ಮುಸ್ಸಂಜೆಯ ವೇಳೆಯಲಿ ಕೆಂಪಗಿನ ಸೂರ್ಯ, ಮೋಡಗಳೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾಗ ವೈಯಾರಿಯಂತೆ ಅಡ್ಡಬಂದ ಕಪ್ಪಗಿನ ಮೋಡ ನೀಲಾಕಾಶಕ್ಕೆ ಚಪ್ಪರ ಹಾಕಿದಂತಿತ್ತು. ಈ ಸೌಂದರ್ಯವನ್ನು ಸವಿಯುತ್ತೆ ಒಂದು ಕಪ್ ಚಾದೊಂದಿಗೆ ಮನೆಯ ಮಹಡಿಗೆ ಬಂದು ಕೂತೆ.
ಚಾ ವನ್ನು ಕುಡಿಯುತ್ತಾ ಮೊಬೈಲ್‌ನಲ್ಲಿ ವಾಟ್ಸಾಪ್ ಸ್ಟೇಟಸ್ ನೋಡುತ್ತಿದ್ದವಳಿಗೆ ಕಂಡದ್ದು ಅಗಷ್ಟೇ ಮಳೆಬಿದ್ದು ಹಚ್ಚ ಹಸುರಿನ ನಡುವೆ ಕರಿ ಹಾವಿನಂತೆ ಮಲಗಿರುವ ಡಾಮರು ರೋಡ್‌ನಲ್ಲಿ ಹಾಲಿನ ಕ್ಯಾನ್ ಹಿಡಿದುಕೊಂಡು ಸಾಗುತ್ತಿರುವ ಗಂಡಸು, ಒಂಟಿ ನಾಯಿ, ಸೈಕಲ್ ಸವಾರಿಯ ಮಕ್ಕಳು. ಈ ಎಲ್ಲ ಚಿತ್ರಣಗಳನ್ನು ನೋಡುತ್ತಾ ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದವಳಿಗೆ ಟಪ್ಪನೆ ಕೈಯ ಮೇಲೊಂದು ಹನಿ ಬಿದ್ದಾಗಲೇ ಗೊತ್ತಾಗಿದ್ದು ಜಿಟಿಜಿಟಿ ಮಳೆಯ ದನಿ. ಮಳೆಯ ನೀರನ್ನು ಚಿಟಪಟ ಮಾಡುತ್ತಾ ಹಾಡು ಹಾಡುತ್ತಿದ್ದವಳಿಗೆ ಬಂತು ನೋಡಿ ಅಪರಿಚಿತ ನಂಬರಿಂದ ಒಂದು ಕಾಲ್. ಆ ಕಾಲ್ ಮಿಸ್ಡ್ ಕಾಲ್ ಆಗಿದ್ದರಿಂದ ನಾನೇನು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಸ್ವಲ್ಪ ಹೊತ್ತಿನ ಅನಂತರ ಮತ್ತೆ ಅದೇ ನಂಬರಿಂದ ಕಾಲ್ ಬಂತು ರಿಸೀವ್ ಮಾಡಿದೆ. ಸಂಭಾಷಣೆ ಇಲ್ಲದೇ ಮೊದಲ ಐದು ನಿಮಿಷ ಮೌನವಾಗಿತ್ತು.
