ಬೆಳ್ತಂಗಡಿ: ಕಳೆಂಜ ಗ್ರಾಮದ ಅಮ್ಮಿನಡ್ಕ ಕುದ್ದು ಲೋಲಾಕ್ಷರ ಮನೆ ಪಂಚಾಂಗ ಅರಣ್ಯ ಇಲಾಖೆ ಅಧಿಕಾರಿಗಳು ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಫ್ ನಿರ್ಧಾರದ ಮೇರೆಗೆ ಕಂದಾಯ ಹಾಗೂ ಅರಣ್ಯ ಇಲಾಖೆಗಳು ಬುಧವಾರ 8,474 ಎಕ್ರೆ ಜಾಗದ ಜಂಟಿ ಸರ್ವೇ ಆರಂಭಿಸಿವೆ.
ಕಳೆಂಜ ಗ್ರಾಮದ ಅಮ್ಮಿನಡ್ಕ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಲು ಮುಂದಾಗಿದ್ದಾರೆ ಎಂದು ಅ. 6ರಂದು ಉಪ್ಪಿನಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಮಾಣ ಹಂತದ ಮನೆ ಕೆಡವಿದ್ದರು. ಬಳಿಕ ಶಾಸಕ ಹರೀಶ್ ಪೂಂಜ, ಜಿಲ್ಲೆಯ ಜನಪ್ರತಿನಿಧಿಗಳ ಆಗ್ರಹಕ್ಕೆ ಮಣಿದು ಜಂಟಿ ಸರ್ವೇಗೆ ತಿರ್ಮಾನಿಸಲಾಗಿತ್ತು.
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಸರ್ವೇ ನಂಬರ್ 309/1ರಲ್ಲಿ ಅರಣ್ಯ ಇಲಾಖೆಯ ನೋಟಿಫಿಕೇಶನ್ ಅನುಸಾರ ಮಿಯಾರು ಮೀಸಲು ಅರಣ್ಯ- 6389.39 ಎಕ್ರೆ, ನಿಡ್ಲೆ ಮೀಸಲು ಅರಣ್ಯ- 998.50 ಎಕ್ರೆ ಸೇರಿ ಒಟ್ಟು 7,387.89 ಎಕ್ರೆ ಜಾಗ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಗೆ ಸೇರಿದೆ.
ಅಂದಾಜು ಎರಡು ತಿಂಗಳಲ್ಲಿ ಸರ್ವೇ ಕಾರ್ಯ ಪೂರ್ಣ ಗೊಳ್ಳಬಹುದು ಎಂದು ಕಂದಾಯ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳ್ತಂಗಡಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ರೇಣುಕಾ ನಾಯ್ಕ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್, ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕ ಪವಾಡಪ್ಪ ದೊಡ್ಡಮನಿ, ಗ್ರಾಮ ಆಡಳಿತ ಅಧಿಕಾರಿ ಪೃಥ್ವಿರಾಜ್ ಪಿ.ಶೆಟ್ಟಿ ಸಹಿತ ಅರಣ್ಯ ಇಲಾಖೆ ಸಿಬಂದಿ ಮತ್ತು ಭೂಮಾಪಕರು ಕಳೆಂಜ ಗ್ರಾಮದ 309/1 ಸರ್ವೇ ನಂಬರಿನಲ್ಲಿ ಜಂಟಿ ಸರ್ವೆ ಆರಂಭಿಸಿದ್ದಾರೆ.