Advertisement

ಪ್ರೇಯಸಿಗಾಗಿ ಗರ್ಭಿಣಿ ಪತ್ನಿಯನ್ನೇ ಕೊಂದ ಪತಿ

06:26 AM Jan 17, 2019 | Team Udayavani |

ವಾಡಿ: ಪ್ರೇಯಸಿಗಾಗಿ ಪತಿ ತನ್ನ ಗರ್ಭಿಣಿ ಪತ್ನಿಯನ್ನೇ ಕೊಂದು ಹೂತುಹಾಕಿದ ಪ್ರಕರಣ ತಿಂಗಳ ನಂತರ ಬೆಳಕಿಗೆ ಬಂದಿದೆ.

Advertisement

ತಿಂಗಳ ಹಿಂದೆಯಷ್ಟೇ ಪಟ್ಟಣ ಸಮೀಪದ ಲಕ್ಷ್ಮೀಪುರವಾಡಿ ಗ್ರಾಮದ ಕರಿಷ್ಮಾ (ರೇಷ್ಮಾ) ವಿಜಯಕುಮಾರ ಪವಾರ (23) ಎನ್ನುವರು ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದರು. ನಂತರ ಪೊಲೀಸರು ನಡೆಸಿದ ತನಿಖೆಯಿಂದ ಪರಹತಾಬಾದ ಸಮೀಪದ ಕಲಿಫತ್‌ ದರ್ಗಾ ಹತ್ತಿರದ ಹೆದ್ದಾರಿ ಬದಿಯಲ್ಲಿ ಅವರ ಶವ ಪತ್ತೆಯಾಗಿದೆ.

ಪತಿ ವಿಜಯಕುಮಾರ ಪವಾರ ಹಾಗೂ ಆತನ ಪ್ರೇಯಸಿಯಾದ ಅದೇ ಗ್ರಾಮದ ಪೂಜಾ ರಾಠೊಡ ಎನ್ನುವರೇ ಕೊಲೆ ಮಾಡಿದ ಪ್ರಮುಖ ಆರೋಪಿಗಳಾಗಿದ್ದಾರೆ. ಪತ್ನಿ ಕಾಣೆಯಾಗಿದ್ದಾಳೆ ಎಂದು ಹುಡುಕಾಟ ನಡೆಸುತ್ತಿದ್ದ ಪತಿಯೇ ಕೊಲೆ ಮಾಡಿದ್ದಾನೆ ಎನ್ನುವ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ.

ಘಟನೆ ವಿವರ: ಕೊಲೆಯಾದ ರೇಷ್ಮಾ ಮೂಲತಃ ವಿಜಯಪುರ ಜಿಲ್ಲೆಯ ಡೋಮನಾಳ ತಾಂಡಾ ನಿವಾಸಿಯಾಗಿದ್ದು, 2017ರಲ್ಲಿ ಲಕ್ಷ್ಮೀಪುರವಾಡಿ ಗ್ರಾಮದ ವಿಜಯಕುಮಾರ ಪವಾರ ಎನ್ನುವಾತನೊಂದಿಗೆ ವಿವಾಹವಾಗಿತ್ತು. ಮದುವೆಗೂ ಮುಂಚೆ ಆರೋಪಿ ವಿಜಯಕುಮಾರನು ಪೂಜಾ ಎನ್ನುವಾಕೆಯೊಂದಿಗೆ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆಕೆಯೊಂದಿಗೆ ದೈಹಿಕ ಸಂಬಂಧವಿತ್ತು ಎನ್ನುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಮದುವೆಯ ನಂತರವೂ ವಿಜಯಕುಮಾರನ ಪ್ರಣಯದಾಟ ಮುಂದುವರಿದಿತ್ತು. ಕಾರಣ ಪತ್ನಿಯೊಂದಿಗೆ ಪದೇಪದೆ ಜಗಳ ಮಾಡುತ್ತಿದ್ದ ವಿಜಯಕುಮಾರ, 2018ರ ಡಿ.4 ರಂದು ಶಾಶ್ವತವಾಗಿ ಪತ್ನಿಯನ್ನು ಮುಗಿಸುವ ಸಂಚು ರೂಪಿಸಿದ್ದ. ತವರು ಮನೆಗೆ ಕಳುಹಿಸುವ ನೆಪದಲ್ಲಿ ಹೆಂಡತಿಯನ್ನು ಬೈಕ್‌ ಮೇಲೆ ಕರೆದೊಯ್ದ ಆರೋಪಿ ವಿಜಯಕುಮಾರ, ಪ್ರೇಯಸಿ ಪೂಜಾಳನ್ನು ಮೊದಲೇ ನಿಗದಿಪಡಿಸಲಾದ ಕೊಲೆ ಮಾಡುವ ಸ್ಥಳಕ್ಕೆ ಕಳುಹಿಸಿದ್ದ.

