Advertisement

ಜನರಿಗೆ ಕಗ್ಗಂಟಾದ ಹೊಸ ಒಟಿಪಿ ವ್ಯವಸ್ಥೆ ನಿವೇಶನ ನೋಂದಣಿ ದುಸ್ತರ

10:01 PM Feb 13, 2020 | Sriram |

ಬೈಂದೂರು:ಆಡಳಿತ ಸುಧಾರಣೆಗಾಗಿ ಹೊಸ ಹೊಸ ತಂತ್ರಜ್ಞಾನಗಳನ್ನು, ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತದೆ. ಆದರೆ ಇಂತಹ ಹೊಸ ವ್ಯವಸ್ಥೆಗಳು ಉಪಕಾರಿಯಾದರೆ ಜನರಿಗೂ ಪ್ರಯೋಜನ. ಜನಸಾಮಾನ್ಯರಿಗೆ ಕಗ್ಗಂಟಾದಾಗ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತವೆ. ಅದೇ ರೀತಿ ನಿವೇಶನ ನೋಂದಣಿಗೆ ಜಾರಿಗೆ ತಂದಿರುವ ನಿಯಮ ಸಮಸ್ಯೆ ಸೃಷ್ಟಿಸಿದೆ.

Advertisement

ಹೊಸ ನಿಯಮವೇನು?
ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಭೂ ವ್ಯವಹಾರ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ಹಿಂದೆ ನೋಂದಣಿ ಅಧಿಕಾರಿ ಮುಂದೆ ಖರೀದಿದಾರರು ಮತ್ತು ಮಾರಾಟಗಾರರು ಎರಡೂ ಕಡೆಯವರನ್ನು ಕರೆಸಿ ಸೂಕ್ತ ದಾಖಲೆ ಪರಿಶೀಲನೆ ನಡೆಸಿ ಭಾವಚಿತ್ರ ತೆಗೆದು ನೋಂದಣಿ ಮಾಡಲಾಗುತ್ತಿತ್ತು. ಈಗ ಇದಕ್ಕಿಂತಲೂ ಹೊಸ ನಿಯಮ ಜಾರಿಗೆ ಬಂದಿದೆ. ಆ ಪ್ರಕಾರ ಒಂದು ಜಾಗದ ಪಹಣಿಯಲ್ಲಿ ಮನೆಯವರ ಎಷ್ಟು ಹೆಸರಿದೆ ಅಷ್ಟೂ ಮಂದಿ ಹಾಜರಾಗಬೇಕು ಮತ್ತು ಪ್ರತಿಯೊಬ್ಬರ ಮೊಬೈಲ್‌ ನಂಬರ್‌ ಕೂಡ ಕಡ್ಡಾಯ. ನೋಂದಣಿ ಸಂದರ್ಭ ಮೊಬೈಲಿಗೆ ಬರುವ ಒಟಿಪಿಯನ್ನು ಪರಿಶೀಲಿಸಿದಾಗ ಮಾತ್ರ ನೋಂದಣಿ ಸಾಧ್ಯ.

ನಕಲಿ ತಡೆಗೆ ಅಸ್ತ್ರ
ಯಾರಧ್ದೋ ಹೆಸರಿನಲ್ಲಿರುವ ನಿವೇಶನದ ದಾಖಲೆಗಳನ್ನು ನಕಲಿ ಮಾಡಿ ಜಾಗ ನೋಂದಣಿ ಮಾಡಿಸಿಕೊಳ್ಳುವ ಅಥವಾ ಇನ್ನೊಬ್ಬರಿಗೆ ಮಾರಾಟ ಮಾಡುವ ಪ್ರಕರಣಗಳನ್ನು ತಡೆಗಟ್ಟಲು, ಕಂದಾಯ ಭೂಮಿಗಳನ್ನು ಅಕ್ರಮವಾಗಿ ಮಾರಾಟ, ತಮ್ಮ ಹೆಸರಿಗೆ ನೋಂದಣಿ ಮಾಡದಂತೆ ತಡೆಯಲು ಈ ವ್ಯವಸ್ಥೆಯನ್ನು 2019 ಅಕ್ಟೋಬರ್‌ನಲ್ಲಿ ಸರಕಾರ ಜಾರಿಗೆ ತಂದಿದೆ. ಈ ವ್ಯವಸ್ಥೆ ಜಾರಿಗೊಳಿಸಿದಾಗ ನಿತ್ಯ 25 ಸಾವಿರದಿಂದ 30 ಸಾವಿರ ವರೆಗೆ ಒಟಿಪಿಗಳನ್ನು ಕಳಿಸಲಾಗಿದೆ. ಹಾಗೆಯೇ 10 ಸಾವಿರದಷ್ಟು ನಿವೇಶನ ನೋಂದಣಿಗಳು ನಡೆದಿವೆ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಅಕ್ರಮ ನಿವೇಶನ ನೋಂದಣಿ ಅವ್ಯಾಹತವಾಗಿದ್ದು ಇವುಗಳನ್ನು ತಡೆಗಟ್ಟಲು ಒಟಿಪಿ ವ್ಯವಸ್ಥೆ ಜಾರಿಗೆ ತರಲಾಗಿದೆ.

