ಕುಷ್ಟಗಿ:ಚಾಲಕನಿಲ್ಲದೇ ಚಲಿಸುತ್ತಿದ್ದ ಲಾರಿಯನ್ನು ನಿಲ್ಲಿಸಲು ಹೋಗಿ ಇನ್ನೊಬ್ಬ ಲಾರಿ ಚಾಲಕ ದುರ್ಮರಣಕ್ಕೀಡಾದ ಘಟನೆ ರಾಷ್ಟ್ರೀಯ ಹೆದ್ದಾರಿ ವಣಗೇರಿ ಟೋಲ್ ಪ್ಲಾಜಾದಲ್ಲಿ ನಡೆದಿದೆ.
ತಮಿಳುನಾಡು ಮೂಲದ ಸೇಲಂ ನಿವಾಸಿ ಕಾಮರಾಜ್ ಜಿ (32) ಮೃತ ದುರ್ದೈವಿ. ಬುಧವಾರ ಬೆಳಗಿನ ಜಾವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ವಣಗೇರಿ ಟೋಲ್ ಪ್ಲಾಜಾದಲ್ಲಿ ಚಹಾ ಸೇವಿಸಲು ಲಾರಿಯನ್ನು ನ್ಯೂಟ್ರಲ್ ನಲ್ಲಿ ನಿಲ್ಲಿಸಿ ಚಾಲಕ ಮುರಗನ್ ಕಂದನ್ ಚಹಾ ಸೇವಿಸಲು ತೆರಳಿದ್ದ. ಅದೇ ವೇಳೆ ಇನ್ನೋರ್ವ ಚಾಲಕ ಕಾಮರಾಜ್ ಜಿ. ಮೂತ್ರ ವಿಸರ್ಜನೆಗೆ ಹೋಗಿದ್ದ. ಚಾಲಕರಿಲ್ಲದೇ ನ್ಯೂಟ್ರಲ್ ನಲ್ಲಿದ್ದ ಲಾರಿ ಮುಂದೆ ಚಲಿಸಲಾರಂಭಿಸಿತು. ಕಾಮರಾಜ್ ಕೆ. ದೌಡಾಯಿಸಿ, ಚಲಿಸುತ್ತಿದ್ದ ಲಾರಿಯನ್ನು ನಿಲ್ಲಿಸಲು ಸ್ಟೇರಿಂಗ್ ಹಿಡಿದು, ಇದ್ದಕ್ಕಿದ್ದಂತೆ ಬಲಕ್ಕೆ ತಿರುವು (ಟರ್ನ) ತೆಗೆದುಕೊಳ್ಳುವ ಸಂದರ್ಭದಲ್ಲಿ ಹರಿಯಾಣದ ಲಾರಿ ಢಿಕ್ಕಿ ಹೊಡೆದಾಗ, ಚಾಲನೆಯಲ್ಲಿ ಕುಳಿತ ಸ್ಥಳದಲ್ಲಿ ಚಾಲಕ ಕಾಮರಾಜ್ ಕೆ. ಮೃತ ಪಟ್ಟಿದ್ದಾರೆ. ಅದರೂ ಮುಂದೆ ಚಲಿಸುತ್ತಿದ್ದ ಲಾರಿಯನ್ನು ಮುರುಗನ್ ಹತ್ತಿ ಬ್ರೇಕ್ ಹಾಕಿ ಲಾರಿ ನಿಲ್ಲಿಸಿದ್ದಾನೆ.
ಹರಿಯಾಣದ ಲಾರಿ ಚಾಲಕ ಅಜ್ಮಲ್ ಜಾನ್ ಮಹ್ಮದ್ ನನ್ನು ಕುಷ್ಟಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.