Advertisement

ಯೋಗ-ಭೋಗದ ಸಮತೋಲನದಿಂದ ಆರೋಗ್ಯಕರ ಜೀವನ

04:56 PM Sep 12, 2022 | Team Udayavani |

ಬೆಳಗಾವಿ: ಮನುಷ್ಯನ ಜೀವನ ಪರಿಪೂರ್ಣವಾಗಲು ಭೋಗವೂ ಬೇಕು, ಯೋಗವೂ ಬೇಕು. ಇವೆರಡರ ಸಮತೋಲನವೇ ಆರೋಗ್ಯಕರ ಜೀವನಕ್ಕೆ ಬುನಾದಿಯಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.

Advertisement

ನಗರದ ಶಹಾಪುರದಲ್ಲಿರುವ ಕೆಎಲ್‌ಇ ಸಂಸ್ಥೆಯ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಖ್ಯಾತ ಆಯುರ್ವೇದ ವೈದ್ಯ ಡಾ. ಗಿರಿಧರ ಕಜೆ ಅವರ ಆಯುರ್ವೇದ ಜ್ಞಾನ ಯಾನ ಸರಣಿ ಪುಸ್ತಕಗಳ ಏಳನೇ ಕೃತಿಯಾದ ಸಂಸ್ಕಾರ ಪುಸ್ತಕವನ್ನು ರವಿವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿಯು ಯೋಗ ಮತ್ತು ಭೋಗದ ನಡುವೆ ಸಮತೋಲನ ಸಾಧಿಸುವ ಮೂಲಕ ಆರೋಗ್ಯಕ್ಕೆ ಮಹತ್ವ ನೀಡುತ್ತ ಬಂದಿದೆ. ಆಹಾರ ಹಿತ ಮತ್ತು ಮಿತವಾಗಿರಬೇಕು ಎಂಬುದನ್ನು ಆಯುರ್ವೇದದಲ್ಲಿ ಹೇಳಲಾಗಿದೆ ಎಂದರು.

ಡಾ. ಗಿರಿಧರ ಕಜೆ ಅವರು ನಮ್ಮ ಆಯುರ್ವೇದವನ್ನು ಕಾರ್ಪೋರೇಟ್‌ ಜಗತ್ತಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅವರು ಕನ್ನಡದಲ್ಲಿ ಬರೆದಿರುವ ಆಯುರ್ವೇದ ಕುರಿತ ಪುಸ್ತಕಗಳನ್ನು ಖರೀದಿಸಿ ಓದುವ ಮೂಲಕ ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಮಾಜಿ ಶಿಕ್ಷಣ ಸಚಿವ ಎಸ್‌. ಸುರೇಶಕುಮಾರ್‌ ಉದ್ಘಾಟಿಸಿ ಮಾತನಾಡಿ, ವೈದ್ಯರು ತಮ್ಮಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಧೈರ್ಯ ತುಂಬಬೇಕು. ಇಂದಿನ ದಿನಮಾನದಲ್ಲಿ ಹೆದರಿಸುವ ವೈದ್ಯರೇ ಹೆಚ್ಚಿರುವಾಗ ಡಾ. ಗಿರಿಧರ ಕಜೆ ಅವರು ರೋಗಿಗಳಲ್ಲಿ ಧೆ„ರ್ಯ ತುಂಬುವ ವೈದ್ಯರ ಸಾಲಿನಲ್ಲಿ ಶ್ರೇಷ್ಠರಾಗಿ ನಿಲ್ಲುತ್ತಾರೆ. ಅವರ ಬಳಿ ಚಿಕಿತ್ಸೆ ಪಡೆದು ಗುಣಮುಖನಾಗಿರುವ ನನ್ನ ಅನುಭವದ ಮಾತು ಇದಾಗಿದೆ ಎಂದರು.