ಸರಕಾರಿ ಕೆಲಸಕ್ಕೂ ತಡೆ
ಕೇವಲ ಜಾಗ ಮಾರಾಟ ಪ್ರಕ್ರಿಯೆ ಮಾತ್ರವಲ್ಲದೆ ಗ್ರಾಮ ಪಂಚಾಯತ್‌ ಆಶ್ರಯ ಯೋಜನೆ, ಬ್ಯಾಂಕ್‌ ಸಾಲ, ಅಡಮಾನ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ನೋಂದಣಿ ಅಗತ್ಯ. ಸಾಮಾನ್ಯವಾಗಿ ಪಂಚಾಯತ್‌ ಅಭಿವೃದ್ದಿ ಅಧಿಕಾರಿಗಳು ವಿವಿಧ ಕೆಲಸದಲ್ಲಿದ್ದಾಗ ಸೌಲಭ್ಯ ಪಡೆಯಲು ಜನಸಾಮಾನ್ಯ ಅಭಿವೃದ್ಧಿ ಅಧಿಕಾರಿಯ ಮೊಬೈಲಿಗೆ ಬರುವ ಒಟಿಪಿಗಾಗಿ ಕಾಯಬೇಕಾಗುತ್ತದೆ. ಮಾತ್ರವಲ್ಲದೆ ವ್ಯಾಪ್ತಿ ಪ್ರದೇಶದ ಹೊರಗಡೆ ಇದ್ದಾಗ ಒಟಿಪಿ ದೊರೆಯದೆ ನೋಂದಣಿ ಸಾಧ್ಯವಾಗುವುದಿಲ್ಲ. ಗ್ರಾಮೀಣ ಜನರ ಪರಿಸ್ಥಿತಿ ಅಂತೂ ಹೇಳತೀರದಾಗಿದೆ. ಆರೇಳು ಜನರ ಮೊಬೈಲ್‌ಗ‌ಳಲ್ಲಿ ಕೆಲವು ಹಿರಿಯರು, ಅನಕ್ಷರಸ್ಥರು ಮೊಬೈಲ್‌ ಇಲ್ಲದವರು ಒಟಿಪಿ ಸಮಸ್ಯೆಯಿಂದ ಹೈರಾಣಾಗುವಂತೆ ಮಾಡಿದೆ. ಹೀಗಾಗಿ ಜಾಗ ನೋಂದಣಿ ಸಮಸ್ಯೆಯಾಗಿದೆ.

ವಿದೇಶದಲ್ಲಿದ್ದರೂ ಒಟಿಪಿ ಬೇಕು
ಪಹಣಿ ಪತ್ರದಲ್ಲಿ ಹೆಸರಿರುವ ವ್ಯಕ್ತಿ ಜಿಪಿಎ ಕೊಟ್ಟು ವಿದೇಶದಲ್ಲಿದ್ದರೂ ಆತನ ಮೊಬೈಲ್‌ಗೆ ಬಂದ ಒಟಿಪಿಯನ್ನು ನೀಡುವುದು ಕಡ್ಡಾಯವಾಗಿದೆ. ಕೆಲವೊಮ್ಮೆ ಸಂಪರ್ಕ ಮಾಡಲಾಗದೆ ಜಾಗ ನೋಂದಣಿ ಮುಂದೂಡಲಾಗುತ್ತದೆ. ಇದರಿಂದ ನೋಂದಣಿ ಪ್ರಕ್ರಿಯೆಗೆ ಹರಸಾಹಸ ಪಡುವಂತೆ ಮಾಡುತ್ತದೆ.

