Advertisement

ಕಿತ್ತೂರಿನಲ್ಲೇ ಕಟ್ಟಿಸಿ ಮಾದರಿ ಕೋಟೆ

05:31 PM Jul 31, 2022 | Team Udayavani |

ಚನ್ನಮ್ಮನ ಕಿತ್ತೂರು: ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಥಮ ವೀರ ಮಹಿಳೆ ಚನ್ನಮ್ಮಾಜಿಯ ಕರ್ಮಭೂಮಿ ಕಿತ್ತೂರಿನಲ್ಲಿಯೇ ಮಾದರಿ ಕೋಟೆ ನಿರ್ಮಾಣವಾಗಬೇಕು ಎಂದು ಒಕ್ಕೊರಲಿನ ಕೂಗು ಶುಕ್ರವಾರ ರಾತ್ರಿ ನಡೆದ ಸಭೆಯಲ್ಲಿ ಕೇಳಿಬಂತು.

Advertisement

ಐತಿಹಾಸಿಕ ಕಿತ್ತೂರು ಕೋಟೆಯ ಪ್ರತಿರೂಪದ ಮಾದರಿ ಕೋಟೆಯನ್ನು ಪುನರ್‌ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಸಮೀಪದ ಬಚ್ಚನಕೇರಿ ಹತ್ತಿರ ಇರುವ ಸರಕಾರಿ ಗೋಮಾಳ ಜಾಗೆ ಗುರುತಿಸಲಾಗಿದೆ ಎಂದು ಜು.8ರಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಲಾಗಿದ್ದು ಯಾವುದೇ ತರಹದ ಆಕ್ಷೇಪಣೆ ಸಲ್ಲಿಸುವವರು ಆ.8ರ ಒಳಗಾಗಿ ಸಲ್ಲಿಸಬೇಕು ಎಂದು ದಿನಾಂಕ ನಿಗದಿಪಡಿಸಿದ ಕಾರಣ ಪಟ್ಟಣದ ಸಾರ್ವಜನಿಕರಿಂದ ಇಲ್ಲಿಯ ಕೋಟೆ ಆವರಣದಲ್ಲಿ ಇರುವ ಗ್ರಾಮದೇವಿ ದೇವಸ್ಥಾನದ ಸಭಾ ಭವನದಲ್ಲಿ ತುರ್ತು ಸಭೆ ಜರುಗಿತು.

ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೇಂದ್ರ ಸ್ವಾಮೀಜಿ ಹಾಗೂ ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ರಾಣಿ ಚನ್ನಮ್ಮಾಜಿ ಸ್ವಾಭಿಮಾನಿಗಳಾಗಿ ಬದುಕುವ ಆದರ್ಶ ಗುಣವನ್ನು ಹೇಳಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಸೇರಿಕೊಂಡು ಮಂಗಳವಾರ ಶಾಂತಿಯುತವಾಗಿ ಜಿಲ್ಲಾಧಿಕಾರಿಗಳಿಗೆ ಕೋಟೆಯ ಮರು ನಿರ್ಮಾಣ ವಿಷಯದ ಕುರಿತು ಆಕ್ಷೇಪಣೆ ಸಲ್ಲಿಸೋಣ ಎಂದರು.

ಚನ್ನಮ್ಮಾಜಿ ಕರ್ಮಭೂಮಿ ಕಿತ್ತೂರು ಕೋಟೆಯ ಸುತ್ತಮುತ್ತ ಇರುವ ಜಾಗೆಯಲ್ಲಿ ಮಾದರಿ ಕೋಟೆ ನಿರ್ಮಾಣ ಆಗಬೇಕೆಂಬುದು ನಮ್ಮೆಲ್ಲರ ಆಸೆಯಾಗಿದೆ. ಜಿಲ್ಲಾಧಿಕಾರಿಗಳು ಕಾನೂನಿನ ಪ್ರಕಾರ ಆಕ್ಷೇಪಣೆ ಸಲ್ಲಿಸಲು ಕೇಳಿದ್ದಾರೆ.