ಮಳೆಯೊಂದಿಗೆ ಸಂತೋಷದಿಂದ ಸಮಯ ಕಳೆಯುತ್ತಿದ್ದಾಗ ಮತ್ತದೇ ನಂಬರಿಂದ ಕಾಲ್ ಬಂದಾಗ ರಿಸೀವ್ ಮಾಡಿದೆ ಈಗ ಮಾತ್ರ ಜೋರಾದ ಮಳೆಯ ಶಬ್ದ ಕೇಳುತ್ತಿತ್ತೇ, ಹೊರತು ಬೇರೇನೂ ಕೇಳಿಸುತ್ತಿರಲಿಲ್ಲ. ನಾನು ಅಜ್ಜಿ ಮನೆಯಲ್ಲಿ ಇದ್ದಿದ್ದರಿಂದ ಅಷ್ಟೊತ್ತಿಗೆ ಅಮ್ಮನ ಕಾಲ್ ಬಂತು. ನೆಟ್‌ವರ್ಕ್ ಕೂಡ ಸರಿಯಾಗಿ ಸಿಗದ ಕಾರಣ ಜತೆಗೆ ಈ ಜಿಟಿಜಿಟಿ ಮಳೆ ಬೇರೆ. ಕೈಯನ್ನು ಉದ್ದ ಮಾಡುತ್ತಾ ಮೂಲೆಮೂಲೆಗೆ ನೆಟ್‌ವರ್ಕ್ ಹುಡುಕುತ್ತಾ ಹೋದ ಹಾಗೆ ಕೈ ನೋವಾಯಿತು, ಅಷ್ಟೊತ್ತಿಗೆ ಕಾಲ್ ಕೂಡ ಕಟ್ ಆಯಿತು.
ಆದರೆ ಆ ಅಪರಿಚಿತ ನಂಬರ್‌ನ ಕಾಲ್ ಇನ್ನೂ ಕೂಡ ಕಟ್ಟಾಗಿರಲಿಲ್ಲ. ನಾನಂತೂ ಆ ನಂಬರ್ ಯಾರದೆಂದು ಹುಡುಕಾಡುವ ಗೋಜಿಗೆ ಹೋಗಲಿಲ್ಲ. ಮಳೆ ಬಿಟ್ಟು ಸ್ವಲ್ಪ ಹೊತ್ತಿಗೆ ನನ್ನ ಸವಾರಿ ಸೈಕಲ್‌ನಲ್ಲಿ ಮನೆಯ ಎದುರಿನ ಡಾಮರು ರೋಡ್‌ನಲ್ಲಿ ಹೊರಟಿತು. ಆಗಷ್ಟೇ ಮಳೆ ಬಂದು ನಿಂತು ಹೋಗಿದ್ದರಿಂದ ಡಾಮರು ರೋಡ್ ಗಾಜಿನಂತೆ ಪ್ರತಿಫಲಿಸುತಿತ್ತು. ಮತ್ತೆ ಮಳೆಯಾಗುವ ಸಾಧ್ಯತೆ ಜಾಸ್ತಿ ಇದ್ದಿದ್ದರಿಂದ ನನ್ನ ಸವಾರಿ ಮತ್ತೆ ಮನೆ ಕಡೆ ಹೊರಟಿತು. ಅಷ್ಟೊತ್ತಿಗೆ ಮತ್ತದೇ ನಂಬರಿಂದ ಕಾಲ್ ಬಂತು ತಕ್ಷಣರಿ ಸೀವ್ ಮಾಡ್ದಾಗ ಆ ಕಡೆಯಿಂದ ಹಲೋ ಅಂತ ಕೇಳೊತ್ತಿಗೆ ನಾನು ಪಕ್ಕದಲ್ಲಿದ್ದ ನೀರು ತುಂಬಿದ ಚಿಕ್ಕ ಹೊಂಡದಲ್ಲಿದ್ದೆ.
ಒಂದು ವರ್ಷದ ಬಳಿಕ ಅಂದರೆ ಇವತ್ತು ಮಳೆಯ ನೀರಿಗೆ ಕೈಯಾಡುತ್ತಾ “ಮಳೆಯಲಿ ಜೊತೆಯಲಿ” ಹಾಡು ಗುನುಗುತ್ತಿದ್ದವಳಿಗೆ ಅದೇ ನಂಬರ್‌ನ ಕಾಲ್ ಬಂದಾಗ ರಿಸೀವ್ ಮಾಡಿದ್ದು ಗೊತ್ತಾಗಿದ್ದೇ ಆ ಕಡೆಯಿಂದ ಇಂಪಾದ ಧ್ವನಿ ಹಾಡಿಗೆ ಜತೆಯಾದಾಗ..
ತೀರ್ಥ ಎ. ನೆಲ್ಯಾಡಿ
ಮಂಗಳೂರು ವಿ.ವಿ.