Advertisement

ಸೋರುವ ಕೊಠಡಿಯಲ್ಲೇ ಮಕ್ಕಳಿಗೆ ಪಾಠ: ಕುಡುಕರ ಅಡ್ಡೆಯಾದ ಘತ್ತರಗಿ ಶಾಲಾ ಆವರಣ

12:45 PM Jul 19, 2022 | Team Udayavani |

ಅಫಜಲಪುರ: ತಾಲೂಕಿನ ಘತ್ತರಗಿ ಗ್ರಾಮದಲ್ಲಿ ಮುಜರಾಯಿ ಇಲಾಖೆಯ ಜಾಗದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯ ಬಹುತೇಕ ಕೊಠಡಿಗಳ ಮೇಲ್ಛಾವಣಿಗಳು ಸೋರುತ್ತಿವೆ. ಹನಿ ಹನಿ ನೀರು ಬೀಳುತ್ತಿರುವ ಜಾಗದಲ್ಲೇ ವಿದ್ಯಾರ್ಥಿಗಳು ಕುಳಿತು ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಸುಮಾರು 220 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮೇಲ್ಛಾವಣಿಗಳು ಮಳೆ ನೀರು ತಡೆದುಕೊಳ್ಳದಷ್ಟು ಹಾಳಾಗಿದ್ದು, ತರಗತಿ ಕೋಣೆ ನೆನೆಯಬಾರದೆಂದು ಮುಖ್ಯಗುರುಗಳು ಪ್ಲಾಸ್ಟಿಕ್‌ ತಾಡಪತ್ರಿ ತಂದು ಮೇಲ್ಛಾವಣಿಗೆ ಅಡ್ಡಲಾಗಿ ಕಟ್ಟಿಸಿದ್ದಾರೆ. ಆದರೆ ಎಲ್ಲ ಕೋಣೆಗಳಿಗೂ ಕಟ್ಟಿಸಲಾಗಿಲ್ಲ. ಬದಲಾಗಿ ಕಚೇರಿ, ಕಂಪ್ಯೂಟರ್‌ ಕೋಣೆ ಹಾಗೂ ಆಹಾರ ಧಾನ್ಯಗಳಿರುವ ಕೋಣೆಗೆ ಮಾತ್ರ ಕಟ್ಟಿಸಿದ್ದಾರೆ. ಉಳಿದ 8 ಕೊಣೆಗಳಿಗೆ ಕಟ್ಟಿಸಿಲ್ಲ. ಹೀಗಾಗಿ ಅಲ್ಲೆಲ್ಲ ಮಳೆ ನೀರು ತರಗತಿ ಕೋಣೆಯಲ್ಲಿ ನೆನೆಯುವಂತಾಗಿದೆ.

ಶಾಲಾ ಆವರಣ ಕುಡುಕರ ಅಡ್ಡೆ

ಇನ್ನೂ ಶಾಲೆಯ ಆವರಣವೆಲ್ಲ ಕುಡುಕರ ಅಡ್ಡಯಾಗಿ ಮಾರ್ಪಟ್ಟಿದೆ. ಶಾಲಾ ಅವಧಿ ಮುಗಿಯುತ್ತಿದ್ದಂತೆ ಕತ್ತಲಾಗುತ್ತಿದ್ದಂತೆ ಕುಡುಕರ ದಂಡು ಶಾಲೆಯ ಆವರಣಕ್ಕೆ ಲಗ್ಗೆ ಇಡುತ್ತಿದೆ. ನಿತ್ಯ ಕುಡಿದು ಗ್ಲಾಸ್‌, ಬಾಟಲಿ ಬಿಟ್ಟು ಹೋಗುತ್ತಿದ್ದಾರೆ. ಅಲ್ಲದೆ ತರಹೇವಾರಿ ದಾಬಾದ ಊಟ ತಂದು ತಿಂದು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಕೆಲವು ಸಲವಂತೂ ತಾವು ಕುಡಿದ ಬಾಟಲಿಗಳನ್ನು ಒಡೆದು ಚೆಲ್ಲಾಪಿಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ನಿತ್ಯ ಬೆಳಗಾದರೆ ಶಾಲೆಗೆ ಬರುವ ಶಿಕ್ಷಕರು, ವಿದ್ಯಾರ್ಥಿಗಳು ಕುಡುಕರು ಕುಡಿದು ಬಿಸಾಡಿದ ಬಾಟಲಿಗಳನ್ನು ಆರಿಸಿ ನಂತರ ತರಗತಿಗಳಿಗೆ ಹೋಗುವ ಪರಿಸ್ಥಿತಿ ಬಂದಿದೆ.