ಈ ನಿಟ್ಟಿನಲ್ಲಿ ಕಿತ್ತೂರಿನ ಸರ್ವರ ನಿಯೋಗದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಆಕ್ಷೇಪಣೆ ಸಲ್ಲಿಸಿ ಕಿತ್ತೂರಿನಲ್ಲಿಯೇ ಮಾದರಿ ಕೋಟೆಯ ನಿರ್ಮಾಣವಾಗಲಿ ಎಂದು ಮನವಿ ಮಾಡೋಣ ನಾಡು, ನೆಲ, ಜಲಕ್ಕೆ ಧಕ್ಕೆ ಉಂಟಾಗುವ ಸಂದರ್ಭ ಬಂದರೆ ಅದರ ವಿರುದ್ಧ ಹೋರಾಡಲು ನಾವುಗಳು ಸದಾ ಸಿದ್ಧ ಎಂದು ಹೇಳಿದರು.

Advertisement

ಈ ಸಂದರ್ಭದಲ್ಲಿ ಪುಂಡಲೀಕ ನೀರಲಕಟ್ಟಿ, ಹಬೀಬ ಶಿಲೇದಾರ ಬಿಷ್ಠಪ್ಪ ಶಿಂಧೆ, ಯಲ್ಲಪ್ಪ ಕಡಕೋಳ, ವಿಜಯಕುಮಾರ ಶಿಂಧೆ, ಬಸವರಾಜ ಸಂಗೊಳ್ಳಿ, ವಿಠuಲ ಮಿರಜಕರ, ಎಂ.ಎಫ್‌. ಜಕಾತಿ, ಅನಿಲ ಎಮ್ಮಿ, ಸೇರಿದಂತೆ ಅನೇಕರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಪಟ್ಟಣದ ನಾಗರಿಕರು, ಹಿರಿಯರು, ವಿವಿಧ ಇಲಾಖೆ ಅಧಿಕಾರಿಗಳು ಸಂಘ ಸಂಸ್ಥೆಯ ಸದಸ್ಯರು ಹಾಗೂ ಪಪಂ ಸದಸ್ಯರು ಇದ್ದರು.

ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಸೋಲಿನ ರುಚಿ ತೋರಿಸಿದ ರಾಣಿ ಚನ್ನಮ್ಮನವರ ಪ್ರತಿರೂಪದ ಮಾದರಿ ಕೋಟೆ ಕಿತ್ತೂರಿನಲ್ಲಿಯೆ ನಿರ್ಮಾಣವಾಗಬೇಕು. ಈ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ಹೋರಾಟ ಮಾಡಲು ಸದಾ ಸಿದ್ಧರಾಗೋಣ. -ಡಿ.ಆರ್‌. ಪಾಟೀಲ, ಅಧ್ಯಕ್ಷರು ಅಖೀಲ ಭಾರತ ಲಿಂಗಾಯತ ಸಮಾಜ ಕಿತ್ತೂರ.

ಮಾದರಿ ಕೋಟೆಯ ನಿರ್ಮಿಸಲು ಸರ್ಕಾರದಿಂದ ಅನುದಾನ ತಂದಿದ್ದು ಸ್ವಾಗತಾರ್ಹ. ಆದರೇ ಮಾದರಿ ಕೋಟೆಯು ಕಿತ್ತೂರಿನಲ್ಲಿಯೇ ನಿರ್ಮಾಣಗೊಳ್ಳಬೇಕು. –ಸಂಜೀವ ಲೋಕಾಪೂರ ಕಾಂಗ್ರೆಸ್‌ ಮುಖಂಡರು

ಕಿತ್ತೂರು ಬಿಟ್ಟು ಬೇರೆ ಕಡೆ ನಿರ್ಮಾಣ ಆದರೆ ಮೂಲ ಕೋಟೆಯು ತನ್ನ ಮೌಲ್ಯ ಕಳೆದುಕೊಳ್ಳುತ್ತದೆ. ಕಾರಣ ಕೋಟೆಯ ಸುತ್ತಮುತ್ತ ಇರುವ ರೈತರ ಮನವೊಲಿಸಿ ಅವರ ಭೂಮಿಗೆ ಯೋಗ್ಯ ಬೆಲೆ ನಿಗ ದಿಪಡಿಸಿ ಭೂಮಿ ಪಡೆದು ಕಿತ್ತೂರಿನಲ್ಲಿಯೇ ನಿರ್ಮಿಸಬೇಕು. –ನಿಂಗಪ್ಪ ತಡಕೋಡ, ಕಾಂಗ್ರೆಸ್‌ ಮುಖಂಡರು ಅವರಾದಿ.

