Advertisement

ದಾರಿ ತಪ್ಪಿದ ಕಾಡಾನೆಗಳ ಆಕ್ರೋಶಕ್ಕೆ ವ್ಯಕ್ತಿ ಬಲಿ

10:33 PM Aug 14, 2019 | Lakshmi GovindaRaj |

ಆನೇಕಲ್‌: ಆನೆ ಮತ್ತು ಮಾನವರ ನಡುವಿನ ಸಂಘರ್ಷಕ್ಕೆ ಕೊನೆಯಿಲ್ಲದಂತಾಗಿದೆ. ವರ್ಷಾರಂಭ ಮತ್ತು ಕೊನೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಆನೆಗಳು ಈಗ ಎಲ್ಲ ಮಾಸಗಳಲ್ಲೂ ಆನೆಗಳು ನಾಡಿನತ್ತ ಧಾವಿಸುತ್ತಿವೆ. ಬುಧವಾರ ತಾಲೂಕಿನ ಸರ್ಜಾಪುರ ಸಮೀಪದ ಹಳ್ಳಿಗಳಲ್ಲಿ 2 ಕಾಡಾನೆ ಕಾಣಿಸಿ ಜನರಲ್ಲಿ ಆತಂಕ ಮೂಡಿಸಿದವು. ಜನರು ದಿಗ್ಬಂಧನ ಹೇರಿದ್ದರಿಂದ ಆಕ್ರೋಶಗೊಂಡ ಆನೆಗಳು, ಈ ವೇಳೆ ಸಿಕ್ಕ ವ್ಯಕ್ತಿಯೊಬ್ಬನನ್ನು ಬಲಿಪಡೆದಿವೆ.

Advertisement

ಹಾದಿ ತಪ್ಪಿದ ಆನೆಗಳು: ಕಳೆದು ನಾಲ್ಕೈದು ತಿಂಗಳಿನಿಂದ ತಮಿಳುನಾಡಿನ ಹೊಸೂರು ಸಮೀಪದ ಹಳ್ಳಿಗಳಲ್ಲೇ ಬಿಡುಬಿಟ್ಟಿದ್ದ 5ರಲ್ಲಿ 3 ಆನೆಗಳು ದಾರಿ ತಪ್ಪಿ ಪ್ರತ್ಯೇಕವಾಗಿವೆ. ಬಳಿಕ 2 ಗಂಡಾನೆಗಳು ದಾರಿ ತಪ್ಪಿ ದಿಕ್ಕಾಪಾಲಾಗಿ ಅಲೆಯುತ್ತಿವೆ. ಕಳೆದ ಸೋಮವಾರ ಆನೇಕಲ್‌ ತಾಲೂಕಿನ ಮಟ್ನಹಳ್ಳಿ ಭಾಗದಲ್ಲಿ ಮೊದ ಬಾರಿಗೆ ಕಾಣಿಸಿಕೊಂಡ ಆನೆಗಳು ಅಲ್ಲಿನ ಕಬ್ಬಿನ ಗದ್ದೆಯಲ್ಲೆ ಉಳಿದಿದ್ದವು. ಅಧಿಕಾರಿಗಳು ಆನೆಗಳನ್ನು ಓಡಿಸಲು ಪ್ರಯತ್ನಿಸಿದ್ದರು. ಆದರೆ ಮರಳಿ ಮಂಗಳವಾರ, ಬುಧುವಾರ ಆನೆಗಳು ಸರ್ಜಾಪುರದ ಹಳ್ಳಿಗಳಲ್ಲಿ ಮುಂದುವರಿಸಿದವು. ತಮ್ಮ ಜೊತೆಗಾರರು ಇಲ್ಲದ್ದರಿಂದ ಹೊಸ ದಾರಿಗಾಗಿ ಆನೆಗಳ ಹುಡುಕುತ್ತಿವೆ.

ಆನೆಗಳಿಗೆ ಜನರ ದಿಗ್ಬಂಧನ: ಬುಧವಾರ ಬೆಳಗ್ಗೆ ದೊಡ್ಡತಿಮ್ಮಸಂದ್ರದ ನೀರಿಲ್ಲದ ಕೆರೆಯ ಪೊದೆಗಳಲ್ಲಿ ಆನೆಗಳು ಪ್ರತ್ಯಕ್ಷವಾಗಿದ್ದವು. ಕೂಡಲೇ ಆನೇಕಲ್‌ ಪ್ರಾದೇಶಿಕ ವಿಭಾಗದ ಅರಣ್ಯಾಧಿಕಾರಿ ಬಾಲಕೃಷ್ಣ ನೇತೃತ್ವದಲ್ಲಿ ಆನೆಗಳು ಎಲ್ಲೂ ಹೋಗದಂತೆ ಕಾವಲು ಕಾಯತೊಡಗಿದರು. ಆನೆಗಳಿರುವ ಸುದ್ದಿ ಹರಡಿತು. ಅಪರೂಪಕ್ಕೆ ತಮ್ಮ ಹಳ್ಳಿಯ ಗದ್ದೆ, ತೋಟ, ಕೆರೆಗಳತ್ತ ಬಂದಿರುವ ಆನೆಗಳನ್ನು ನೋಡಲು ಯುವಕರ ನೆರೆದು, ಆನೆಗಳು ಎಲ್ಲೂ ಹೋಗದಂತೆ ದಿಬ್ಬಂಧನ ಹೇರಿದ್ದರು. ಆನೆಗಳು ಸುತ್ತುವರೆಗೂ ಜನರಿದ್ದರಿಂದ ಆನೆಗಳಿಗೆ ಹೋಗಲು ಆಸ್ಪದವಿರಲಿಲ್ಲ.

