Advertisement

ನೇತ್ರಾವತಿ ನದಿಗೆ ನೂತನ ಸೇತುವೆ; ಪಾಣೆಮಂಗಳೂರಿನಲ್ಲಿ ಕಾಮಗಾರಿ ಆರಂಭ

07:33 PM Jan 05, 2022 | Team Udayavani |

ಬಂಟ್ವಾಳ: ಬಿ.ಸಿ.ರೋಡ್‌- ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ-75 ಅಭಿವೃದ್ಧಿಯ ಭಾಗವಾಗಿ ಪಾಣೆ ಮಂಗಳೂರಿನಲ್ಲಿ ನೇತ್ರಾವತಿ ನದಿಗೆ ನೂತನ ಸೇತುವೆ ರಚನೆಯ ಕಾಮಗಾರಿ ಇದೀಗ ಆರಂಭಗೊಂಡಿದೆ. ನಿರೀಕ್ಷೆಯಂತೆ ನಡೆದರೆ ಎರಡು ವರ್ಷಗಳಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ 386 ಮೀ. ಉದ್ದದ ಹೊಸ ಸೇತುವೆಯೂ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

Advertisement

ಕಳೆದ ಹಲವು ವರ್ಷಗಳಿಂದ ಅರ್ಧಕ್ಕೆ ನಿಂತಿದ್ದ ಹೆದ್ದಾರಿ ಕಾಮಗಾರಿಯು ಕೆಲವು ತಿಂಗಳ ಹಿಂದೆ ಆರಂಭಗೊಂಡಿದ್ದು, ಕಾಮಗಾರಿ ಗಳನ್ನು ಎರಡು ವಿಭಾಗ ಗಳನ್ನಾಗಿ ಮಾಡಿ ಪ್ರತ್ಯೇಕ ಕಂಪೆನಿಗಳಿಗೆ ಗುತ್ತಿಗೆ ನೀಡಲಾಗಿದೆ. ಅಡ್ಡಹೊಳೆಯಿಂದ ಪೆರಿಯಶಾಂತಿ ತನಕ 15 ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿಯನ್ನು 317 ಕೋ.ರೂ. ಪುಣೆ ಮೂಲದ ಶ್ರೀ ಎಸ್‌.ಎಂ.ಔತಾಡೆ ಪ್ರೈವೆಟ್‌ ಕಂಪೆನಿ ನಿರ್ವಹಿಸುತ್ತಿದೆ. ಪೆರಿಯಶಾಂತಿಯಿಂದ ಬಿ.ಸಿ.ರೋಡ್‌ ತನಕ 49 ಕಿ.ಮೀ. ರಸ್ತೆ ಕಾಮಗಾರಿಯನ್ನು ಸುಮಾರು 1,600 ಕೋ.ರೂ. ಗಳಲ್ಲಿ ಹೈದರಾಬಾದ್‌ ಮೂಲದ ಕೆಎನ್‌ಆರ್‌ ಕನ್‌ಸ್ಟ್ರಕ್ಷನ್‌ ಸಂಸ್ಥೆಯು ನಿರ್ವಹಿಸುತ್ತಿದೆ.

ಹೊಸ ಸೇತುವೆ ಹೆಚ್ಚಿನ ವಿಸ್ತಾರ
ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಗೆ ನಿರ್ಮಿಸಲು ಉದ್ದೇಶಿಸಿರುವ ನೂತನ ಸೇತುವೆಯು ಈಗ ಇರುವ ಸೇತುವೆಗಿಂತಲೂ ವಿಸ್ತಾರವಾಗಿದ್ದು, ಹಿಂದಿನ ಸೇತುವೆ 10.4 ಮೀ. ಅಗಲವನ್ನು ಹೊಂದಿದ್ದರೆ ನೂತನ ಸೇತುವೆಯು 13.5 ಮೀ. ಅಗಲವಾಗಿರುತ್ತದೆ. ನದಿಯಿಂದ ಸುಮಾರು 16 ಮೀ. ಎತ್ತರದಲ್ಲಿ ನಿರ್ಮಾಣ ವಾಗಲಿರುವ ಸೇತುವೆ 386 ಮೀ. ಉದ್ದವನ್ನು ಹೊಂದಿರುತ್ತದೆ.ಸೇತುವೆಯ ಎರಡೂ ಬದಿಗಳಲ್ಲಿ ಅಬಾರ್ಡ್‌ಮೆಂಟ್‌ಗಳಿದ್ದು, ಸರಾಸರಿ 38 ಮೀ. ಅಂತರದಲ್ಲಿ 11 ಪಿಲ್ಲರ್‌ಗಳು ನಿರ್ಮಾಣಗೊಳ್ಳಲಿದೆ.

