ಬೀದರ: ಗಗನಕ್ಕೇರುತ್ತಿರುವ ಪೆಟ್ರೋಲ್ ಬೆಲೆಯಿಂದ ಬೇಸತ್ತಿರುವ ವಾಹನ ಸವಾರರು ಈಗ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಅದರಂತೆ ಬೀದರನಲ್ಲೊಬ್ಬ ಎಲೆಕ್ಟ್ರಾನಿಕ್ ಮೆಕ್ಯಾನಿಕ್‌ವೊಬ್ಬರು ಗುಜರಿಗೆ ಹಾಕಿದ್ದ ದ್ವಿಚಕ್ರ ವಾಹನವನ್ನು ಚಾರ್ಜಿಂಗ್ (ಎಲೆಕ್ಟ್ರಾನಿಕ್) ಬೈಕ್‌ನ್ನಾಗಿ ಆವಿಷ್ಕರಿಸಿದ್ದು, ಜನರ ಗಮನ ಸೆಳೆಯುತ್ತಿದೆ.
ನಗರದಲ್ಲಿ ಸಂತೋಷ ಎಲೆಕ್ಟ್ರಿಕ್ ರಿಪೇರಿ ಶಾಪ್ ನಡೆಸುವ ಸಿದ್ರಾಮ್ ಅಂಬೆಸಿಂಗೆ ಚಾರ್ಜಿಂಗ್ ಬೈಕ್‌ನ್ನು ಆವಿಷ್ಕರಿಸಿದವರು. ಪೆಟ್ರೋಲ್ ಬೆಲೆ ಶತಕ ಬಾರಿಸುತ್ತಿದ್ದಂತೆ ಸಿದ್ರಾಮ್ ಅವರೂ ಎಲೆಕ್ಟ್ರಾನಿಕ್ ಬೈಕ್ ಖರೀದಿಸುವ ಯೋಚನೆ ಮಾಡಿದರು. ಆದರೆ, ತಾವೇ ಮೆಕ್ಯಾನಿಕ್ ಆಗಿರುವುದರಿಂದ ಖುದ್ದು ಬೈಕ್‌ನ್ನು ತಯಾರಿಸಲು ನಿರ್ಧರಿಸಿದರು. ಕೊನೆಗೆ ಗುಜರಿಗೆ ಸೇರಿದ್ದ ತಮ್ಮ ಬೈಕ್‌ನ್ನೇ ಅತಿ ಕಡಿಮೆ ಖರ್ಚಿನಲ್ಲಿ ಚಾರ್ಜಿಂಗ್ ಬೈಕ್‌ನ್ನಾಗಿ ಬದಲಾಯಿಸಿದ್ದಾರೆ.
ಈ ಹಿಂದೆ ಎರಡು ಬ್ಯಾಟರಿ ಚಾಲಿತ ಸೈಕಲ್‌ಗಳನ್ನು ತಯಾರಿಸಿದ್ದ ಅನುಭವ ಹಿನ್ನೆಲೆ ಸಿದ್ರಾಮ್ ಅವರಿಗೆ ಚಾರ್ಜಿಂಗ್ ಬೈಕ್ ಸಿದ್ಧಪಡಿಸಲು ಸುಲಭವಾಯಿತು. ತಮ್ಮ ಹೊಂಡಾ ಯುನಿಕಾರ್ನ್ ದ್ವಿಚಕ್ರ ವಾಹನಕ್ಕೆ 750 ವ್ಯಾಟ್ ಮೋಟಾರ್ ಮತ್ತು 12 ವೋಲ್ಟ್ ಒಟ್ಟು 4 ಬ್ಯಾಟರ್‌ಗಳನ್ನು ಅಳವಡಿಸಿದ್ದು, ಕನ್ವರ್ಟರ್ ಮತ್ತು ಎಕ್ಸ್‌ಲೆಟರ್ ಸೇರಿ ಇನ್ನಿತರ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಕೇವಲ ಮೂರ್‍ನಾಲ್ಕು ದಿನಗಳಲ್ಲಿ ಬೈಕ್‌ನ್ನು ತಯ್ನಾರಿಸಿದ್ದಾರೆ. ಇದಕ್ಕಾಗಿ 25 ಸಾವಿರ ರೂ. ವೆಚ್ಚ ಮಾಡಿದ್ದಾರೆ.