ಒತ್ತಡಕ್ಕೊಳಗಾದ ಆನೆಗಳು: ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡಿದ್ದರಿಂದ ಜಮೆಯಾಗುತ್ತಿದ್ದಂತೆ ಆನೆಗಳು ಒತ್ತಡಕ್ಕೆ ಒಳಗಾದವು. ಇದರಿಂದಾಗಿ ಕೆರೆಯಿಂದ ಹೊರಬಂದು ನೂತನ ಬಡಾವಣೆಗಳಿಗೆ ನುಗ್ಗಿದವು. ಹೀಗೆ ನುಗ್ಗಿದ ಆನೆಗಳು ಇಟ್ಟಂಗೂರು, ಕೂಗುರು, ಕೂತಗಾನಹಳ್ಳಿ ಸುತ್ತಲಿನ ನಿರ್ಮಾಣ ಹಂತದ ಬಡಾವಣೆಗಳಲ್ಲಿ, ನೀಲಗಿರಿ ತೋಪು, ತೋಟ, ಗದ್ದೆಗಳಲ್ಲಿ ಸಂಚರಿಸಿ ಕೊನೆಗೆ ಮುಗಳೂರು – ಗುಂಜೂರು ಮುಖ್ಯ ರಸ್ತೆ ದಾಟಿದವು. ಆನೆಗಳು, ಮುಗಳೂರು ಕೆರೆ ದಾಟಿ ವೃಷಭಾವತಿ ನದಿ ದಾಟಿ ಹೊಸಕೋಟೆ ತಾಲೂಕಿನ ತಿರುವರಂಗ ದತ್ತ ಸಾಗಿದವು.

ಇಲಾಖೆ ಕಾರ್ಯಾಚರಣೆ: ಕಾಡಾನೆಗಳು ಹಾದಿ ತಪ್ಪಿ ಬಂದು ಹಳ್ಳಿಗಳಲ್ಲಿ ಉಳಿದಿದ್ದರಿಂದ ಕಳೆದ ಮೂರು ತಿಂಗಳಿನಿಂದ ಆನೇಕಲ್‌ ಪ್ರಾದೇಶಿಕ ವಿಭಾಗದ ಸಿಬ್ಬಂದಿ ಆನೆ ಓಡಿಸಲು ಮುಂದಾಗಿದ್ದರು. ಆದರೂ ತಮಿಳುನಾಡಿನ ಮೂಲಕ ಕಾಡಿಗೆ ಅಟ್ಟುವ ಪ್ರಯತ್ನ ವಿಫ‌ಲವಾಯಿತು. ಹೀಗಾಗಿ ಬುಧವಾರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಆನೇಕಲ್‌ ವನ್ಯಜೀವಿ ವಲಯದ ನುರಿತ ಸಿಬ್ಬಂದಿ ಮೂಲಕ ಆನೆ ಓಡಿಸುವ ಕಾರ್ಯಚರಣೆ ಮಧ್ಯಾಹ್ನದ ಬಳಿಕ ಆರಂಭವಾಯಿತು. ಸ್ಥಳಕ್ಕೆ ಆನೇಕಲ್‌ ಪ್ರಾದೇಶಿಕ ವಿಭಾಗದ ವಲಯ ಅರಣ್ಯಾಧಿಕಾರಿ ರಂಗಸ್ವಾಮಿ, ವನ್ಯಜೀವಿ ವಲಯದ ಗುರುರಾಜ್‌, ಉಪವಲಯ ಅರಣ್ಯಾಧಿಕಾರಿಗಳಾದ ಬಾಲಕೃಷ್ಣ, ಶಿವಶಂಕರ್‌, ತ್ಯಾಗರಾಜ್‌ ಮತ್ತು 20ಕ್ಕೂ ಹೆಚ್ಚು ನುರಿತು ಅರಣ್ಯ ಸಿಬ್ಬಂದಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

