Advertisement

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

01:04 AM Jun 06, 2023 | Team Udayavani |

ಇಂದು ಹಿರಿಯ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿ ಎಸ್‌.ಆರ್‌.ಬೊಮ್ಮಾಯಿ ಅವರ 100ನೇ ಜನ್ಮಶತಮಾನೋತ್ಸವ ಆಚರಣೆ ಆರಂಭವಾಗಲಿದೆ. ಶ್ರೀಮತಿ ಗಂಗಮ್ಮಾ ಸೋಮಪ್ಪ ಬೊಮ್ಮಾಯಿ ಎಜುಕೇಶನಲ್‌ ಮತ್ತು ವೆಲ್‌ಫೇರ್‌ ಫೌಂಡೇಶನ್‌ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸುತ್ತೂರು ಶ್ರೀಗಳು, ಮಾಜಿ ಸಿಎಂ ಎಸ್‌.ಎಂ.ಕೃಷ್ಣ, ಮಾಜಿ ಸಚಿವ ಆರ್‌.ವಿ.ದೇಶಪಾಂಡೆ. ಬಿ.ಎಲ್‌.ಶಂಕರ್‌ ಭಾಗಿಯಾಗಲಿದ್ದಾರೆ.

Advertisement

ಸ್ವಾತಂತ್ರ್ಯ ಪೂರ್ವದ ಒಂದು ಘಟನೆ, ಬೆಳಗ್ಗೆ ಧಾರವಾಡದ ಕರ್ನಾಟಕ ಕಾಲೇಜು ಆರಂಭವಾಗುತ್ತಿದ್ದಂತೆ ಪ್ರಾಂಶುಪಾಲ ಊಸಿ ಫ್ಯಾರನ್‌ ಗಟ್ಟಿಯಾಗಿ ಹೇಳಿದ್ದರು; ಮಿಸ್ಟರ್‌ ಸೋಮಪ್ಪ ರಾಯಪ್ಪ ಬೊಮ್ಮಾಯಿ ಪೊಲೀಸರಿಂದ ನಿನಗೆ ವಾರೆಂಟ್‌ ಬಂದಿದೆ. ಯಾವ ಘಳಿಗೆಯಲ್ಲಾದರೂ ಅವರು ನಿನ್ನನ್ನು ಬಂಧಿಸಬಹುದು.

ಈ ಮೇಲಿನ ಘಟನೆಯ ನಾಯಕ ಎಸ್‌. ಆರ್‌ ಬೊಮ್ಮಾಯಿ ಕರ್ನಾಟಕದ ಮುಖ್ಯಮಂತ್ರಿ ಆಗಿ, ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಮಂತ್ರಿಯಾಗಿ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಭಾಪು ಮೂಡಿಸಿದ್ದಾರೆ.

ಇಂದು ಧಾರವಾಡ ಜಿಲ್ಲೆ, ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಸೋಮಪ್ಪ ರಾಯಪ್ಪ ಅವರ 99ನೇ ಹುಟ್ಟು ಹಬ್ಬ. 1924ರ ಜೂ. 6ರಂದು ಜನಿಸಿದ ಎಸ್‌. ಆರ್‌. ಬೊಮ್ಮಾಯಿ, ತಮ್ಮ ಜೀವನದ ಉದ್ದಕ್ಕೂ ಜನಪರ ಹೋರಾಟವನ್ನು ನಡೆಸುತ್ತಾ ಜನಮಾನಸದಲ್ಲಿ ಬೆರೆತು ರಾಷ್ಟ್ರಮಟ್ಟದ ನಾಯಕರಾದರು.

ಬಾಲಕನಾಗಿದ್ದಾಗ ರಾಜರ ಮುಂದೆ ರೈತರ ಮನವಿ ಪತ್ರ ಓದಿ, ಬರಗಾಲದಿಂದ ಬೆಂದ ರೈತರ ಜಮೀನುಗಳ ರೈತರ ಕಂದಾಯವನ್ನು ಕಡಿಮೆ ಮಾಡಿಸಿದರು. ಅನಂತರ ವಿದ್ಯಾರ್ಥಿ ದೆಸೆಯಲ್ಲಿ ಸ್ವತಂತ್ರ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಪಶ್ಚಿಮ ಬಂಗಾಲದ ಮಾನವತಾವಾದಿ ಎಂ. ಎನ್‌. ರಾಯ್‌ ಅವರ ಹ್ಯೂಮನ್‌ ರಾಡಿಕಲ್‌ ಪಕ್ಷದ ಮೂಲಕ ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹುಬ್ಬಳ್ಳಿಗೆ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರನ್ನು ಕರೆಸಿಕೊಂಡು ಬೃಹತ್‌ ಸಮಾವೇಶ ಮಾಡಿ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೆಚ್ಚಿಸಿದರು.