Advertisement

ಇಬ್ಬರೂ ಸೇರಿ ನಾಲ್ಕು ತಿಂಗಳ ಗರ್ಭಿಣಿ ರೇಷ್ಮಾಳ ಕತ್ತು ಹಿಸುಕಿ ಅಮಾನುಷವಾಗಿ ಕೊಂದು ಹಾಕಿ, ರಸ್ತೆ ಪಕ್ಕದ ಗುಂಡಿಯಲ್ಲಿ ಶವ ಹೂತುಹಾಕಿದ್ದರು. ಡಿ.7 ರಂದು ಅಳಿಯನ ಮನೆಯಿಂದ ಮಗಳು ಕಾಣೆಯಾಗಿದ್ದಾಳೆ ಎನ್ನುವ ಕುರಿತು ಕಿಶನ್‌ ರಾಠೊಡ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿ ವಿಜಯಕುಮಾರ ಕೂಡ ಪತ್ನಿಯ ಹುಡುಕಾಟದ ನಾಟಕವಾಡಿದ್ದ ಎಂದು ಸಿಪಿಐ ಪಂಚಾಕ್ಷರಿ ಸಾಲಿಮಠ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಎಸ್‌ಪಿ ಎನ್‌.ಶಶಿಕುಮಾರ, ಹೆಚ್ಚುವರಿ ಎಸ್‌ಪಿ, ಶಹಾಬಾದ ಡಿವೈಎಸ್‌ಪಿ ಕೆ.ಬಸವರಾಜ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಸಿಪಿಐ ಪಂಚಾಕ್ಷರಿ ಸಾಲಿಮಠ, ಪಿಎಸ್‌ಐ ವಿಜಯಕುಮಾರ ಭಾವಗಿ, ಎಎಸ್‌ಐ ಶಿವಕಾಂತ ಹಾಗೂ ಪೇದೆಗಳಾದ ಲಕ್ಷ್ಮಣ ವಾಣಿ, ದತ್ತು ಜಾನೆ, ಚಂದ್ರಶೇಖರ, ದೊಡ್ಡಪ್ಪ, ಶಬ್ಬೀರ್‌, ಅಶೋಕ, ರುದ್ರುಗೌಡ ಹಾಗೂ ಹೀರಾಲಾಲ ಜಟಿಲವಾದ ಪ್ರಕರಣವನ್ನು ವೈಜ್ಞಾನಿಕ ವಿಧಾನಗಳ ಸಹಾಯದಿಂದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ವಿಜಯಕುಮಾರ ಮತ್ತು ಪೂಜಾ ಸದ್ಯ ಪೊಲೀಸರ ಬಂಧನದಲ್ಲಿದ್ದು, ಗುರುವಾರ ಸಹಾಯಕ ಆಯುಕ್ತರ ಸಮ್ಮುಖದಲ್ಲಿ ಶವ ಹೊರತೆಗೆದು ಪಂಚನಾಮೆ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next