ಈಗಾಗಲೇ ಪಾಣೆಮಂಗಳೂರು ಭಾಗದಿಂದ ಪಿಲ್ಲರ್‌ಗಳಿಗೆ ಬೆಡ್‌ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ತುಂಬೆ ಡ್ಯಾಂನ ಹಿನ್ನೀರಿನಿಂದ ನದಿಯಲ್ಲಿ ನೀರು ತುಂಬಿರುವುದರಿಂದ ಮಣ್ಣು ಹಾಕಿ ಕಾಮಗಾರಿ ಮುಂದುವರಿಸಲಾಗುತ್ತಿದೆ.

ಪಾಣೆ ಮಂಗಳೂರಿನಲ್ಲಿ ನೇತ್ರಾವತಿ ನದಿಗೆ ಹೊಸ ಸೇತುವೆ ನಿರ್ಮಾಣಗೊಂಡರೆ, ಉಪ್ಪಿನಂಗಡಿ ಯಲ್ಲಿ ಕುಮಾರಧಾರಾ ನದಿಗೆ ಸೇತುವೆಯೊಂದು ನಿರ್ಮಾಣವಾಗಲಿದೆ. ಸದ್ಯಕ್ಕೆ ಪಾಣೆಮಂಗಳೂರಿನಲ್ಲಿ ನಿರ್ಮಾಣ ಗೊಳ್ಳುವ ಸೇತುವೆಯು 3ನೇಯದಾಗಿದ್ದು, ಪ್ರಾರಂಭದ ಸೇತುವೆಯು ಉಕ್ಕಿನ ಸೇತುವೆ ಯಾಗಿದೆ. ಜತೆಗೆ ಒಂದು ರೈಲ್ವೇ ಹಳಿಯ ಸೇತುವೆಯೂ ಇಲ್ಲಿದೆ.

Advertisement

ಶೀಘ್ರ ಮುಗಿಸುವ ಗುರಿ
ಪ್ರಸ್ತುತ ನಮ್ಮ ಸಂಸ್ಥೆಗೆ ಪೂರ್ತಿ ಹೆದ್ದಾರಿ ಕಾಮಗಾರಿಗೆ 2 ವರ್ಷಗಳ ಅವಧಿಯನ್ನು ನೀಡಲಾಗಿದ್ದು, ಅವಧಿಗೆ ಮುಂಚಿತವಾಗಿಯೆ ಕಾಮಗಾರಿ ಪೂರ್ತಿಗೊಳಿಸುವ ಗುರಿ ಹೊಂದಿದ್ದೇವೆ. ಪಾಣೆಮಂಗಳೂರಿನಲ್ಲಿ ಹಿಂದಿನಿಂತ ಹೆಚ್ಚು ಅಗಲವಾದ 386 ಮೀ. ಉದ್ದದ ಸೇತುವೆ ನಿರ್ಮಾಣವಾಗಲಿದೆ.
-ಮಹೇಂದ್ರ ಸಿಂಗ್‌, ಪ್ರೊಜೆಕ್ಟ್ ಮ್ಯಾನೇಜರ್‌, ಕೆಎನ್‌ಆರ್‌ ಕನ್‌ಸ್ಟ್ರಕ್ಷನ್‌

2023ರ ನ. 22ಕ್ಕೆ ಪೂರ್ಣ
ಕಲ್ಲಡ್ಕದಲ್ಲಿ 6 ಲೇನ್‌ ಫ್ಲೈ ಓವರ್ ಸೇರಿದಂತೆ ಸರ್ವಿಸ್‌ ರಸ್ತೆಗಳು, ಅಂಡರ್‌ಪಾಸ್‌ ರಸ್ತೆ, ಓವರ್‌ಪಾಸ್‌ ರಸ್ತೆ, 2 ಬೃಹತ್‌ ಸೇತುವೆಗಳು ಸೇರಿದಂತೆ ಒಟ್ಟು 49 ಕಿ.ಮೀ. ಉದ್ದದ ಹೆದ್ದಾರಿ ಪೂರ್ಣ ಕಾಮಗಾರಿಯನ್ನು ಮುಗಿಸುವುದಕ್ಕೆ ಕೆಎನ್‌ಆರ್‌ ಕನ್‌ಸ್ಟ್ರಕ್ಷನ್‌ ಸಂಸ್ಥೆಗೆ 2023ರ ನ. 22ಕ್ಕೆ ಗಡುವು ನೀಡಲಾಗಿದೆ. ಪ್ರಸ್ತುತ ನಡೆಯುವ ರೀತಿಯಲ್ಲಿ ವೇಗವಾಗಿ ಕಾಮಗಾರಿ ನಡೆದರೆ ಅದಕ್ಕಿಂತ ಮುಂಚಿತವಾಗಿಯೇ ಕಾಮಗಾರಿ ಯನ್ನು ಬಿಟ್ಟು ಕೊಡಲಿದ್ದೇವೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಗಳು ವಿವರಿಸುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next