Advertisement

ಗಂಗಾವತಿ: ಸಂವಿಧಾನ, ಪ್ರಜಾಪ್ರಭುತ್ವ ಸಂರಕ್ಷಣೆಗಾಗಿ ದಲಿತ ಸಂಘಟನೆಗಳ ಐಕ್ಯತೆ ಅಗತ್ಯ

05:42 PM Nov 22, 2022 | Team Udayavani |

ಗಂಗಾವತಿ: ಚಾತುವರ್ಣ ವ್ಯವಸ್ಥೆಯ ಮರುಸ್ಥಾಪನೆಗಾಗಿ ಪಟ್ಟಭದ್ರ ಸಂಘಟನೆ ಸೂಚನೆಯಂತೆ ಕೇಂದ್ರ ಹಾಗೂ ರಾಜ್ಯ ಸರಕಾರ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಯತ್ನವನ್ನು ಖಂಡಿಸಲು ದಲಿತ, ಪ್ರಗತಿಪರ, ಕೂಲಿಕಾರ್ಮಿಕ, ರೈತ ಮತ್ತು ಕನ್ನಡಪರ ಸಂಘಟನೆಗಳ ಐಕ್ಯತೆ ಅಗತ್ಯವಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಕುಂಟೋಜಿ ಮರಿಯಪ್ಪ ಹೇಳಿದರು.

Advertisement

ಅವರು ನಗರದ ಹಳೆಯ ಪ್ರವಾಸಿ ಮಂದಿರದಲ್ಲಿ ದಲಿತರ ಸಾಂಸ್ಕೃತಿಕ ಪ್ರತಿರೋಧ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶದ ಕರಪತ್ರಗಳ ಬಿಡುಗಡೆಗೊಳಿಸಿ ಮಾತನಾಡಿದರು.

ಡಿ.06 ರಂದು ಬಾಬಾ ಸಾಹೇಬ ಅಂಬೇಡ್ಕರ್ ಅವರ ಪರಿದಿಬ್ಬಾಣ ದಿನದಂದು ಬೆಂಗಳೂರಿನಲ್ಲಿ ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ ಜರುಗಲಿದ್ದು ದೇಶದ ಮೂಲ ಆಸ್ಮತೆಯ ಪ್ರತೀಕವಾಗಿರುವ ದಲಿತ, ಹಿಂದುಳಿದ, ಅಲೆಮಾರಿ, ಬುಡಕಟ್ಟು ಮತ್ತು ಭಾಷಾ ಅಲ್ಪಸಂಖ್ಯಾತರನ್ನು ಒಗ್ಗಟ್ಟನ್ನು ಮುರಿಯಲು ಸರಕಾರಗಳು ಇನ್ನಿಲ್ಲದ ಯತ್ನ ನಡೆಸುತ್ತಿದ್ದು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಸ್ತಿತ್ವ ಮಾರಕವಾಗುವಂತಹ ನಿರ್ಣಯಗಳನ್ನು ಮಾಡಲಾಗುತ್ತಿದೆ ಎಂದರು.

ಸಂವಿಧಾನದತ್ತ ಸರಕಾರಿ ಸಂಸ್ಥೆಗಳಲ್ಲಿ ಪದೇ ಪದೇ ಹಸ್ತಕ್ಷೇಪ ಮಾಡುವ ಮೂಲಕ ದಲಿತ, ಹಿಂದುಳಿದ ಅಲೆಮಾರಿ ಬುಡಕಟ್ಟು ಮತ್ತು ಅಲ್ಪಸಂಖ್ಯಾತರನ್ನು ಭಯದಲ್ಲಿರಿಸುವ ಯತ್ನಗಳು ನಿರಂತರವಾಗಿ ನಡೆಯುತ್ತಿದ್ದು, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ಆಶಯದ ಭಾರತ ನಿರ್ಮಾಣ ಇದರಿಂದ ಕಷ್ಟಸಾಧ್ಯವಾಗುತ್ತಿದೆ. ಡಾ|ಬಿ.ಆರ್.ಅಂಬೇಡ್ಕರ್ ಮಾಡಿರುವ ಸಾಮರಸ್ಯದ ವ್ಯವಸ್ಥೆಯನ್ನು ಬುಡಮೇಲು ಮಾಡುವ ಷಡ್ಯಂತ್ರ ತಡೆಯಲು ದಲಿತ ಸೇರಿ ಎಲ್ಲಾ ಸಂಘಟನೆಗಳ ಐಕ್ಯತೆ ಅವಶ್ಯವಿದ್ದು ಬಾಬಾ ಸಾಹೇಬರ ಪರಿನಿಬ್ಬಾಣದ ದಿನದಂದು ಐಕ್ಯತೆಯಿಂದ ಹೋರಾಟ ಮಾಡುವ ಸಂಕಲ್ಪಕ್ಕಾಗಿ ಡಿ.06 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ದಲಿತ, ಹಿಂದುಳಿದ, ಅಲೆಮಾರಿ, ಬುಡಕಟ್ಟು ಮತ್ತು ಭಾಷಾ ಅಲ್ಪಸಂಖ್ಯಾತರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಸೇರಿ ಒಗ್ಗಟ್ಟಿನ ಪ್ರತಿಜ್ಞಾವಿಧಿ ಪಡೆಯಬೇಕಿದೆ. ಆದ್ದರಿಂದ ಕೊಪ್ಪಳ ಜಿಲ್ಲೆಯಿಂದ ಲಕ್ಷಾಂತರ ಜನ ಕಾರಟಗಿ ಯಶವಂತಪೂರ ರೈಲಿನ ಮೂಲಕ ತೆರಳಲಿದ್ದು ಸರ್ವರೂ ಸಹಕಾರ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಚಿಂತಕ ಕಾರ್ಮಿಕ ಮುಖಂಡ ಜೆ.ಭಾರದ್ವಾಜ್,ಹುಲುಗಪ್ಪ ಮಾಸ್ತರ್, ಹುಲುಗಪ್ಪ ಮಾಗಿ, ತಿಮ್ಮಣ್ಣ, ಹಂಪೇಶರಿಗೋಲು, ರವಿಬಾಬು, ಪರಂಧಾಮ, ಬಸವರಾಹ ಪೂಜಾರಿಮ, ದೊಡ್ಡಭೋಜಪ್ಪ, ಹನುಮಂತಪ್ಪ ಮೂಳೆ, ಕಂಠೆಪ್ಪ ಹಣವಾಳ ಸೇರಿ ಅನೇಕರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next