷೆ ಹೊಂದಲಾಗಿದೆ.
ಯೋಜನೆಯ ಉದ್ದೇಶ
ಗ್ರಾಮೀಣ ಜನರಿಗೆ ಜೀವನೋ ಪಾಯ ಸೃಷ್ಟಿ, ಆರ್ಥಿಕ ಬೆಳವಣಿಗೆ ಮತ್ತು ಮನುಕುಲದ ಒಟ್ಟಾರೆ ಯೋಗಕ್ಷೇಮಕ್ಕಾಗಿ ಗೋಮಾಳ ರಕ್ಷಿಸಿ, ಸಂರಕ್ಷಿಸಬೇಕು. ಗೋಮಾಳ ಭೂಮಿಗೆ ಸಮಾಜದ ಎಲ್ಲ ವರ್ಗಗಳಿಗೆ ಮತ್ತು ನಿರ್ದಿಷ್ಟವಾಗಿ ಬಡವರಿಗೆ ಸಮಾನ ಪ್ರವೇಶವನ್ನು ಖಚಿತಪಡಿಸಬೇಕು. ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಗೋಮಾಳ ಭೂಮಿಯ ಸುಸ್ಥಿರ ಬಳಕೆ ಖಚಿತಪಡಿಸಬೇಕು.
ಗೋಮಾಳ ಅಭಿವೃದ್ಧಿ ವಿಧಾನ
ಯೋಜನೆ ಅನುಷ್ಠಾನಕ್ಕಾಗಿ ಮೊದಲು ಕಂದಾಯ ಇಲಾಖೆ ಹಾಗೂ ಇತರ ಆಧುನಿಕ ತಂತ್ರಾಂಶದ ಮೂಲಕ ಗೋಮಾಳದ ದತ್ತಾಂಶ ಸಂಗ್ರಹಿಸಬೇಕು. ಗೋಮಾಳಗಳ ವಸ್ತುಸ್ಥಿತಿ ಮತ್ತು ಲಭ್ಯವಿರುವ ವ್ಯಾಪ್ತಿಯನ್ನು ಸಮುದಾಯದೊಂದಿಗೆ ಸಮನ್ವಯ ಸಾಧಿಸಿ ಸಿಎಲ್‌ಎಂ (ಕಾಮನ್ ಲ್ಯಾಂಡ್ ಮ್ಯಾಪಿಂಗ್) ಉಪಕರಣ ಬಳಸಿ ಗೋಮಾಳದ ಮ್ಯಾಪಿಂಗ್ ಮಾಡಬೇಕು.
Related Articles
ಇಲ್ಲಿ ಭೂ ಬಳಕೆ ಹಾಗೂ ಭೂ ಹೊದಿಕೆ, ಜಲವಾಹಿನಿ ನಕ್ಷೆ, ಇಳಿಜಾರು ನಕ್ಷೆ ಮತ್ತು ಕ್ಲಾರ್ಟ್ ನಕ್ಷೆ ಬಳಕೆ ಮಾಡಬೇಕು. ಸೂಕ್ತವಾದ ಸ್ಥಳ ಹಾಗೂ ಕಾಮಗಾರಿಗಳನ್ನು ಗುರುತಿಸಲು ಕ್ಲಾರ್ಟ್-ಡೆಟ್ ಆ್ಯಪ್ ( ಇದು ಭೂಮಿಯ ಮರುಪೂರಣ ಸಾಮರ್ಥ್ಯ, ಭೂಪ್ರದೇಶದಂಥ ನಿಯತಾಂಕಗಳ ಆಧಾರದ ಮೇಲೆ ವಿನ್ಯಾಸಗೊಳಿಸಲಾದ ತಂತ್ರಾಂಶ) ಬಳಸಬೇಕು ಎಂದು ಇಲಾಖೆಯು ಎಲ್ಲ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಕಾಮಗಾರಿ ಕೈಗೆತ್ತಿಕೊಳ್ಳಬೇಕು
ಗೋಮಾಳ ಪುನಶ್ಚೇತನಗೊಳಿ ಸುವಾಗ ಗಡಿ ಅಂಚಿನಲ್ಲಿ ಕಂದಕ ನಿರ್ಮಾಣ ಮಾಡುವುದು, ಗಡಿಯಲ್ಲಿ ಕಲ್ಲಿನ ಗೋಡೆ ನಿರ್ಮಿಸುವುದು, ಭೂ ಅಥವಾ ಕತ್ತಾಳೆ ಸಸಿ ನೆಡುವುದು, ಕಲ್ಲು ತಡೆ, ಪೋಷಕ ಕಾಲುವೆಗಳ ಉಪಚಾರ, ಚಿಕ್ಕ ಚೆಕ್ ಡ್ಯಾಂ ನಿರ್ಮಾಣ, ಗೋಕಟ್ಟೆ ಪುನಶ್ಚೇತನ, ಬೀಜದುಂಡೆ, ನರ್ಸರಿ, ಹುಲ್ಲುಗಾವಲು ಅಭಿವೃದ್ಧಿ ನಿರ್ಮಾಣದಂಥ ಅಭಿವೃದ್ಧಿಯಂಥ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಈ ಕುರಿತ ಯೋಜನೆಯನ್ನು ಆಯಾ ಗ್ರಾಮ ಪಂಚಾಯತ್‌ನವರು ಸಿದ್ಧಪಡಿಸಿ, ಉಪಯೋಜನೆಯ ವಿಸ್ತ್ರತ ಯೋಜನೆಯ ವರದಿಯಲ್ಲಿ ಅಳವಡಿಸಲು ನಿರ್ದೇಶನ ನೀಡಲಾಗಿದೆ. ಇವೆಲ್ಲದಕ್ಕೂ ಮೊದಲು ಗೋಮಾಳಗಳ ಗುರುತಿಸುವ ಸಮೀಕ್ಷೆ ನಡೆಯಬೇಕಿದೆ.
