ಸೈದಾಪುರ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಗ್ರಂಥಾಲಯ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ನೆರಡಗಂ ಪಶ್ಚಿಮಾದ್ರಿ ಸಂಸ್ಥಾನದ ವಿರಕ್ತ ಮಠದ ಪೀಠಾಧಿ ಪತಿ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ತಿಳಿಸಿದರು.
ಸಮೀಪದ ಕೂಡಲೂರು ಗ್ರಾಮದಲ್ಲಿ ಸ್ಥಾಪಿಸಲಾದ ಶ್ರೀ ಬಸವಲಿಂಗೇಶ್ವರ ಗ್ರಂಥಾಲಯಕ್ಕೆ ಭೇಟಿ ನೀಡಿ ಮಾತನಾಡಿದ ಶ್ರೀಗಳು, ಮಠ-ಮಂದಿರಗಳು ಅಧ್ಯಾತ್ಮ ಚಿಂತನೆಗಳ ಮೂಲಕ ಮಾನಸಿಕ ನೆಮ್ಮದಿ ನೀಡಿದರೆ ಗ್ರಂಥಾಲಯಗಳು ವ್ಯಕ್ತಿ ಜ್ಞಾನಾರ್ಜನೆಗೆ ಅತ್ಯುಪಯುಕ್ತವಾಗಿವೆ. ಮನುಷ್ಯ ಕಳೆದುಕೊಳ್ಳಲಾಗದ ಅತಿ ದೊಡ್ಡ ಸಂಪತ್ತಾದ ಜ್ಞಾನವನ್ನು ಕೇವಲ ಓದಿನಿಂದ ಮಾತ್ರ ಪಡೆದುಕೊಳ್ಳಲು ಸಾಧ್ಯ. ದುಡ್ಡಿನಿಂದ ಕೊಂಡುಕೊಳ್ಳಲಾಗದು ಎಂದರು.
ಬಡತನದ ಕಾರಣಕ್ಕೆ ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳು ಪಟ್ಟಣಕ್ಕೆ ಹೋಗಿ ಅಭ್ಯಾಸ ಮಾಡುವುದು ಕಷ್ಟಕರ. ಇದನ್ನು ಮನಗಂಡ ಕೂಡಲೂರು ಗ್ರಾಮದ ಪ್ರಜ್ಞಾವಂತ ಜನ ಗ್ರಂಥಾಲಯ ಸ್ಥಾಪನೆಗೆ ತನು ಮನ ಧನ ಸಹಾಯ ಮಾಡಿದ್ದನ್ನು ಪದಗಳಲ್ಲಿ ವರ್ಣಿಸಲಾಗದು. ಅವರ ವಿಶಾಲ ಹೃದಯಕ್ಕೆ ಭಗವಂತ ಖಂಡಿತ ಒಳಿತು ಮಾಡುತ್ತಾನೆ ಎಂದು ಆಶೀರ್ವದಿಸಿದರು.
ಪಿಯು, ಪದವಿ ಹಾಗೂ ವೃತ್ತಿಪರ ಶಿಕ್ಷಣ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ಕಠಿಣ ಪರಿಶ್ರಮದೊಂದಿಗೆ ಅಭ್ಯಾಸ ಮಾಡುವ ಮೂಲಕ ಸರಕಾರಿ ನೌಕರಿ ಪಡೆದುಕೊಂಡು ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳುವುದರ ಜತೆಗೆ ಇದೇ ರೀತಿ ಇತರ ವಿದ್ಯಾರ್ಥಿಗಳ ಓದಿಗೆ ಸಹಾಯ ಸಹಕಾರ ಮಾಡಬೇಕೆಂದು ಹೇಳಿದರು.
Related Articles
ಬಂದಯ್ಯಸ್ವಾಮಿ ಮಠದ, ಅಮರೇಶ ನಾಯಕ, ಹನುಮಂತರಾಯ ಮಹಾದೇವ, ಅನೀಲ, ತಿಮ್ಮಪ್ಪ, ಸಾಬರೆಡ್ಡಿ, ಶ್ರೀಶೈಲ, ಯಂಕಪ್ಪ, ಭಾಷಾಜೀ, ರಾಕೇಶ, ಯೋಗೇಶ ಸೇರಿ ಇತರರಿದ್ದರು.