ಹಾಸನ: ತಮ್ಮ ಮೊಮ್ಮಕ್ಕಳನ್ನು ಬೆಳೆಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಕ್ಕಲಿಗರನ್ನು ತುಳಿತಿದ್ದಾರೆ. ಮೈತ್ರಿಯಿಂದ ಲಾಭ ಆಗೋದು, ಆಗ್ತಿರೋದು ದೇವೇಗೌಡರ ಕುಟುಂಬಕ್ಕೆ ಮಾತ್ರ. ಹೀಗಾಗಿ ಹಾಸನ ಕ್ಷೇತ್ರದ ಜನರ ರಕ್ಷಣೆಗೋಸ್ಕರ ಗುರುವಾರ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎ.ಮಂಜು ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ಮತ್ತು ನಾನು ಮಾತನಾಡಿರೋದು ನಿಜ. ರಾಜಕಾರಣ ನಿಂತ ನೀರಲ್ಲ. ನನ್ನ ಕ್ಷೇತ್ರದ ಕಾರ್ಯಕರ್ತರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧನಾಗಿರಬೇಕಾಗುತ್ತದೆ ಎಂದರು.
ಮೈತ್ರಿಯಿಂದ ಕಾಂಗ್ರೆಸ್ ಗೂ ಲಾಭವಿಲ್ಲ, ಜೆಡಿಎಸ್ ಗೂ ಲಾಭವಿಲ್ಲ, ಕಾರ್ಯಕರ್ತರಿಗೂ ಲಾಭವಿಲ್ಲ. ಮೊಮ್ಮಕ್ಕಳಿಗಾಗಿ ಗೌಡರ ಕುಟುಂಬ ಇಡೀ ಒಕ್ಕಲಿಗ ಸಮುದಾಯವನ್ನೇ ತುಳಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂದು ಅಂಬರೀಶ್ ಅವರಿಂದ ಲಾಭ ಪಡೆದು ಈಗ ಸುಮಲತಾ ಅವರನ್ನು ಬೈಯೋದು ಸರಿಯಲ್ಲ ಎಂದು ಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.
ಸುಮಲತಾ ಅವರ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದ ವ್ಯಕ್ತಿಯೇ ಕ್ಷಮೆ ಕೇಳಿಲ್ಲ, ಬೇರೆ ಎಲ್ಲರೂ ಕ್ಷಮೆ ಕೇಳಿದ್ದಾರೆ ಎಂದು ರೇವಣ್ಣಗೆ ತಿರುಗೇಟು ನೀಡಿದ್ದಾರೆ.
ಮಂಜು ಬಿಜೆಪಿಗೆ ಸೇರ್ಪಡೆ: ಸದಾನಂದ ಗೌಡ
ಎ.ಮಂಜು ಅವರು ಈಗಾಗಲೇ ನಮ್ಮ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಒಬ್ಬರು ನಮ್ಮ ಪಕ್ಷದ ತತ್ವ ಸಿದ್ದಾಂತ ಒಪ್ಪಿದರೆ ನಮ್ಮ ಪಕ್ಷಕ್ಕೆ ಬರಬಹುದು. ಮೊದಲು ಅವರು ನಮ್ಮ ಪಕ್ಷಕ್ಕೆ ಬಂದು ಸದಸ್ಯರಾಗಬೇಕು. ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ, ಬಿಜೆಪಿ ಮುಖಂಡ ಸದಾನಂದ ಗೌಡ ತಿಳಿಸಿದ್ದಾರೆ.