ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದ ಬಳಿ ಈಜಲು ಹೋಗಿದ್ದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿಯನ್ನು ರಕ್ಷಿಸಲು ಹೋಗಿದ್ದ ಯುವಕನೊಬ್ಬ ನೀರುಪಾಲಾಗಿರುವ ಘಟನೆ ಸಂಭವಿಸಿದೆ.
ಇದನ್ನೂ ಓದಿ:ಕಮೋಡ್‌ನಲ್ಲಿ ಬೃಹತ್ ಗ್ರಾತದ ಹೆಬ್ಬಾವು!: ಬೆಚ್ಚಿ ಬಿದ್ದ ಮಹಿಳೆ; ವಿಡಿಯೋ ವೈರಲ್
ಮೈಸೂರು ಮೂಲದ, ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಚ್ಚಿದಾನಂದ(20), ಗೌರಿಬಿದನೂರು ತಾಲ್ಲೂಕಿನ ರಾಮಚಂದ್ರಾಪುರ ಗ್ರಾಮದ ನರೇಶ್ ಬಾಬು ನೀರುಪಾಲಾದವರು.
ಸಚ್ಚಿದಾನಂದ, ಸ್ನೇಹಿತರ ಜೊತೆ ಶ್ರೀನಿವಾಸ ಸಾಗರ ಜಲಾಶಯಕ್ಕೆ ಈಜಾಡಲು ಹೋಗಿದ್ದರು. ಈಜು ಬಾರದೆ ಸಚ್ಚಿದಾನಂದ ಮುಳುಗಡೆಯಾಗುತ್ತಿದ್ದ ಸಂದರ್ಭದಲ್ಲಿ ರಕ್ಷಿಸಲು ಧಾವಿಸಿದ ಗೌರಿಬಿದನೂರು ತಾಲ್ಲೂಕಿನ ರಾಮಚಂದ್ರಾಪುರ ನರೇಶ್ ಬಾಬು ಸಹ ಜಲಾಶಯದಲ್ಲಿ ಮುಳುಗಿದ್ದಾರೆ.
ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಪ್ರದೀಪ್ ಪೂಜಾರಿ ಮತ್ತು ಸಿಬಂದಿ ಭೇಟಿ ನೀಡಿ ಅಗ್ನಿಶಾಮಕದಳದ ಸಿಬಂದಿಯ ಸಹಕಾರದಿಂದ ಇಬ್ಬರಿಗಾಗಿ ಶೋಧ ಕಾರ್ಯವನ್ನು ಆರಂಭಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸತತ ಒಂದು ವಾರದಿಂದ ಮಳೆಯಾಗುತ್ತಿದ್ದು, ಬಹುತೇಕ ಕೆರೆ ಕುಂಟೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿದೆ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಮತ್ತು ಪ್ರಾಕೃತಿಕ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಲು ಬರುವ ಪ್ರವಾಸಿಗರು ಈಜಾಡಲು ಸಾಹಸ ಮಾಡಲು ಅವಕಾಶ ನೀಡಬಾರದೆಂದು ನಾಗರಿಕರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳನ್ನು ಮನವಿ ಮಾಡಿದ್ದಾರೆ.
ಮೈದುಂಬಿ ಹರಿಯುತ್ತಿರುವ ಕೆರೆಗಳು ಮತ್ತು ಜಲಾಶಯಗಳ ಸುತ್ತಮುತ್ತ ಬೇಲಿ ಹಾಕಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.