ಅನೈತಿಕ ಚಟುವಟಿಕೆ: ಶಾಲೆಯ ಪಕ್ಕದಲ್ಲೇ ಪೊಲೀಸ್‌ ಚೌಕಿ ಇದೆ. ಆದರೂ ಕುಡುಕರಿಗೆ ಯಾರ ಭಯವೂ ಇಲ್ಲದಂತಾಗಿದೆ. ಕತ್ತಲಾಗುತ್ತಿದ್ದಂತೆ ನಡೆಯುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಇಲ್ಲದಂತಾಗಿದೆ. ಇದರಿಂದ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

Advertisement

ಅಭಿವೃದ್ಧಿಗೆ ಹಿನ್ನಡೆ: ಶಾಲೆ ಮುಜರಾಯಿ ಇಲಾಖೆ ದೇವಸ್ಥಾನದ ಜಾಗದಲ್ಲಿದೆ. ಹೀಗಾಗಿ ಶಾಲೆಗೆ ಯಾವುದೇ ಅಭಿವೃದ್ಧಿ ಕೆಲಸ ಮಾಡಲು, ಉನ್ನತಿಕರಣ ಮಾಡಲು ಮುಜರಾಯಿ ಇಲಾಖೆಯ ಅನುಮತಿ ಪಡೆಯಬೇಕು. ಆದರೆ ಮುಜರಾಯಿ ಇಲಾಖೆಯವರು ತಮ್ಮ ಜಾಗದಲ್ಲಿರುವ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸಿ ಎನ್ನುತ್ತಾರೆ. ಹೀಗಾಗಿ ಯಾವುದೇ ಅಭಿವೃದ್ಧಿ ಕೆಲಸಗಳು ಮಾಡ ಲಾಗುತ್ತಿಲ್ಲ. ಇದರಿಂದಾಗಿ ಶಾಲೆಗೆ ಇಂತ ದುಸ್ಥಿತಿ ಬಂದಿದೆ ಎನ್ನುತ್ತಾರೆ ಮಕ್ಕಳ ಪಾಲಕರು ಹಾಗೂ ಗ್ರಾಮಸ್ಥರು.

ಶಾಲೆಯ ಮೇಲ್ಛಾವಣಿಗಳು ಸೋರಿಕೆ ಆಗುತ್ತಿರುವ ಸಮಸ್ಯೆ, ಆವರಣದಲ್ಲಿ ಕುಡಿದು ಬಾಟಲಿಗಳು ಒಡೆಯುತ್ತಿರುವುದರ ಬಗ್ಗೆ ಬಿಇಒ ಹಾಗೂ ಸಂಬಂಧ ಪಟ್ಟವರಿಗೆ ಪತ್ರ ಬರೆಯಲಾಗಿದೆ. -ಬಾಬು ಮನಗೊಂಡ, ಮುಖ್ಯಗುರು ಘತ್ತರಗಿ ಶಾಲೆ

ಶಾಲೆ ಮುಜರಾಯಿ ಇಲಾಖೆ ಜಾಗದಲ್ಲಿ ಇರುವುದರಿಂದ ಅಭಿವೃದ್ಧಿ ಕೆಲಸ ಮಾಡಲಾಗುತ್ತಿಲ್ಲ. ಮಂಗಳವಾರ ಖುದ್ದಾಗಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆಗಳನ್ನು ಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸುವ ಕೆಲಸ ಮಾಡುತ್ತೇನೆ. -ಮಾರುತಿ ಹುಜರತಿ, ಬಿಇಒ ಅಫಜಲಪುರ

ಶಾಲೆಯ ಅವ್ಯವಸ್ಥೆ ನೋಡಿದ್ದೇನೆ. ಆದಷ್ಟು ಬೇಗ ಸಂಬಂಧ ಪಟ್ಟವರ ಗಮನಕ್ಕೆ ತಂದು ಶಾಲೆಯ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುತ್ತದೆ. –ವಿಠ್ಠಲ್‌ ನಾಟಿಕಾರ, ಗ್ರಾಪಂ ಅಧ್ಯಕ್ಷ ಘತ್ತರಗಿ

-ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next