Advertisement

ಮಕ್ಕಳ ಪ್ರಗತಿಗೆ ಕಲಿಕಾ ಹಬ್ಬ ಸಹಕಾರಿ; ಸಿಆರ್‌ಪಿ ಗಂಗಾಧರ

06:41 PM Jan 21, 2023 | Team Udayavani |

ಲೋಕಾಪುರ: ಮಕ್ಕಳ ಕಲಿಕಾ ಪ್ರಗತಿಯ ನಿಟ್ಟಿನಲ್ಲಿ ಕಲಿಕಾ ಹಬ್ಬ ಸಹಾಯಕಾರಿಯಾಗಿದ್ದು, ಮಕ್ಕಳ ಕಲಿಕೆಗೆ ಪ್ರೋತ್ಸಾಹ ಹಾಗೂ ಉತ್ತಮ ಭವಿಷ್ಯ ನಿರ್ಮಾಣ ಮಾಡಬೇಕಾಗಿದೆ ಎಂದು ಲಕ್ಷಾನಟ್ಟಿ ಸಿಆರ್‌ಪಿ ಗಂಗಾಧರ ಗಾಣಿಗೇರ ಹೇಳಿದರು.

Advertisement

ಪಟ್ಟಣದ ಆದರ್ಶ ವಿದ್ಯಾಲಯ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ನಡೆದ ಲಕ್ಷಾನಟ್ಟಿ ಕ್ಲಸ್ಟರ್‌ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕಲಿಕಾ ಚೇತರಿಕೆ ಪೂರಕವಾಗಿ ಮಕ್ಕಳು ಚಟುವಟಿಕೆ ಮೂಲಕ ಸಂತೋಷದಾಯಕ ಕಲಿಕೆಯನ್ನು ಮಕ್ಕಳು ಕಲಿಯಬೇಕು ಎಂಬ ಹಿನ್ನೆಲೆಯಿಂದ ಸರ್ಕಾರ ಚಿಂತನೆ ಮಾಡಿದ್ದು, ಈ ಚಿಂತನೆ, ಸಲಹೆ ಹಾಗೂ ಮಾರ್ಗದರ್ಶನದಡಿಯಲ್ಲಿ ನಾಡಿನಾದ್ಯಂತ ಕಲಿಕಾ ಹಬ್ಬದ ವಾತಾವರಣವನ್ನು ಉತ್ಸಾಹ, ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ ಎಂದರು.

ಕಲಿಕಾ ಹಬ್ಬ ಚಟುವಟಿಕೆ ಆಧಾರಿತವಾಗಿದ್ದು, ವಿದ್ಯಾರ್ಥಿಗಳು ಎಲ್ಲ ಚಟುವಟಿಕೆಗಳನ್ನು ಕಲಿಯಬೇಕು. ಆಟ ಆಡುವ ಮೂಲಕ ಪಾಠ ಕಲಿಯುವ ಕೆಲಸವಾಗಬೇಕು. ಸಮಯ ವ್ಯರ್ಥ ಮಾಡದೇ ಎಲ್ಲ ಮಕ್ಕಳು ಎರಡು ದಿನಗಳ ಕಾಲ ಕಲಿಕಾ ಹಬ್ಬದ ಚಟುವಟಿಕೆಗಳಾದ ಆಡು-ಹಾಡು, ಕಾಗದ-ಕತ್ತರಿ, ಊರು ತಿಳಿಯೋಣ, ಮಾಡು-ಹಾಡು ಎಂಬ ಗುಂಪುಗಳಲ್ಲಿ ಪೂರ್ಣವಾಗಿ ಭಾಗವಹಿಸಿ ಎಂದು ಹೇಳಿದರು.

ಮುಧೋಳ ಅಕ್ಷರ ದಾಸೋಹ ನಿರ್ದೇಶಕ ಪ್ರಕಾಶ ದಾಸರ ಮಾತನಾಡಿ ಕಲಿಯುವುದನ್ನು ಹೆಚ್ಚು ಆನಂದಮಯ ಚಟುವಟಿಕೆಯನ್ನಾಗಿಸುವುದೇ ಕಲಿಕಾ ಹಬ್ಬದ ಮುಖ್ಯ ಉದ್ದೇಶವಾಗಿದೆ ಎಂದರು.

ಅದ್ಧೂರಿ ಮೆರವಣಿಗೆ: ಕಲಿಕಾ ಹಬ್ಬದ ನಿಮಿತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಲಿಕಾ ಹಬ್ಬದ ಮಹತ್ವವನ್ನು ಸಾರುವ ರೂಪಕಗಳೊಂದಿಗೆ ಅರ್ಥಪೂರ್ಣ ಪ್ರಭಾತಪೇರಿಯನ್ನು ಹಮ್ಮಿಕೊಳ್ಳಲಾಗಿತ್ತು. ಲಕ್ಷಾನಟ್ಟಿ ಪಿಡಿಒ ಎಸ್‌.ವೈ. ನರಸನ್ನವರ, ಸಿಆರ್‌ಪಿಗಳಾದ ಕೆ.ಎಲ್‌. ಮಾಳೇದ, ಸುರೇಶ ಹರಕಂಗಿ, ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ಎಸ್‌.ಕೆ. ಸತ್ತಿಗೇರಿ, ಪ್ರಕಾಶ ಬೆಳಗಲಿ, ಭೀಮನಗೌಡ ಪಾಟೀಲ, ಶಿವಾಜಿ ಉಪ್ಪಾರ ಇದ್ದರು. ವಿಜಯ ಮೋಹಿತೆ ನಿರೂಪಿಸಿದರು, ಮಲ್ಲಯ್ಯ ಪೂಜಾರ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next