Advertisement

ಸುಳ್ಯದಿಂದ ಕೋಟೇಶ್ವರಕ್ಕೆ ನೂತನ “ಕೊಡಿಮರ’ಹಸ್ತಾಂತರ

09:29 PM Aug 26, 2019 | Team Udayavani |

ಕೋಟೇಶ್ವರ: ಸಪ್ತ ಕ್ಷೇತ್ರಗಳಲ್ಲೊಂದಾದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನೂತನ ಕೊಡಿಮರ ಕಡಿಯುವ ಸಲುವಾಗಿ ಸುಳ್ಯ ತಾಲೂಕಿನ ಅಮರಪಟ್ನೂರು ಗ್ರಾಮದ ಕುಕ್ಕುಜಡ್ಕದ ಬಳ್ಳೂರು ಎಂಬಲ್ಲಿನ ಸರಕಾರಿ ಸ್ವಾಮ್ಯದ ಜಾಗದಲ್ಲಿ ಆ. 25 ರಂದು ಧಾರ್ಮಿಕ ಕಾರ್ಯಕ್ರಮ ನಡೆಯಿತು.

Advertisement

ಶ್ರೀ ಕೋಟಿಲಿಂಗೇಶ್ವರ ದೇಗುಲದ ಪ್ರಧಾನ ಅರ್ಚಕ ಪ್ರಸನ್ನ ಕುಮಾರ್‌ ಅವರ ನೇತೃತ್ವದಲ್ಲಿ ಕುಕ್ಕುಜಡ್ಕದ ಬಳ್ಳೂರಿನಲ್ಲಿ ವನದುರ್ಗ ಪೂಜೆ ಹಾಗೂ ಶಸ್ತ್ರ ಪೂಜೆಯೊಡನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಆ. 26 ರಂದು ಬೆಳಗ್ಗೆ 9 ಅಡಿ ಉದ್ದದ ಭೋಗಿ ಮರವನ್ನು ಕಡಿದು ಕೆಳಗಿಳಿಸಿ ಲಾರಿಗೆ ವರ್ಗಾಯಿಸಲಾಯಿತು.

ಸುಳ್ಯದಲ್ಲಿ ಭಕ್ತ ಸಾಗರ
ಆ. 25ರಂದು ಕುಕ್ಕುಜಡ್ಕದ ಬಳ್ಳೂರಿಗೆ ಬಂದು ಸೇರಿದ್ದ ಕೋಟೇಶ್ವರ ಸಹಿತ ಆಸು-ಪಾಸಿನ ಗ್ರಾಮದ ಭಕ್ತರು ಧ್ವಜಸ್ತಂಭಕ್ಕೆ ಅಗತ್ಯವಿರುವ ಭೋಗಿಮರ ಕಡಿಯುವ ಕಾರ್ಯಕ್ರಮ ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿದ್ದಾರೆ.

ಸುಮಾರು 60 ವರುಷಗಳ ಬಳಿಕ ನೂತನ ಧ್ವಜ ಪ್ರತಿಷ್ಠಾಪನೆ
ಧಾರ್ಮಿಕ ವಿಧಿ  ವಿಧಾನಗಳೊಡನೆ ಒಯ್ಯಲಾಗುವ ನೂತನ ಧ್ವಜ ಮರದ ಪ್ರತಿಷ್ಠಾಪನೆಗೆ ಇನ್ನು ಹಲವು ತಿಂಗಳು ಸಲ್ಲುತ್ತದೆ. ಧ್ವಜ ಪ್ರತಿಷ್ಠಾಪನೆಗೆ ರಥೋತ್ಸವ ನಡೆಸಬೇಕಾಗಿರುವುದರಿಂದ ಸಂಭ್ರಮದ ಉತ್ಸವ ಆಚರಣೆಗೆ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಅಲ್ಲದೇ ಗ್ರಾಮಸ್ಥರು ಅಣಿಯಾಗುತ್ತಿದ್ದಾರೆ.

ತೆಕ್ಕಟ್ಟೆಯಲ್ಲಿ ಸ್ವಾಗತಕ್ಕೆ ಸಿದ್ಧತೆ
ಆ. 27ರಂದು ತೆಕ್ಕಟ್ಟೆಗೆ ತಲುಪುವ ಕೊಡಿಮರವನ್ನು ಪುರ ಮೆರವಣಿಗೆಯ ಮೂಲಕ ಕೋಟೇಶ್ವರಕ್ಕೆ ಕೊಂಡೊಯ್ಯಲು ಸಕಲ ಸಿದ್ಧತೆ ನಡೆದಿದೆ. ಮಾಜಿ ಸಚಿವ ನಾಗರಾಜ ಶೆಟ್ಟಿ ಅವರು ಕೊಡಿಮರ ಒಯ್ಯಲು ಪ್ರತ್ಯೇಕ ಲಾರಿ ವ್ಯವಸ್ಥೆ ಗೊಳಿಸಿದ್ದಾರೆ. ಮಾಜಿ ಸಚಿವ ಹಾಗೂ ಹಾಲಿ ಸಚಿವರು ಸಹಿತ ಅನೇಕ ಮಂದಿ ವಿವಿಧ ಪಕ್ಷಗಳ ಶಾಸಕರು ಹಾಗೂ ಧುರೀಣರು ಕೊಡಿಮರ ಸಾಗಿಸಲು ಅನುವುಮಾಡಿ ಕೊಟ್ಟಿದ್ದರು. ಮಂಗಳೂರು ಜಿಲ್ಲಾಧಿಕಾರಿ, ಅರಣ್ಯಾ ಧಿಕಾರಿಗಳು ಸಹಿತ ಸುಳ್ಯದ ಹಿಂದೂ ಸಂಘಟನೆಗಳ ಪ್ರಮುಖರು ಅಲ್ಲದೇ ಆ ಜಾಗದಲ್ಲಿ ವಾಸ್ತವ್ಯವಿದ್ದ ಕುಟುಂಬಿಕರು ಮರ ಕಡಿದು ಒಯ್ಯುವಲ್ಲಿ ಸಹಕಾರ ನೀಡಿದರು.

Advertisement

ಈ ಸಂದರ್ಭ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣದೇವ ಕಾರಂತ ಕೋಣಿ, ಸಮಿತಿ ಸದಸ್ಯರು, ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು, ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು, ಧ್ವಜಸ್ತಂಭ ನಿರ್ಮಾಣದ ರೂವಾರಿ ರಾಜಗೋಪಾಲ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next