Advertisement

ಕಷ್ಟಕರ
ನೋಂದಣಿ ಸಂದರ್ಭ ವ್ಯಕ್ತಿಯ ಮೊಬೈಲ್‌ಗೆ ಬಂದ ಒಟಿಪಿಯನ್ನು ಹಾಕಿದಾಗ ಮಾತ್ರ ನೋಂದಣಿಯಾಗುತ್ತದೆ. ಒಂದಿಬ್ಬರಾದರೆ ಇದರಲ್ಲಿ ಸಮಸ್ಯೆ ಇರದು ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಕೂಡು ಕುಟುಂಬವಾಗಿದ್ದು ಸದಸ್ಯರ ಸಂಖ್ಯೆ 10ಕ್ಕಿಂತಲೂ ಹೆಚ್ಚಿದ್ದರೆ ಪ್ರತಿಯೊಬ್ಬರ ಮೊಬೈಲ್‌ ಒಟಿಪಿಯನ್ನೂ ಸಂಗ್ರಹಿಸಿ ನೀಡಬೇಕಾದ್ದು ಕಷ್ಟಕರವಾಗಿದೆ.

ಏನಿದು ಒಟಿಪಿ?
ಒಟಿಪಿ ಅರ್ಥಾತ್‌ ಒನ್‌ ಟೈಮ್‌ ಪಾಸ್‌ವರ್ಡ್‌ ಇದರ ಪೂರ್ಣ ಹೆಸರು. ಹಲವು ವ್ಯವಸ್ಥೆಯಲ್ಲಿ ಒಟಿಪಿಗಳನ್ನು ಬಳಸಲಾಗುತ್ತದೆ. ಇದು ವ್ಯಕ್ತಿಯನ್ನು ಖಚಿತಪಡಿಸಲು, ನಕಲಿ, ಗರಿಷ್ಠ ಭದ್ರತೆಗಾಗಿ ಇರುವಂತಹ ವ್ಯವಸ್ಥೆ. ನಿವೇಶನ ನೋಂದಣಿ ವೇಳೆ ಮಾರಾಟಗಾರರು, ಖರೀದಿದಾರರು ಮತ್ತು ಸಾಕ್ಷಿಗಳಿಗೆ ಒಟಿಪಿ ಬರುತ್ತದೆ. ಇದನ್ನು ನೀಡಿದ ಅನಂತರವೇ ನೋಂದಣಿ ಯಶಸ್ವಿಯಾಗುತ್ತದೆ. ಈ ಮೂಲಕ ಅಕ್ರಮ ತಡೆಯೊಂದಿಗೆ ದೂರುಗಳು ಬರುವುದನ್ನೂ ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ಸರಕಾರ ಹೇಳಿಕೊಂಡಿದೆ.

ನಿಧಾನ ವ್ಯವಸ್ಥೆ
ಒಟಿಪಿ ಕುರಿತ ಹೊಸ ನಿಯಮದಿಂದಾಗಿ ಹತ್ತು ನಿಮಿಷದಲ್ಲಿ ಮುಗಿಯುವ ಕೆಲಸ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಹೀಗಾಗಿ ಮಾನವ ಶ್ರಮ ವ್ಯರ್ಥವಾಗುವಂತೆ ಮಾಡುತ್ತಿದೆ.
-ಮಂಗೇಶ್‌ ಶ್ಯಾನುಭಾಗ್‌,
ವಕೀಲರು ಬೈಂದೂರು

ನಿಯಮ ಪಾಲನೆ
ಆಡಳಿತ ಸುಧಾರಣೆಗೆ ಹೊಸ ನಿಯಮಗಳು ಸಹಜವಾಗಿದೆ. ಆದರೆ ಈಗಿನ ನಿಯಮಗಳು ನೋಂದಣಿ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗುತ್ತಿದೆ. ಇದು ಸರಕಾರದ ನಿಯಮದ ಪ್ರಕಾರ ನಡೆಯುತ್ತಿದೆ. ಹೊಸ ನಿಯಮಗಳಿಗೆ ಜನರು ಹೊಂದಿಕೊಳ್ಳಬೇಕಾಗಿದೆ.
-ನಾಗರಾಜ ನಾಯರಿ, ನೋಂದಣಿ ಅಧಿಕಾರಿ, ಬೈಂದೂರು

-ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next