Advertisement
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೊಮ್ಮಸಮುದ್ರ ಕೆರೆಯಲ್ಲಿ ಕಲ್ಲು ಕಂಬದ ಮೇಲೆ ಪುಟ್ಟ ಬಸವಣ್ಣನ ಮೂರ್ತಿಯಿದೆ. ಮೂರ್ತಿಯನ್ನು ಊರಿನತ್ತ ಮುಖ ಮಾಡಿಟ್ಟರೆ ಮಳೆಗಾಲದಲ್ಲಿ ಕೆರೆ ತುಂಬುತ್ತದೆಂಬ ನಂಬಿಕೆ ಇದೆ. ಮಳೆ ಜೋರಾಗಿ, ಒಮ್ಮೆ ಪ್ರವಾಹದಂತೆ ಕೆರೆಗೆ ನೀರು ಬರಲು ಶುರುವಾದರೆ ಬಸವಣ್ಣನ ಮೂರ್ತಿಯನ್ನು ಕೆರೆಗೆ ನೀರು ನೀಡುವ ಬೆಟ್ಟಗಳತ್ತ ಮುಖ ತಿರುಗಿಸುವುದು ಪದ್ಧತಿ. ಇದರಿಂದ ಮಳೆ ಕಡಿಮೆಯಾಗಿ ಊರು ಉಳಿಯುತ್ತದೆಂಬ ನಂಬಿಕೆಯೂ ಜನಜನಿತವಾಗಿದೆ.
ಕ್ರಿ.ಶ. 1878ರಲ್ಲಿ ನಿರ್ಮಾಣವಾದ ಈ ಕೆರೆ 78.45 ಹೆಕ್ಟೇರ್ ವಿಸ್ತೀರ್ಣವಿದೆ. 6.5 ಚದರ ಕಿಲೋಮೀಟರ್ ಜಲಾನಯನ ಪ್ರದೇಶವಿದೆ. ಕ್ರಿ.ಶ 2013ರಲ್ಲಿ ಮುಕ್ಕಾಲು ಭಾಗ ಕೆರೆ ಭರ್ತಿಯಾಗಿತ್ತು. ಈಗ ಕೆರೆಯಂಗಳ ನೋಡಿದರೆ ಅಸಡಾಬಸಡಾ ಮಣ್ಣು ಅಗೆದು ವಿರೂಪಗೊಂಡಿದೆ. ಹತ್ತಾರು ಹೆಕ್ಟೇರ್ ಪ್ರದೇಶದಲ್ಲಿ 15- 20 ಅಡಿ ಆಳದ ಗುಂಡಿಯಾಗಿದೆ. ಊರಿಗೊಂದು ರಸ್ತೆ ಮಂಜೂರಿಯಾಯ್ತು. ರಸ್ತೆ ಕಾರ್ಯಕ್ಕೆ ಉತ್ತಮ ಮಸಾರಿ ಮಣ್ಣು ಬೇಕಿತ್ತು. ಕಾಡಲ್ಲಿ ಮಣ್ಣು ಅಗೆದರೆ ಅರಣ್ಯ ಕಾನೂನು ಸಮಸ್ಯೆ, ಖಾಸಗಿ ಭೂಮಿಯಲ್ಲಿ ಮಣ್ಣು ಸಿಗುತ್ತಿಲ್ಲ. “ಊರಾನ ರಸ್ತೆಗೆ ಕೆರೆಯಾಗ ಮಣ್ಣು ಅಗಿಯಾದು ಬ್ಯಾಡ ಅಂತ ಹ್ಯಾಂಗ್ ಹೇಳದು?’ ಎಂಬ ಸಂದಿಗ್ಧ ಹಳ್ಳಿಗರದು. ಜೆ.ಸಿ.