ಸಭೆಗೆ ನನಗೆ ಆಮಂತ್ರಣ ಇರಲಿಲ್ಲ. ಸಾಮಾಜಿಕ ಜಾಲತಾಣಗಳ ಮುಖಾಂತರ ನನ್ನ ಗಮನಕ್ಕೆ ಬಂದಿದೆ. ಕಿತ್ತೂರು ಕೋಟೆಯ ಸಮಗ್ರ ಚಿತ್ರಣವನ್ನು ಸ್ವಲ್ಪ ಜಾಗದಲ್ಲಿ ಚಿತ್ರಿಸಲು ಸಾಧ್ಯವಿಲ್ಲ. ಕಾರಣ ವಿಶಾಲ ಸ್ಥಳದಲ್ಲಿ ಕೋಟೆ ನಿರ್ಮಾಣ ಆಗಲಿ. –ಚಿನ್ನಪ್ಪ ಮುತ್ನಾಳ, ಸದಸ್ಯರು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ.

ಕಿತ್ತೂರು ಕೋಟೆಯ ಪ್ರತಿರೂಪದ ಮಾದರಿ ಕೋಟೆಯನ್ನು ಪುನರ್‌ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಶುಕ್ರವಾರ ಜರುಗಿದ ಸಭೆಗೆ ನನ್ನನ್ನು ಕರೆದಿಲ್ಲ, ನನಗೆ ಮಾಹಿತಿಯೂ ಇಲ್ಲ, ಕಿತ್ತೂರು ಕೋಟೆಯ ಅಕ್ಕಪಕ್ಕದ ರೈತರು ತಮ್ಮ ಭೂಮಿಗೆ ಅತಿ ಹೆಚ್ಚು ಬೆಲೆ ಕೇಳುತ್ತಿದ್ದಾರೆ. ಅದಕ್ಕಾಗಿ ಕಿತ್ತೂರು ಕೋಟೆಯನ್ನು ಬಚ್ಚನಕೇರಿ ಗೋಮಾಳದಲ್ಲಿ ನಿರ್ಮಿಸಲು ಸರಕಾರ ಮುಂದಾಗಿದೆ. ರೈತರು ಯೋಗ್ಯ ಬೆಲೆಗೆ ಜಮೀನು ನೀಡುವುದಾದರೆ ಕಿತ್ತೂರಿನಲ್ಲಿ ಕೋಟೆ ನಿರ್ಮಿಸಲಾಗುವುದು. –ಉಳವಪ್ಪ ಉಳ್ಳೆಗಡ್ಡಿ, ಸದಸ್ಯರು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ.

ಸಭೆಯ ವಿಚಾರ ನನ್ನ ಗಮನಕ್ಕೆ ಬಂದಿದ್ದು, ವೈಯಕ್ತಿಕ ಕೆಲಸದ ಮೇಲೆ ಇದ್ದ ಕಾರಣ ಸಭೆಗೆ ಹಾಜರಾಗಲು ಆಗಲಿಲ್ಲ, ರೈತರು ಯೋಗ್ಯ ಬೆಲೆಗೆ ಹೊಂದಾಣಿಕೆಯಾಗಿ ಸ್ಥಳ ನೀಡಿದರೆ ಕಿತ್ತೂರಿನಲ್ಲಿಯೆ ಕೋಟೆ ನಿರ್ಮಾಣ ಆಗುತ್ತದೆ. –ಮಂಜುನಾಥ ತೊಟ್ಟಲಮನಿ, ಪಪಂ ಸದಸ್ಯರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next