Advertisement

ಶಿಕ್ಷಣವಿಲ್ಲದೇ ಕಾಡಿನಲ್ಲಿ ಅಲೆಯುತ್ತಿದ್ದ ಹಾಡಿ ಮಕ್ಕಳ ಮನೆ ಬಾಗಿಲಿಗೇ ಬಂತು ಶಾಲೆ!

04:06 PM Sep 15, 2021 | Team Udayavani |

ಎಚ್‌.ಡಿ.ಕೋಟೆ: ಕೋವಿಡ್‌ದಿಂದ ಒಂದೂವರೆ ವರ್ಷದಿಂದ ಶೈಕ್ಷಣಿಕ ಚಟುವಟಿಕೆಗಳಿಂದ ದೂರ ಉಳಿದಿರುವ ಗಿರಿಜನರ ಮಕ್ಕಳಿಗೆ ಸಂಘ ಸಂಸ್ಥೆಗಳೇ ಹಾಡಿಗಳಲ್ಲಿ ಶಾಲೆಯನ್ನು ತೆರೆದು ಅಕ್ಷರ ಕಲಿಕೆ, ಆಟೋಟಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿವೆ. ಶಾಲೆ, ಆನ್‌ಲೈನ್‌ ಕ್ಲಾಸಿನ ಪರಿವೇ ಇಲ್ಲದಂತೆ ಕಾಡುಸುತ್ತುತ್ತಿದ್ದ ಹಾಡಿಗಳ ಮಕ್ಕಳ ಮನೆ ಬಾಗಿಲಿಗೇ ಶಾಲೆ ಬಂದಂತಾಗಿದೆ.

Advertisement

ಖಾಸಗಿ ಶಾಲೆಗಳಲ್ಲಿ ಮೊಬೈಲ್‌ ಮೂಲಕ ಆನ್‌ಲೈನ್‌ ಶಿಕ್ಷಣ ನೀಡಲಾಗುತ್ತಿದೆ. ಇನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ತೆರೆದಿಲ್ಲ. ಕೆಲ ಸರ್ಕಾರಿ ಶಾಲೆಗಳಲ್ಲಿ ಆನ್‌ ಲೈನ್‌ ತರಗತಿ ನಡೆಸಲಾಗುತ್ತಿದೆ. ಆದರೆ, ಹಾಡಿಗಳ ಮಕ್ಕಳ ಪೋಷಕರಲ್ಲಿ ಸ್ಮಾರ್ಟ್ ಫೋನ್  ಇಲ್ಲ, ಇದ್ದರೂ ಸರಿಯಾಗಿ ನೆಟ್‌ ವರ್ಕ್‌ ಇಲ್ಲದ ಕಾರಣ ಅವರಿಗೆ ಕಳೆದ ಒಂದೂವರೆ ವರ್ಷದಿಂದ ಶಿಕ್ಷಣವೇ ಮರೀಚಿಕೆಯಾಗಿತ್ತು.

ಆದಿವಾಸಿ ಮಕ್ಕಳ ಮನದಾಳ, ತಳಮಳವನ್ನು ಅರ್ಥ ಮಾಡಿಕೊಂಡ ತಾಲೂಕಿನ ನಿಸರ್ಗ ಸಂಸ್ಥೆ, ತಾಲೂಕು ಆದಿವಾಸಿ ಬುಡಕಟ್ಟು ಸಂಘ ಹಾಗೂ ಆದಿವಾಸಿ ಮುಖಂಡರ ಸಹಕಾರದೊಂದಿಗೆ ತಾಲೂಕಿನ ಭೀಮನಹಳ್ಳಿ ಹಾಡಿ, ಚಿಕ್ಕರೆಹಾಡಿ, ಅಣ್ಣೂರು ಹಾಡಿ, ಬೂದನೂರು ಹಾಡಿ, ಮಾಸ್ತಿಗುಡಿ ಎ ಮತ್ತು ಬಿ ಹಾಡಿ, ಮಾರನಹಾಡಿ ಸೇರಿದಂತೆ 6 ಹಾಡಿಗಳಲ್ಲಿ ಚಿಗುರು ಹೆಸರಿನಲ್ಲಿ ಶಾಲೆಯನ್ನು ಆರಂಭಿಸಲಾಗಿದೆ. ಈ ಮೂಲಕ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಆಸಕ್ತಿ ಮೂಡುವಂತೆ ಮಾಡಲಾಗಿದೆ. ಶಾಲೆ, ಆನ್‌ಲೈನ್‌ ಕ್ಲಾಸ್‌ನ ಪರಿವೇ ಇಲ್ಲದಂತೆ ಕಾಡಿನಲ್ಲಿ ಅಲೆಯುತ್ತಿದ್ದ ಮಕ್ಕಳು ಇದೀಗ ತೆರೆದಿರುವ ತಾತ್ಕಾಲಿಕ ಶಾಲೆಗೆ ಆಗಮಿಸಿ ಪಾಠ, ಆಟೋಟಗಳಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ:ಬಾಲಿವುಡ್‍ಗೆ ಬಸ್ರೂರ್ : ‍‘ಗರುಡ’ ಚಿತ್ರಕ್ಕೆ ರವಿ ಸಂಗೀತ