ಬಿ, ಟಿಪ್ಪರ್ ಸೈನ್ಯ ತಿಂಗಳುಗಟ್ಟಲೆ ಕೆರೆಯ ಮಣ್ಣು ಒಯ್ದು ರಸ್ತೆಯಾಯ್ತು. ಬರದ ಸೀಮೆಯ ಕೆರೆ ಇದರಿಂದ ಹಾಳಾಯ್ತು. ಈಗ, ಎಷ್ಟು ಮಳೆ ಸುರಿದರೂ ತುಂಬಲಿಕ್ಕಿಲ್ಲ, ತುಂಬಿದರೂ ಕೆರೆಯಲ್ಲಿ ನೀರು ನಿಲ್ಲಲಿಕ್ಕಿಲ್ಲ. ಕೆರೆ ಸರಿ ಮಾಡಲು ಕೆರೆಗೆ ಪುನಃ ಹೂಳು ತುಂಬಬೇಕಾಗಿದೆ. ಜಲಕ್ಷಾಮದ ಪ್ರದೇಶದವರು ತಮ್ಮ ಊರ ಪಕ್ಕದ ಕೆರೆಯನ್ನು ಹಾಳು ಮಾಡಿಕೊಂಡಿದ್ದಾರೆ. ಹೋರಾಟಕ್ಕೆ ಧೈರ್ಯ ಸಾಲುತ್ತಿಲ್ಲ
ಬೆಳಗಾವಿ, ಧಾರವಾಡ, ಹಾವೇರಿ, ಹರಿಹರ, ದಾವಣಗೆರೆ, ಕೋಲಾರ ಮುಂತಾದ ಯಾವುದೇ ನಗರದಂಚಿನಲ್ಲಿ ಸುತ್ತು ಹಾಕಿದರೆ ಇಟ್ಟಿಗೆ ಭಟ್ಟಿಗಳು ಕಾಣುತ್ತವೆ. ಇಟ್ಟಿಗೆ ತಯಾರಿಗೆ ಕೆರೆಯ ಹೂಳು ಉತ್ತಮವೆಂದು ಕಾಯಂ ಆಗಿ ಸರಕಾರಿ ಕೆರೆ ನಂಬಿ ಉದ್ಯಮ ನಡೆಯುತ್ತಿವೆ. ಬೆಂಗಳೂರು, ಕೋಲಾರ, ರಾಮನಗರದ ಮನೆ ನಿರ್ಮಾಣಕ್ಕೆ ಅಗತ್ಯ ಮರಳು ಬಂದಿದ್ದೂ ಕೋಲಾರದ ವಿಶಾಲ ಕೆರೆಗಳಿಂದಲೇ! ನದಿ ಕಣಿವೆಯಲ್ಲಿ ಸರಣಿ ಕೆರೆ ನಿರ್ಮಿಸಿದ ವಿಶೇಷತೆಯನ್ನು ಕೋಲಾರದಲ್ಲಿ ನೋಡಬಹುದು. ಬೆಟ್ಟದ ನೀರು ಹರಿದು ಬರುವಾಗ ನೀರ ಜೊತೆಯಲ್ಲೇ ಹರಿದು ಬಂದ ಮರಳು ಕೆರೆಗಳಲ್ಲಿ ಶೇಖರಣೆಯಾಗಿದೆ. ಕೆರೆಯಲ್ಲಿ ನೀರು ಒಣಗಿದಂತೆ ಟ್ರಾÂಕ್ಟರ್, ಲಾರಿಗಳು ಮರಳು ದೋಚಲು ಶುರು ಮಾಡುತ್ತವೆ. “ನಮ್ಮ ಊರಿನ ಜನ ದುಡಿಯಾಕ ಏನಾರ ಬೇಕು ಅಂತ ಮರಳು ತೆಗೀತಾರ. ಬ್ಯಾಡ ಅಂಥ ಹೇಳ್ಳೋದು ಹೇಗೆ?’ ಸಮಸ್ಯೆ ಕಾಲಬುಡದಲ್ಲಿದೆ. ಉದ್ಯಮ, ರಾಜಕಾರಣ, ಗೂಂಡಾಗಿರಿಗಳ ಗೆಳೆತನದ ವ್ಯವಸ್ಥೆಯಲ್ಲಿ ಕೆರೆ ರಕ್ಷಣೆಯ ಕಳಕಳಿಯುಳ್ಳವರಿಗೂ ಹೋರಾಡಲು ಧೈರ್ಯ ಸಾಲದ ಪರಿಸ್ಥಿತಿ.