Advertisement

ವನ್ಯ ಪ್ರೇಮಿಗಳ ಕಳವಳ: ನಗರಗಳು ಬೆಳೆದಂತೆ ಮೃಗ-ಮಾನವರ ಸಂಘರ್ಷ ಹೆಚ್ಚುತ್ತಿದೆ. ಕಾಡಿನಿಂದ ಹೊರ ಬಂದ ಆನೆಗಳು ಮರಳಿ ಕಾಡಿನತ್ತ ಹೋಗುವ ಹಾದಿ ತಪ್ಪಿದ್ದರಿಂದ ಬೆಳಗಾದರೂ ಹಳ್ಳಿಗಳ ತೋಪು, ಕೆರೆಗಳಲ್ಲೇ ಆಶ್ರಯ ಪಡೆಯ ಬೇಕಾಯಿತು. ಜತೆಗೆ ಆನೆಗಳಿಗೆ ಕಿರುಕುಳ ನೀಡುವ ರೀತಿಯ ವರ್ತನೆಯಿಂದ ಸಂಘರ್ಷ ಹೆಚ್ಚಿದೆ. ಕಾಡುಪ್ರಾಣಿಗಳಿಗೆ ಹಿಂಸೆ ನೀಡಿದರೆ ದುರ್ಘ‌ಟನೆಗಳಿಗೆ ಎಡೆಯಾಗುತ್ತದೆ ಎಂಬುದನ್ನು ಅರಿಯಬೇಕು ಎಂದು ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾಸಮಿತಿ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ್‌ ಎನ್‌ ಬನ್ನೇರುಘಟ್ಟ ಹೇಳಿದರು.

ಗಾಯಗೊಂಡ ಆನೆ: ಜನರ ಕೂಗಾಟ, ಚೀರಾಟಕ್ಕೆ ಗೊಂದಲಕ್ಕೀಡಾದ ಆನೆ ಕಲ್ಲುಬೇಲಿ, ಸಿಮೆಂಟ್‌ ತಡೆಗೋಡೆ ದಾಟಲು ಹರಸಾಹಸ ಪಡಬೇಕಾಯಿತು. ಈ ಸಮಯದಲ್ಲಿ ಕಲ್ಲಿನ ತಡೆ ಗೋಡೆ ಕೆಡವಲು ಮುಂದಾಗಿ ಹಣೆ ಭಾಗದಲ್ಲಿ ಗಾಯವಾಗಿ ರಕ್ತಸ್ರಾವವಾಗುತ್ತಿತ್ತು.

ಆನೆ ತುಳಿತಕ್ಕೆ ವ್ಯಕ್ತಿ ಸಾವು: ಹೊಸಕೋಟೆ ತಾಲೂಕಿನ ತಿರುವರಂಗದ ಬಳಿ ಬಂದ ಕಾಡಾನೆಗಳು, ಗದ್ದೆಯಲ್ಲಿದ್ದ ವಾಸಿ ಅಣ್ಣಯ್ಯಪ್ಪ(55) ಆನೆ ತುಳಿತಕ್ಕೆ ಬಲಿಯಾಗಿದ್ದಾರೆ. ಬೆಳಗ್ಗೆಯಿಂದ ಆನೆಗಳ ಹಿಂದೆ ಮುಂದೆ ಜನ ಸೇರಿದ್ದರಿಂದ ತೀವ್ರ ಒತ್ತಡಕ್ಕೆ ಒಳಗಾಗಿದ್ದ, ಆನೆ ವ್ಯಕ್ತಿ ತೀರ ಸಮೀಪದಲ್ಲಿ ಇರುವುದನ್ನು ಕಂಡು ಗಾಬರಿಯಿಂದ ದಾಳಿ ಮಾಡಿದೆ. ಕೂಡಲೇ ಸುತ್ತಲಿನ ಜನರು ಕೂಗಿ, ಕಿರಿಚಿದ್ದರಿಂದ ಆನೆಗಳು ಪೊದೆಗಳಲ್ಲಿ ಮರೆಯಾಯಿತು. ಗಾಯಗೊಂಡ ಅಣ್ಣಯಪ್ಪರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರಾದರೂ ಸ್ಥಳದಲ್ಲೇ ವ್ಯಕ್ತಿ ಮೃತ ಪಟ್ಟಿದ್ದ. ಮೃತರಿಗೆ ಪತ್ನಿ ಇಬ್ಬರು ಪುತ್ರರಿದ್ದಾರೆ.

ಮಾಜಿ ಸಚಿವರ ಪರಿಹಾರದ ಭರವಸೆ: ಹೊಸಕೋಟೆ ತಾಲೂಕಿನ ಶಾಸಕರು, ಮಾಜಿ ಸಚಿವರಾದ ಎಂಟಿಬಿ ನಾಗರಾಜು, ಪೊಲೀಸ್‌ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮೃತನ ಮನೆಗೆ ಆಗಮಿಸಿ ಸಾಂತ್ವನ ಹೇಳಿ ಸರ್ಕಾರದಿಂದ ಸಿಗುವ ಪರಿಹಾರ ಕೊಡಿಸುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next