ಕಂದಾಯ ಕಾಯ್ದೆಯಲ್ಲಿ ಸಕ್ರಮಕ್ಕೆ ಅವಕಾಶವಿದೆ
ರಾಜ್ಯದ ಒಟ್ಟು 45 ಲಕ್ಷ ಹೆಕ್ಕೇರ್ ಸಾಮೂಹಿಕ ಭೂಪ್ರದೇಶದಲ್ಲಿ 17.5 ಲಕ್ಷ ಹೆಕ್ಟೇರ್‌ನಷ್ಟು ಗೋಮಾಳ (ದನಕರುಗಳು ಮೇಯಲು ಮೀಸಲಿಟ್ಟಿರುವ ಸರಕಾರದ ಭೂಮಿ) ಪ್ರದೇಶವಿದೆ. ಕಂದಾಯ 1966 ನಿಯಮ (1) ಪ್ರಕಾರ ಗ್ರಾಮದಲ್ಲಿ ಪ್ರತೀ 100 ಜಾನುವಾರುಗಳಿಗೆ 12 ಹೆಕ್ಟೇರ್ ಜಮೀನು ಮೀಸಲಿರಿಸಬೇಕು ಎನ್ನುವ ನಿಯಮವಿದೆ. ಹೆಚ್ಚಿನ ಭೂಮಿ ಇದ್ದರೆ ಕಂದಾಯ ಕಾಯ್ದೆ 94, 94ಎ, 94ಬಿ, 94ಸಿ ಪ್ರಕಾರ ಸಾಗುವಳಿದಾರರಿಗೆ ಸಕ್ರಮ ಮಾಡಲು ಅವಕಾಶವಿದೆ. ಆದರೆ ಸಕ್ರಮ ಮಾಡಲು ಶ್ರಮ ವಹಿಸಬೇಕಾದ ಅಧಿಕಾರಿಗಳು ನಿರಾಸಕ್ತಿ ತೋರ್ಪಡಿಸುತ್ತಿದ್ದು, ಆಯಾ ಭಾಗದ ಜನಪ್ರತಿನಿಧಿಗಳು ಈ ಬಗ್ಗೆ ನಿಗಾ ವಹಿಸಬೇಕಿದೆ.
ಗೋಮಾಳಗಳ ಮಹತ್ವ
ಗೋಮಾಳಗಳು ಗ್ರಾಮದ ಆರ್ಥಿಕತೆಗೆ ವಿಶೇಷ ಕೊಡುಗೆ ನೀಡುತ್ತವೆ. ಗೋಮಾಳಗಳು ಆಹಾರ, ಮೇವು, ಮರ ಆಧಾರಿತ ಕೃಷಿ ವ್ಯವಸ್ಥೆಯಾಗಿದ್ದು ಪಶುಸಂಗೋಪನೆ ಹಾಗೂ ಅಂತರ್ಜಲ ಮರುಪೂರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಗೋಮಾಳ ಗ್ರಾಮೀಣ ಕುಟುಂಬಗಳಿಗೆ ವಿಶೇಷವಾಗಿ ಬಡವರಿಗೆ ಜೀವನೋಪಾಯದ ಪ್ರಮುಖ ಮೂಲಗಳಲ್ಲಿ ಒಂದಾಗಿದೆ.
– ಎಚ್.ಕೆ. ನಟರಾಜ