ನಿಸರ್ಗ ಸಂಸ್ಥೆಯ ನಿರ್ದೇಶಕ ನಂಜುಂಡಯ್ಯ ನೇತೃತ್ವದಲ್ಲಿ ಆದಿವಾಸಿ ಸಂಘಟನೆಗಳ ಸಹಕಾರದೊಂದಿಗೆ ಆದಿವಾಸಿಗರ ಸಂಪ್ರದಾಯದ ಪಂಚಾಯಿತಿ ಕಟ್ಟೆಯಲ್ಲಿ ತೆರೆದಿರುವ ಚಿಗುರು ಹೆಸರಿನಲ್ಲಿ ಶಾಲೆಗೆ ಹಾಡಿಯಲ್ಲೇ ಉನ್ನತ ವ್ಯಾಸಂಗ ಪಡೆದಿದ್ದವರನ್ನು ಯುವಕ ಹಾಗೂ ಯುವತಿಯರನ್ನು ಶಿಕ್ಷಕರನ್ನಾಗಿ ನೇಮಿಸಲಾಗಿದೆ.

Advertisement

ಪ್ರತಿದಿನ ಬೆಳಗಿನ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ತನಕ ಮಾತ್ರ ನಡೆಯುವ ತರಗತಿಯಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಅಷ್ಟೇ ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ, ಕರಕುಶಲ ಕಲೆ, ಮಣ್ಣಿನಿಂದ ಆಕೃತಿಗಳ ತಯಾರಿಕೆ, ರಂಗ ಚಟುವಟಿಕೆ, ಆದಿವಾಸಿ ಸಂಪ್ರದಾಯದ ನೃತ್ಯಗಳನ್ನು ಕಲಿಸಲಾಗುತ್ತಿದೆ. ಹಾಡಿಗಳಲ್ಲಿ ಶಾಲೆ ತೆರೆಯಲು ಜೀವಿಕ ಸಂಘಟನೆ ಡಾ.ಉಮೇಶ್‌ ಬಿ.ನೂರಲಕುಪ್ಪೆ, ದಿಲ್‌ ಶಾದ್‌ ಬೇಗಂ, ಶ್ರುತಿ ಮತ್ತು ದಿವ್ಯಾ ತಂಡ ನೆರವಾಗಿದೆ. ಕೊರೊನಾ ಸಂಕಷ್ಟದಲ್ಲಿ ಅದಿವಾಸಿಗಳ ಮಕ್ಕಳ ಕೈಹಿಡಿದಿರುವ ಸಂಘ ಸಂಸ್ಥೆಗಳ ಸಹಕಾರಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಹಾಡಿಯಲ್ಲಿ ಶಾಲೆ ಹೇಗಿರುತ್ತೆ,
ಮಕ್ಕಳಿಗೆ ಯಾವ ರೀತಿ ಕಲಿಕೆ?
ಶಾಲೆ ಎಂದರೆ ಕೊಠಡಿಯೊಳಗೆ ತರಗತಿ ನಡೆಸಿ ಪಾಠ ಹೇಳುವುದು ಎಂಬ ಪರಿಕಲ್ಪನೆ ಇದೆ. ಆದರೆ, ಇದೀಗ ಹಾಡಿಯಲ್ಲಿ ತೆರೆದಿರುವ ಶಾಲೆ ಗಳು ವಿಭಿನ್ನವಾಗಿವೆ. ಹಾಡಿಗಳಲ್ಲಿ ಮೇಲ್ಚಾವಣಿ ಮಾತ್ರ ಇರುವ ಸಂಪ್ರದಾಯಿಕ ಪಂಚಾಯಿತಿ ಕಟ್ಟೆ ಇರುತ್ತದೆ. ಇದಕ್ಕೆ ಯಾವುದೇ ಗೋಡೆ ಗಳು ಇರುವುದಿಲ್ಲ. ಇಂತಹ ಪಂಚಾಯ್ತಿ ಕಟ್ಟೆಗಳನ್ನು ತಾತ್ಕಾಲಿಕ ಶಾಲೆಗಳನ್ನಾಗಿ ಪರಿವರ್ತಿಸಲಾಗಿದೆ. ಪ್ರತಿದಿನ ಬೆಳಗ್ಗೆ 10 ಗಂಟೆ ಯಿಂದ ಮಧ್ಯಾಹ್ನ 1 ಗಂಟೆಯವರೆಗೆ 3 ಗಂಟೆಗಳ ಕಾಲ ಶಾಲೆ ಇರುತ್ತದೆ. ಒಂದು ಗಂಟೆ ಮಾತ್ರ ಪಾಠ ಹೇಳಿಕೊಡಲಾಗುತ್ತದೆ. ಉಳಿದ ಅವಧಿಯಲ್ಲಿ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮ, ಕರಕುಶಲ ಕಲೆಯನ್ನು ಕಲಿಸಲಾಗುತ್ತದೆ. ಹಾಡಿಗಳಲ್ಲಿ ಉನ್ನತ ವ್ಯಾಸಂಗ ಮಾಡಿರುವ ಯುವಕ ಹಾಗೂ ಯುವತಿಯರನ್ನು ಹುಡುಕಿ ಅವರನ್ನೇ ಶಿಕ್ಷಕರನ್ನಾಗಿ ನಿಯೋಜಿಸಲಾಗಿದೆ.

-ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next