Advertisement

UV Fusion: ಕೆಸರು ಗದ್ದೆಯಲ್ಲಿ ಜೀವನ ಶಿಕ್ಷಣ ಪಾಠ

03:25 PM Aug 28, 2024 | Team Udayavani |

ಶಿಕ್ಷಣ ಎಂದರೆ ಕೇವಲ ನಾಲ್ಕು ಗೋಡೆಯ ನಡುವಿನ ಪಾಠವಾಗಬಾರದು. ವಿದ್ಯಾರ್ಥಿಗಳಿಗೆ ಬದುಕನ್ನು ಕಟ್ಟಿಕೊಡುವ ಶಿಕ್ಷಣ ಅಗತ್ಯ. ಭವಿಷ್ಯದಲ್ಲಿ ತಮ್ಮ ಕಾಲ ಮೇಲೆ ನಿಲ್ಲುವ ಅಥವಾ ಯಾರ ಹಂಗಿನಲ್ಲಿ ಜೀವನ ನಡೆಸದೇ ತಾವು ಸ್ವಾವಲಂಬಿ ಜೀವನ ನಡೆಸುತ್ತಿದ್ದೇವೆ ಎಂಬ ಹೆಮ್ಮೆಯನ್ನು ರೂಢಿಸಿಕೊಂಡರೆ ಅದು ಸಾರ್ಥಕತೆ.

Advertisement

ಉದ್ಯೋಗ ಅನ್ನುವ ವಿಚಾರ ಬಂದಾಗ ಯಾವ ವೃತ್ತಿಯೂ ಕೇವಲ ಅಲ್ಲ.  ಎಲ್ಲ ವೃತ್ತಿಯೂ ಅದರದೆ ಆದಂತಹ ಗೌರವ ಹೊಂದಿರುತ್ತದೆ. ಅದರಲ್ಲೂ ರೈತ  ದೇಶದ ಬೆನ್ನೆಲುಬು ಎಂಬ ಮಾತಿದೆ. ಆಧುನಿಕತೆಯ ಹೆಸರಿನಲ್ಲಿ, ಪಟ್ಟಣದ ಗೀಳಿನಲ್ಲಿ ಹಳ್ಳಿಯ ಜೀವನ ಎಂದರೆ ಮೂಗು ಮುರಿಯುವವರೇ ಹೆಚ್ಚು. ಅಲ್ಲದೇ ಶಹರದಲ್ಲಿ ಕೆಲಸವನ್ನು ಮಾಡಿದರೆ ಮಾತ್ರ ತಮಗೆ ಗೌರವ ಎನ್ನುವ ಅಭಿಪ್ರಾಯ ಬೆಳೆಯುತ್ತಿರುವುದು ನಿಜಕ್ಕೂ ಖೇದಕರ. ಹೀಗಾಗಿ ನೀನು ಮುಂದೆ ಏನಾಗುತ್ತೀಯಾ? ಎಂಬ ಪ್ರಶ್ನೆ ವಿದ್ಯಾರ್ಥಿಗಳಿಗೆ ಎದುರಾದರೆ ಅವರ ಉತ್ತರ ನಾನು ಎಂಜಿನಿಯರ್‌, ಡಾಕ್ಟರ್‌, ವಿಜ್ಞಾನಿ, ಐಎಎಸ್‌, ಕೆಎಎಸ್‌ ಹೀಗೆ ದೊಡ್ಡ ದೊಡ್ಡ ಹುದ್ದೆಗಳ ಬಗ್ಗೆ ಹೇಳುತ್ತಾರೆಯೇ ವಿನಃ  ನಾನೊಬ್ಬ ರೈತನಾಗಬೇಕು ಎಂದು ಹೇಳುವವರು ಸಿಗುವುದು ವಿರಳಾತಿವಿರಳ.

ಆದರೆ ವಿದ್ಯಾರ್ಥಿಗಳಿಗೆ ರೈತರ ಬಗ್ಗೆ,  ಒಂದು ಹಿಡಿ ಅನ್ನ ಊಟ ಮಾಡುವಾಗ ಅದರ ಹಿಂದೆ ಎಷ್ಟು ಶ್ರಮ ಇರುತ್ತದೆ. ರೈತಾಪಿ ವರ್ಗದವರ ಕೆಲಸ ಎಷ್ಟು ಶ್ರಮದಾಯಕ ಎಂಬುದನ್ನು ತಿಳಿಸುವ ಉದ್ದೇಶದಿಂದ ಹೊನ್ನಾವರ ತಾಲೂಕಿನ ಪ್ರತಿಷ್ಠಿತ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲೊಂದಾದ ಶ್ರೀ ಸಿದ್ಧಿವಿನಾಯಕ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆ, ಕೊಳಗದ್ದೆಯ ಶಿಕ್ಷಕ ವರ್ಗದವರು ಆರನೇ ತರಗತಿಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ ನೆಟ್ಟಿ ಮಾಡುವುದು ಹೇಗೆ? ಗದ್ದೆಯಲ್ಲಿ ಕೆಲಸ ಮಾಡುವುದು ಎಷ್ಟು ತ್ರಾಸದಾಯಕ ಮತ್ತು ರೈತರ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸವನ್ನು ಶಿಕ್ಷಕರು ಮಾಡಿದ್ದು ವಿಶೇಷವಾಗಿತ್ತು.

ಒಂದು ಕಡೆ ಅತಿವೃಷ್ಟಿಯ ತೊಂದರೆ, ಒಮ್ಮೊಮ್ಮೆ ಅನಾವೃಷ್ಟಿಯಿಂದ ಆಗುವ ಅನಾನುಕೂಲತೆಯ ಬಗ್ಗೆಯೂ ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸವನ್ನು ಶಿಕ್ಷಕರು ಮಾಡಿದರು. ನಾಟಿಹಬ್ಬದಲ್ಲಿ ಪಾಲ್ಗೊಂಡು ಖುಷಿಪಟ್ಟಂತೆ ವಿದ್ಯಾರ್ಥಿಗಳು ಸಂತಸವನ್ನುಪಟ್ಟರು. ವಿದ್ಯಾರ್ಥಿಗಳ ಜತೆಗೆ ಶಿಕ್ಷಕರು ಸಹ ಮಕ್ಕಳಾಗಿಯೇ ಗದ್ದೆನಾಟಿಯಲ್ಲಿ ಭಾಗವಹಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು.

ಗದ್ದೆಯ ಕೆಸರಿನಲ್ಲಿಯೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜಾನಪದ ಗೀತೆಗೆ ನೃತ್ಯವನ್ನು ಮಾಡಿದರು. ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಜೀವನ ಶಿಕ್ಷಣ ಕಲಿಸುತ್ತಿರುವ ಅನೇಕ ಶಾಲೆಗಳಿವೆ.  ಪಠ್ಯದ ಜತೆಗೆ ಬದುಕಿನ ಶಿಕ್ಷಣ ಕಲಿಸುತ್ತಿರುವ ಈ ಶಾಲೆಯ ವರ್ಚಸ್ಸು ಬಾನೆತ್ತರಕ್ಕೆ ಏರಲಿ.

Advertisement

-ಪ್ರಸಾದ್‌ ಹೆಗಡೆ

ನಗರೆ, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.