Advertisement

20 ಫುಟ್ಬಾಲ್ ಮೈದಾನದಷ್ಟು ಸ್ಥಳಾವಕಾಶ, 62 ಕೋಟಿ ಆದಾಯ!

08:19 PM Nov 23, 2021 | Team Udayavani |

ನವದೆಹಲಿ: ಸರ್ಕಾರಿ ಕಚೇರಿಗಳನ್ನೊಮ್ಮೆ ಊಹಿಸಿಕೊಂಡಾಗ ನಮ್ಮ ಕಣ್ಣಮುಂದೆ ಬರುವುದೇ ಹಳೆಯ ಮೇಜು-ಕುರ್ಜಿ, ಅವುಗಳ ಮೇಲೆ ಒಂದಿಷ್ಟು ಕಡತಗಳ ರಾಶಿ, ಪಕ್ಕದ ಕಪಾಟು ತೆರೆದರೆ ಧೂಳು ತುಂಬಿದ ಫೈಲುಗಳು, ಸ್ಟೇಪ್ಲರ್‌ಗಳು, ಸೀಲ್‌ಗ‌ಳು…

Advertisement

ಇಂಥ ಗುಜಿರಿ ವಸ್ತುಗಳನ್ನೆಲ್ಲ ತೆಗೆದುಹಾಕಿ, ಸರ್ಕಾರಿ ಕಟ್ಟಡಗಳಲ್ಲಿನ ಹಳೆಯ ಕಡತಗಳನ್ನೆಲ್ಲ ವಿಲೇವಾರಿ ಮಾಡಿ ಸ್ವತ್ಛಗೊಳಿಸಲು ಕೇಂದ್ರ ಸರ್ಕಾರ ಕೈಗೊಂಡಿದ್ದ ಸುಮಾರು ಒಂದು ತಿಂಗಳ ಅವಧಿಯ ಅಭಿಯಾನವು ಯಶಸ್ವಿಯಾಗಿದೆ.

ಅ.2ರಿಂದ 31ರವರೆಗೆ ನಡೆದ ಅಭಿಯಾನದಿಂದ ಸರ್ಕಾರಿ ಕಟ್ಟಡಗಳಲ್ಲಿ ಒಟ್ಟಾರೆ 12.01 ಲಕ್ಷ ಚದರ ಅಡಿ ಸ್ವಚ್ಛ ಸ್ಥಳಾವಕಾಶ ಸೃಷ್ಟಿಯಾಗಿದೆ. ಅಂದರೆ ಇದು 20 ಫುಟ್ಬಾಲ್ ಮೈದಾನಗಳಿಗೆ ಸಮ!

ಇದಲ್ಲದೇ, ಗುಜಿರಿಗಳ ಮಾರಾಟದಿಂದ 62.54 ಕೋಟಿ ರೂ. ಆದಾಯವೂ ಬಂದಿದೆ. ಪ್ರಧಾನಿ ಮೋದಿ ಅವರ ಸೂಚನೆ ಮೇರೆಗೆ ಎಲ್ಲ ಸಚಿವಾಲಯಗಳು ಹಾಗೂ ಇಲಾಖೆಗಳು ಈ ಅಭಿಯಾನವನ್ನು ಅನುಷ್ಠಾನಗೊಳಿಸಿದ್ದವು.

ಹಲವು ಗುರಿಗಳ ಸಾಧನೆ:
ಗಾಂಧಿ ಜಯಂತಿಯ ದಿನ ಆರಂಭವಾದ ಈ ಅಭಿಯಾನದಿಂದ ಇತರೆ ಹಲವು ಗುರಿಗಳನ್ನೂ ಸಾಧಿಸಲು ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ 3.30 ಲಕ್ಷ ಸಾರ್ವಜನಿಕರ ಕುಂದುಕೊರತೆಗಳನ್ನು ಒಳಗೊಂಡ ಫೈಲುಗಳನ್ನು ಇತ್ಯರ್ಥ ಮಾಡುವ ಗುರಿಯನ್ನು ಸರ್ಕಾರ ಹಾಕಿಕೊಂಡಿತ್ತು. ಆ ಪೈಕಿ 3.03 ಲಕ್ಷವನ್ನು ಇತ್ಯರ್ಥ ಮಾಡಲಾಗಿದೆ. ಆ ಮೂಲಕ ಶೇ.91.6ರಷ್ಟು ಗುರಿ ಸಾಧನೆಯಾಗಿದೆ. ಅದೇ ರೀತಿ, 907ರಷ್ಟು ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಲು ಗುರುತಿಸಲಾಗಿದ್ದು, ಆ ಪೈಕಿ 699 ನಿಯಮಗಳನ್ನು ಸರಳೀಕೃತಗೊಳಿಸಲಾಗಿದೆ. 45.54 ಲಕ್ಷ ಸರ್ಕಾರಿ ಫೈಲುಗಳು ಪರಿಶೀಲನೆಗೆ ಬಾಕಿಯಿದ್ದು, ಈ ಅಭಿಯಾನದ ಅವಧಿಯಲ್ಲಿ 44.89 ಲಕ್ಷ ಫೈಲುಗಳ ಪರಿಶೀಲನೆ ಪೂರ್ಣಗೊಳಿಸಲಾಗಿದೆ. 21.89 ಲಕ್ಷ ಕಡತಗಳನ್ನು ವಿಲೇವಾರಿ ಮಾಡಲಾಗಿದೆ.

Advertisement

ಡಿಜಿಟಲೀಕರಣಕ್ಕೆ ಉತ್ತೇಜನ:
ಕಡತಗಳನ್ನು ಎಲೆಕ್ಟ್ರಾನಿಕ್‌ ರೂಪದಲ್ಲಿ ಇಡುವುದಕ್ಕೆ ಈ ಅಭಿಯಾನ ಉತ್ತೇಜನ ನೀಡಿದೆ. ಜತೆಗೆ, ಸಾರ್ವಜನಿಕರ ಕುಂದುಕೊರತೆಗಳನ್ನು ಕ್ಷಿಪ್ರವಾಗಿ ಇತ್ಯರ್ಥ ಮಾಡುವುದಕ್ಕೂ ಸಾಧ್ಯವಾಗಿದೆ. ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಹಾಗೂ ಮೂಲಸೌಕರ್ಯ ಸಚಿವಾಲಯವು ಅಭಿಯಾನದಲ್ಲಿ ಉತ್ತಮ ಸಾಧನೆ ಮಾಡಿದೆ.

3.30 ಲಕ್ಷ ಕುಂದುಕೊರತೆ ಕಡತ
3.03 ಲಕ್ಷ – ಇತ್ಯರ್ಥಗೊಂಡ ಕಡತಗಳು
ಅ.2ರಿಂದ ಅ.31ರವರೆಗೆ- ಅಭಿಯಾನದ ಅವಧಿ
62.54 ಕೋಟಿ ರೂ.- ವಿಶೇಷ ಅಭಿಯಾನದಿಂದ ಬಂದ ಆದಾಯ
12.01 ಲಕ್ಷ ಚದರ ಅಡಿ- ಎಷ್ಟು ಸ್ಥಳಾವಕಾಶ ಸೃಷ್ಟಿ?….

Advertisement

Udayavani is now on Telegram. Click here to join our channel and stay updated with the latest news.

Next