Advertisement

ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ವ್ಯಾಸಂಗ ಮಾಡಿದ ಬೊಮ್ಮಾಯಿಯವರು ಬ್ರಿಟಿಷ್‌ ಆಡಳಿತದ ವಿರುದ್ಧ ಜನರನ್ನು ಸಂಘಟಿಸಿದರು. ಪೊಲೀಸರು ಬಂಧಿಸಲು ಬಂದಾಗ ಕಾಡು ಮೇಡುಗಳಲ್ಲಿ ಅಲೆದು ತಪ್ಪಿಸಿಕೊಳ್ಳುತ್ತಿದ್ದರು.

ಸ್ವಾತಂತ್ರ್ಯದ ಅನಂತರ ನಡೆದ ಏಕೀಕರಣ ಚಳ ವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಚಳವಳಿ ನಿರ ತರ ವಕಾಲತ್ತು ಮಾಡುತ್ತಿದ್ದ ಅವರನ್ನು ಕಾನೂನು ಕುಣಿಕೆ ಯಿಂದ ಪಾರು ಮಾಡಿದರು. ಅನಂತರ ನಡೆದ ಗೋವಾ ವಿಮೋಚನಾ ಚಳವಳಿಯಲ್ಲಿ ತಮ್ಮನ್ನು ತೊಡ ಗಿಸಿಕೊಂಡರು. ಬಳಿಕ ವಕೀಲರಾಗಿ ಗೇಣಿದಾರರ ಪರ ವಕಲತ್ತು ಮಾಡಿ ಜಮೀನಾರಿಕೆಯ ವಿರುದ್ಧ ಸದ್ದಿಲ್ಲದ ಸಮರ ಸಾರಿದರು. ಭೂ ಸುಧಾರಣೆ ಕಾನೂನಿನ ಲಾಭ ಪಡೆದ ಸಾವಿರಾರು ಜನರು ಬೊಮ್ಮಾಯಿ ಅವರ ಮಾನವೀಯತೆಯನ್ನು ಮೆಚ್ಚಿದರು.

ರೈತರ ಪರವಾಗಿ ಸದಾ ಹೋರಾಡುತ್ತಾ ವಕೀಲ ವೃತ್ತಿಯನ್ನು ಅವರಿಗಾಗಿ ವಿನಿಯೋಗ ಮಾಡಿದ ಬೊಮ್ಮಾಯಿ, ಸಹಜವಾಗಿಯೇ ಜನರ ನಾಯಕರಾಗಿ ರೂಪುಗೊಂಡಿದ್ದರು. 1962ರಲ್ಲಿ ಕುಂದಗೋಳ ವಿಧಾನಸಭೆಯ ಅಭ್ಯರ್ಥಿಯಾಗಿ ಕಾಂಗ್ರೆಸ್‌ಗೆ ಪ್ರಬಲ ಸ್ಪರ್ಧೆ ನೀಡಿ ಅಲ್ಪ ಮತಗಳಿಂದ ಪರಾಭವಗೊಂಡರು.

1967ರಲ್ಲಿ ಇದೇ ಕ್ಷೇತ್ರದಲ್ಲಿ ಹತ್ತು ಸಾವಿರಕ್ಕಿಂತಲೂ ಅಧಿಕ ಮತಗಳಿಂದ ಆಯ್ಕೆಯಾಗಿ ವಿಧಾನಸಭೆಯನ್ನು ಪ್ರವೇಶಿಸಿದರು. ಜನರ ಪರವಾಗಿ ಹೋರಾಡುತ್ತಾ ಜನ ನಾಯಕರಾದ ಸೋಮಪ್ಪ ರಾಯಪ್ಪ ಬೊಮ್ಮಾಯಿ ವಿಧಾನ ಪರಿಷತ್ತಿನ ಸದಸ್ಯರಾಗಿಯೂ ಕೆಲಸ ಮಾಡಿದರು. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ಜನರ ಅಶೋತ್ತರಗಳನ್ನು ಸರಕಾರದ ಗಮನಕ್ಕೆ ತಂದರು.

ಜನರಿಂದ ಆಯ್ಕೆ ಆದ ಅನಂತರವೂ ತಮ್ಮ ಹೋರಾಟದ ಛಲ ಬಿಡದ ಎಸ್‌. ಆರ್‌. ಬೊಮ್ಮಾಯಿ ಅಂದು ಉದಯಗೊಂಡ ಜನತಾ ನಾಯಕರಲ್ಲಿ ಒಬ್ಬರಾದರು. ಅನಂತರ ಅ ಪಕ್ಷದ ಅಧ್ಯಕ್ಷರಾಗಿ ಕರ್ನಾಟಕದ ರಾಜ್ಯ ರಾಜಕೀಯದಲ್ಲಿ ಅನೇಕ ಧೃವೀಕರಣ ಕ್ರಮಗಳಿಗೆ ಕೈ ಹಾಕಿದರು.  ರೈತ, ದಲಿತ ಮತ್ತು ಕನ್ನಡ ಚಳುವಳಿಗಾರರನ್ನು ಒಗ್ಗೂಡಿಸಿ ಬೃಹತ್‌ ಹೊರಾಟ ರೂಪಸಿವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಿದರು.

ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ತಿರಸ್ಕೃತಗೊಂಡು ಜನತಾ ಪಕ್ಷ ಅಧಿಕಾರಕ್ಕೆ ಬಂದಿತು. ರಾಮಕೃಷ್ಣ ಹೆಗಡೆ ಮೊದಲ ಕಾಂಗ್ರೆಸೇತರ ಮುಖ್ಯಮಂತ್ರಿಯಾಗಿ ಆಯ್ಕೆ ಆದರು. ಬೊಮ್ಮಾಯಿ ಅವರು ಪಕ್ಷದ ಪ್ರಮುಖ ಸಚಿವರಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡಿದರು. ಬಡ ಜನರಿಗೆ ಅಕ್ಕಿ, ಸೀರೆ, ದೋತಿ ಕೊಡುವ ಯೋಜನೆಯನ್ನು° ರಾಜ್ಯದಲ್ಲಿ ಅನುಷ್ಠಾನಗೊಳಿಸಿದ ಮೊದಲಿಗರು ಎಸ್‌. ಆರ್‌. ಬೊಮ್ಮಾಯಿ.

ಮುಖ್ಯಮಂತ್ರಿ ಪದವಿಯ ಅನಂತರ, ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾದ ಇವರು ಜನತಾದಳದ ರಾಷ್ಟ್ರೀಯ ಅಧ್ಯಕ್ಷರಾದರು. ಮುಂದೆ ಮಾನವ ಸಂಪನ್ಮೂಲ ಸಚಿವರಾಗಿ ಕರ್ನಾಟಕಕ್ಕೆ ಅನೇಕ ಶೈಕ್ಷಣಿಕ ಯೋಜನೆಗಳನ್ನು ಅನುಷ್ಠಾನಗೊಳಿಸಿದರು. ಬೊಮ್ಮಾಯಿ ಅವರು ತಮ್ಮನ್ನು ಮುಖ್ಯಮಂತ್ರಿ ಪದವಿಯಿಂದ ಇಳಿಸಿದ ರಾಜ್ಯಪಾಲರನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ವರೆಗೂ ಹೋರಾಡಿದ್ದು ಭಾರತದ ಪ್ರಜಾಪ್ರಭುತ್ವದ ಐತಿಹಾಸಿಕ ಗೆಲುವಾಗಿದೆ.

ರಾಜ್ಯ ರಾಜಕೀಯದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಿದೆ. ಎಸ್‌.ಆರ್‌.ಬೊಮ್ಮಾಯಿ ಅವರ ಮತ್ತೂಂದು  ವಿಜಯ  ದೇಶದ ಪ್ರಜಾಪ್ರಭುತ್ವದ ಜಯವಾಗಿದೆ. ಕರ್ನಾಟಕದ ರಾಜ್ಯಪಾಲರಾಗಿದ್ದ ವೆಂಕಟಸುಬ್ಬಯ್ಯ ಅವರು, 1989ರ ಎಪ್ರಿಲ್‌ 21ರಂದು ಬೊಮ್ಮಾಯಿ ಅವರ ಸರಕಾರವನ್ನು ವಜಾ ಮಾಡಿದ್ದು, ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ ಕರಾಳ ದಿನ. ಎಸ್‌.ಆರ್‌. ಬೊಮ್ಮಾಯಿ ಅವರು ರಾಜ್ಯಪಾಲರ ಈ ನಿಲುವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದರು. ಸುಪ್ರೀಂಕೋರ್ಟ್‌ 1994ರ ಮಾ. 11ರಂದು ಈ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿತು. ಜನತೆಯಿಂದ ಆಯ್ಕೆ  ಆದ  ಸರಕಾರದ ಬಹುಮತವನ್ನು ವಿಧಾನ ಸಭೆಯಲ್ಲಿ ಮಾತ್ರ ಪರೀಕ್ಷೆಗೆ ಒಳಪಡಿಸಬೇಕು. ರಾಜ್ಯ ಪಾಲರ ಇಚ್ಛಾನುಸಾರವಲ್ಲ ಎಂದು ಸ್ಪಷ್ಟವಾಗಿ ತಿಳಿಸಿತು.

ಅಧಿಕಾರ ಇಲ್ಲದಾಗ ಜನಪರವಾಗಿ ಹೋರಾಡುತ್ತ ಅಧಿಕಾರ ಬಂದಾಗ ಜನರ ಪರವಾಗಿ ಕೆಲಸ ಮಾಡುವ ಮೂಲಕ ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ಎಸ್‌.ಆರ್‌. ಬೊಮ್ಮಾಯಿ ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿಯಾಗಿ ಬದುಕಿದರು.

-ಚಂದ್ರಶೇಖರ ಬೆಳಗೆರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next