Related Articles
ವಿಜಯಪುರದ ದ್ಯಾಬೇರಿ ಕೆರೆ ನೋಡಲು ಹೋಗಿದ್ದೆ. ಟ್ರ್ಯಾಕ್ಟರ್‌ನಲ್ಲಿ ಕಲ್ಲು ಸಾಗಿಸುತ್ತಿದ್ದವರ ಪ್ರಶ್ನೆ ಸ್ವಾರಸ್ಯಕರವಾಗಿದೆ. “ಸರಕಾರ ಹಣ ಖರ್ಚು ಮಾಡಿ ಕೆರೆ ಹೂಳು ತೆಗೀತತಲಿÅà. ನಾವು ನಮ್ಮ ಖರ್ಚಿನಾಗ ಕಲ್ಲು ಒಡೆದು ಕೆರೆ ಆಳ ಮಾಡ್ತೇವಿ. ಅಂದ್ರೆ ಹೆಚ್ಚು ನೀರು ನಿಲ್ಲತೇತಿ. ಸರಕಾರ ಮಾಡೋದ್ನ ಪುಕ್ಕಟೆ ನಾವು ಮಾಡೋದ್ನ ಯಾಕ್ ಬ್ಯಾಡ ಅಂತೀರಿ?’ ಎಂದರು. ಇಟ್ಟಿಗೆಗೆ ಮಣ್ಣು , ರಸ್ತೆಗೆ ಕಲ್ಲು, ಮಣ್ಣು ಸಾಗಿಸುವವರು ತಮ್ಮ ಅನುಕೂಲಕ್ಕೆ ಕೆರೆಗೆ ಬರುತ್ತಾರೆಯೇ ಹೊರತೂ ಕೆರೆಯ ಒಳಿತಿಗಲ್ಲ. ಉತ್ತಮ ಮಣ್ಣು ಸಿಕ್ಕರೆ ಇವರು ಎಷ್ಟು ಆಳಕ್ಕೆ ಬೇಕಾದರೂ ಅಗೆಯುತ್ತಾರೆ. ಹಲವೆಡೆ ಮಣ್ಣು- ಕಲ್ಲು ಕಳ್ಳರ ಕೈಯಲ್ಲಿ ಕೆರೆಗಳು ನಲುಗಿವೆ. ಅತ್ಯಾಚಾರ ಮಾಡಿ ಬಿಸಾಕಿದಂತೆ ಕೆರೆಗಳ ಸ್ಥಿತಿಯಿದೆ. ಕೆರೆ ದೇವಿಯೆಂದು ಪೂಜಿಸುತ್ತೇವೆ. ಊರ ನೀರಿನ ಮೂಲವನ್ನು ಅಗೆದು ಬಗೆದು ಕೊಲ್ಲುತ್ತಿರುವಾಗ ಕಣ್ಮುಚ್ಚಿ ಕೂರುವುದು ವಿದ್ಯಾವಂತರ, ನಾಗರಿಕ ಲಕ್ಷಣವೇ? ವರ್ಷದಿಂದ ವರ್ಷಕ್ಕೆ ಅಂತರ್ಜಲ ಕುಸಿಯುತ್ತಿರುವ ನೆಲೆಯಲ್ಲಿ ಮಳೆ ನೀರ ನಿಲ್ದಾಣಗಳನ್ನು ಹಾಳುಗೆಡವುದಕ್ಕೆ ತಡೆ ಬೇಕು. ಸರಕಾರದ ಗ್ರಾಮೀಣಾಭಿವೃದ್ಧಿಯ ರಸ್ತೆ ಕಾಮಗಾರಿಗಳು ಕೆರೆ ಕೊಲ್ಲುವುದಕ್ಕೆ ನೆರವಾಗುತ್ತಿರುವುದು ವಿಪರ್ಯಾಸ.
Advertisement
ಮಣ್ಣು ಅಗೆತದಿಂದ ಅಪಾಯದಾವಣಗೆರೆ ಜಿಲ್ಲೆಯಲ್ಲಿ ಅಡಕೆ ತೋಟಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಮಳೆ ನೀರು ಹಿಡಿಯಬೇಕಿದ್ದ ಕೆರೆ ಕಾಲುವೆಗಳು ಅತಿಕ್ರಮಣಕ್ಕೆ ಒಳಗಾಗಿವೆ. ಚೆನ್ನಗಿರಿಯಲ್ಲಂತೂ ತೋಟದ ನಡುವೆ ಸಿಕ್ಕಿಕೊಂಡ ಹತ್ತಿಪ್ಪತ್ತು ಎಕರೆ ವಿಸ್ತೀರ್ಣದ ಸರಕಾರಿ ಕೆರೆಗಳಲ್ಲಿ ಮಣ್ಣು ಅಗೆಯುವ ಪೈಪೋಟಿ ಜೋರಾಗಿದೆ. ಕೆರೆ ದಂಡೆಯ ಮಣ್ಣನ್ನೂ ಹೊತ್ತೂಯ್ಯುವ ಕೃತ್ಯ ನಡೆಯುತ್ತಿದೆ. ಅಡಕೆ ತೋಟಕ್ಕೆ ಹೊಸ ಮಣ್ಣು ಹಾಕುವ ಕಾರ್ಯದಿಂದ ಕೆರೆಗಳು ಭಯಂಕರ ಆಳವಾಗಿವೆ. ಈಜಲು ಹೋದವರು, ನೀರು ಕುಡಿಯಲು ಹೋದ ದನಕರು ಆಳದ ಗುಂಡಿಗೆ ಬಿದ್ದು ಸಾವನ್ನಪ್ಪಿದ ನಿದರ್ಶನಗಳಿವೆ. – ಶಿವಾನಂದ ಕಳವೆ ಮುಂದಿನ ಭಾಗ
ಕರುನಾಡ ಕೆರೆಯಾತ್ರೆ -15. ಕಾಡಾನೆ ಭಯಕ್ಕೆ ಕೆರೆಯ ಕೊಲೆ !