ಕುದೂರು: ಕಳೆದ ಕೆಲ ದಿನಗಳಿಂದ ಕುದೂರು ಸುತ್ತಮುತ್ತ ಭರ್ಜರಿ ಮಳೆಗೆ ಕುದೂರು ಹೋಬಳಿಯ ಕೆರೆಗಳು ಭರ್ತಿಯಾಗಿದ್ದು ಕೋಡಿ ಹರಿದಿದೆ. ಜಲಪಾತಗಳಂತೆ ಹರಿಯುತ್ತಿರುವ ನೀರು ಹರಿಯುವುದನ್ನು ನೋಡಲು ಕುದೂರು ಸುತ್ತಮುತ್ತಲಿನ ಜನರು ಸಾಗರೋಪಾದಿಯಲ್ಲಿ ಕೋಡಿ ಬಿದ್ದ ಕೆರೆ ಬಳಿಗೆ ಕುಟುಂಬದ ಸದಸ್ಯರ ಜೊತೆ ಹಾಗೂ ಸ್ನೇಹಿತರೊಡನೆ ತೆರಳುತ್ತಿದ್ದು, ಕೆಲವು ಕೆರೆಗಳೀಗ ಮಳೆಗಾಲದ ಪ್ರವಾಸಿ ತಾಣಗಳಾಗಿ ಮಾರ್ಪಟ್ಟಿವೆ.
ಮಲ್ಲಪ್ಪನಹಳ್ಳಿ ಕೆರೆ ಬಳಿ ಜಮಾವಣೆ: ಕುದೂರು ಹೋಬಳಿಯ ಶ್ರೀಗಿರಿಪುರ ಗ್ರಾಪಂ ವ್ಯಾಪ್ತಿಯ ಮಲ್ಲಪ್ಪನಹಳ್ಳಿ ಕೆರೆ ಕೋಡಿ ಹರಿದಿದ್ದು ಇದನ್ನು ವೀಕ್ಷಿಸಲು ಕುದೂರು ಹಾಗೂ ಸುತ್ತಮುತ್ತಲಿನ ಜನರು ಪ್ರವಾಸಿ ತಾಣವನ್ನು ವೀಕ್ಷಿಸಲು ಬರುವ ಪ್ರವಾಸಿಗರಂತೆ ನಿತ್ಯ ಜನರು ತಮ್ಮ ಕುಟುಂಬದೊಂದಿಗೆ ಹಾಗೂ ಸ್ನೇಹಿತರೊಡೆನೇ ತೆರಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು, ವಿಡಿಯೋ ಮಾಡುವುದು ಹಾಗೂ ನೀರಿನಲ್ಲಿ ಒಂದೆರಡು ತಾಸು ಕಾಲ ಕಳೆದು ತಮ್ಮ ಮೊಬೈಲ್‌ಗಳಲ್ಲಿ ಪೋಟೋ ಸೆರೆ ಹಿಡಿದು ತಮ್ಮ ಜಾಲತಾಣಗಳ ಖಾತೆಗಳಲ್ಲಿ ಶೇರ್ ಮಾಡುವ ಮೂಲಕ ತಮ್ಮ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಬಹುತೇಕ ಕೆರೆಗಳು ಭರ್ತಿ: ಕಳೆದ 15 ದಿನಗಳಿಂದ ಬೀಳುತ್ತಿರುವ ಮಳೆಗೆ ಕೆಂಚನಪುರ ಕೆರೆ ಕೋಡಿಯಾಗಿ ನೀರು ತೊರೆಗಳ ಮೂಲಕ ತಗ್ಗು ಪ್ರದೇಶಗಳಲ್ಲಿರುವ ರೈತರ ಜಮೀನು ಹಾಗೂ ತೋಟಗಳಿಗೆ ನುಗ್ಗುತ್ತಿದೆ. ಉಳಿದಂತೆ ವೀರಸಾಗರ ಕೆರೆ, ಶ್ರೀಗಿರಿಪುರ ಕೆರೆ, ಮಲ್ಲಪ್ಪನ ಹಳ್ಳಿಕೆರೆಗಳು ಕೋಡಿ ಹರಿದಿದ್ದು ಜನರ ಕಣ್ಮನ ಸೆಳೆಯುತ್ತಿದೆ.
ತಡೆಗೋಡೆ ಕುಸಿತ ಭೀತಿ: ವರ್ಷಪೂರ್ತಿ ಭತ್ತದ ಕೆರೆಯೆಂದೇ ಹೆಸರು ವಾಸಿಯಾಗಿರುವ ಕೆಂಚನ ಪುರ ಕೆರೆ ತುಂಬಿ ಕೋಡಿಯ ಮೂಲಕ ನಿರು ನಿತ್ಯ ರಭಸವಾಗಿ ಹರಿಯುತ್ತಿದ್ದು ಕೆರೆಕೋಡಿಯ ಬಳಿ ಕಟ್ಟಿರುವ ತಡೆಗೋಡೆ ಕುಸಿಯುತ್ತಿದ್ದು ಆ ಭಾಗದ ಜನರಲ್ಲಿ ಅತಂಕ ಶುರುವಾಗಿದೆ. ಇದನ್ನು ತಿಳಿದ ತಾಲೂಕು ಆಡಳಿತ ಮರಳಿನ ಮೂಟೆಗಳನ್ನು ಕೋಡಿಗೆ ಬಿಡುವ ಮೂಲಕ ತಾತ್ಕಾಲಿಕವಾಗಿ ಮುಂದೆ ಆಗಬಹುದಾದ ಅಪಾಯವನ್ನು ತಡೆಯುವ ಕಾರ್ಯ ಮಾಡಿದೆ.
“ಮಲ್ಲಪ್ಪನಹಳ್ಳಿ ಹಾಗೂ ಶ್ರೀಗಿರಿಪುರ ಕೆರೆ ಕೋಡಿಯಾಗಿದ್ದು ಜಲಪಾತದಂತೆ ಹರಿಯುವ ನೀರನ್ನು ವೀಕ್ಷಿಸಲು ಕುಟುಂಬದ ಸದಸ್ಯರೊಡನೆ ಹಾಗೂ ಸ್ನೇಹಿತರೊಡನೆ ಜೊತೆಗೂಡಿ ಎರಡು ಮೂರು ತಾಸು ಜಲಕ್ರೀಡೆಯಲ್ಲಿ ತೊಡಗಿ ಪ್ರಕೃತಿ ಸೊಬಗನ್ನು ಕಣ್ತುಂಬಿಸಿಕೊಂಡಿದ್ದು ಖುಷಿಯಾಗಿದೆ.”
– ಅಭಿಷೇಕ್, ಕುದೂರು
“ಬೇಸಿಗೆಯಲ್ಲಿ ನೀರಿಲ್ಲದೆ ಬಣಗುಡುವ ಕೆರೆಗಳು ಮಳೆ ನೀರಿನಿಂದ ತುಂಬಿ ಕೋಡಿಗಳ ಮೂಲಕ ಹರಿವ ಸುಂದರ ಕ್ಷಣಗಳನ್ನು ವೀಕ್ಷಿಸುವುದು ಹಾಗೂ ಸುಂದರ ಕ್ಷಣಗಳನ್ನು ಕ್ಯಾಮರಗಳ ಮೂಲಕ ಸೆರೆ ಹಿಡಿಯುವುದು ಒಂದು ರೋಮಾಂಚನಕಾರಿ ವಿಷಯ.” –
ರಮೇಶ್, ಹವ್ಯಾಸಿ ಛಾಯಗ್ರಾಹಕ