ಈ ಎಲೆಕ್ಟ್ರಿಕ್ ವಾಹನ ಒಮ್ಮೆ (2ರಿಂದ 3 ಗಂಟೆ) ಚಾರ್ಜ್ ಮಾಡಿದರೆ ಸಾಕು 60 ರಿಂದ 70 ಕಿಮೀ ಓಡಬಲ್ಲ ಸಾಮರ್ಥ್ಯ ಹೊಂದಿದ್ದು, ಒಮ್ಮೆ ಚಾರ್ಜ್‌ಗೆ ಕೇವಲ 10-15 ರೂ. ಖರ್ಚು ತಗುಲಿದಂತಾಗುತ್ತಿದೆ. ಇನ್ನೂ ಪೆಟ್ರೋಲ್‌ಗೆ ಗುಡ್ ಬೈ ಹೇಳಿರುವುದರಿಂದ ದಿನಾಲೂ 100 ರೂ. ಉಳಿತಾಯ ಮಾಡುತ್ತಿದ್ದಾರೆ ಎನ್ನುತ್ತಾರೆ ಮೆಕ್ಯಾನಿಕ್ ಸಿದ್ರಾಮ್.
ಸದಾ ಹೊಸತನದ ಆವಿಷ್ಕಾರದಲ್ಲಿ ತೊಡಗಿಸಿಕೊಳ್ಳುವ ಮೆಕ್ಯಾನಿಕ್ ಸಿದ್ರಾಮ್ ಅವರ ಚಾರ್ಜಿಂಗ್ ದ್ವಿಚಕ್ರ ವಾಹನ ಈಗ ಜನಾಕರ್ಷಣೆ ಆಗಿದ್ದು, ಬೈಕ್‌ನ್ನು ನೋಡಲು ಜನ ಮುಗಿಬಿಳುತ್ತಿದ್ದಾರೆ. ಹಳೆಯ ಬೈಕ್ ಗುಜರಿಗೆ ಕೊಡುವ ಬದಲು ಅದನ್ನೇ ಎಲೆಕ್ಟ್ರಿಕ್ ಬೈಕ್‌ನ್ನಾಗಿ ಬದಲಾಯಿಸಲು ಮನಸ್ಸು ಮಾಡುತ್ತಿರುವ ಸವಾರರು, ನಮಗೂ ಈ ರೀತಿ ಒಂದು ಚಾರ್ಜಿಂಗ್ ಬೈಕ್ ಮಾಡಿಕೊಡುವಂತೆ ದುಂಬಾಲು ಬೀಳುತ್ತಿದ್ದಾರೆ.
ಪೆಟ್ರೋಲ್ ದುಬಾರಿ ದರದಿಂದ ಜನ ಸಾಮಾನ್ಯರ ಮೇಲೆ ಆರ್ಥಿಕ ಹೊರೆ ಆಗುತ್ತಿದೆ. ನಾನು ತಯಾರಿಸಿದ ಚಾರ್ಜಿಂಗ್ ವಾಹನ ಬಳಕೆಯಿಂದ ಹೊರೆ ಕೊಂಚ ಇಳಿಕೆಯಾಗಬಹುದು. ಹಾಗಾಗಿ ಜನರ ಅನುಕೂಲವಾಗುವ ನಿಟ್ಟಿನಲ್ಲಿ ನನ್ನ ಕೆಲಸದ ಬಿಡುವಿನ ಸಮಯದಲ್ಲಿ ಇತರರಿಗೂ ಬೈಕ್ ತಯಾರಿಸಿ ಕೊಡುತ್ತೇನೆ ಎಂದು ಹೇಳುತ್ತಾರೆ ಸಿದ್ರಾಮ್.
-ಶಶಿಕಾಂತ ಬಂಬುಳಗೆ