Advertisement

ಆಯುರ್ವೇದ ಸಿದ್ಧಾಂತ ಪಸರಿಸಲಿ: ಆಶಯ ನುಡಿಗಳನ್ನಾಡಿದ ಕೃತಿಕಾರ ಡಾ. ಗಿರಿಧರ ಕಜೆ, ವಿಶ್ವ ಆರೋಗ್ಯ ಸಂಸ್ಥೆಯು 2000ನೇ ಇಸವಿಯ ಹೊತ್ತಿಗೆ ವಿಶ್ವದ ಪ್ರತಿಯೊಬ್ಬರಿಗೂ ಆರೋಗ್ಯ ಒದಗಿಸುವ ಗುರಿ ಹೊಂದಿತ್ತು. ಆದರೆ 2022ನೇ ಇಸ್ವಿ ಬಂದರೂ ವಿಶ್ವದ ಪ್ರತಿಯೊಬ್ಬರಿಗೂ ಆರೋಗ್ಯ ಒದಗಿಸುವ ಕನಸು ಈಡೇರಿಲ್ಲ. ಬದಲಿಗೆ ರೋಗಗಳು ಹೆಚ್ಚಾಗುತ್ತಲೇ ಇವೆ. ಮೊದಲಿದ್ದ ಸಣ್ಣ ಪುಟ್ಟ ಕಾಯಿಲೆಗಳ ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ ಮೊದಲಾದ ಕಾಯಿಲೆಗಳ ಪ್ರಮಾಣ ಉಲ್ಬಣಗೊಂಡಿದೆ ಎಂದರು.

ವಿಶ್ವ ಆರೋಗ್ಯ ಸಂಸ್ಥೆಯು ಉತ್ತಮ ಉದ್ದೇಶ ಹೊಂದಿದ್ದರೂ ಅದರ ಕಾರ್ಯ ವಿಧಾನದಲ್ಲಿ ಎಡವಿದ್ದರಿಂದ ಉದ್ದೇಶ ಈಡೇರದಂತಾಯಿತು. ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವದ ಎಲ್ಲೆಡೆ ಔಷಧ ತಲುಪಿಸಿದರೆ ಎಲ್ಲರಿಗೂ ಆರೋಗ್ಯ ಲಭಿಸುತ್ತದೆ ಎಂಬ ತಪ್ಪು ಕಲ್ಪನೆಯೇ ಅದರ ಗುರಿ ಈಡೇರದಿರಲು ಕಾರಣವಾಯಿತು. ಎಲ್ಲೆಡೆ ಔಷಧ ತಲುಪಿಸಿದರೆ ಆರೋಗ್ಯ ಲಭಿಸುವುದಿಲ್ಲ. ಆಯುರ್ವೇದ ಸಿದ್ಧಾಂತದ ಜೀವನ ಶೆ„ಲಿಯಿಂದ ಮಾತ್ರ ವಿಶ್ವದಾದ್ಯಂತ ಪ್ರತಿಯೊಬ್ಬರಿಗೂ ಆರೋಗ್ಯ ಭಾಗ್ಯ ಸಾಧ್ಯ ಎಂದರು.

ಆಯುರ್ವೇದ ವೈದ್ಯ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಬೇರೆ ವಿಧಾನಗಳನ್ನು ಪ್ರ್ಯಾಕ್ಟಿಸ್‌ ಮಾಡಬಾರದು ಎಂದು ಸಲಹೆ ನೀಡಿದ ಡಾ. ಗಿರಿಧರ ಕಜೆ, ನಮ್ಮ ಉದ್ದೇಶ ಮನೆ ಮನೆಗೆ ಆಯುರ್ವೇದ ಔಷಧಗಳನ್ನು ತಲುಪಿಸುವುದಲ್ಲ, ಬದಲಿಗೆ ಪ್ರತಿ ಮನಸ್ಸಿಗೆ ಆಯುರ್ವೇದ ಸಿದ್ಧಾಂತವನ್ನು ತಲುಪಿಸುವುದಾಗಿದೆ ಎಂದರು.

ಸೆಲ್ಕೋ ಸೋಲಾರ್‌ನ ಸಿಇಒ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ಆಯುರ್ವೇದ ಕೇವಲ ರೋಗಕ್ಕೆ ಚಿಕಿತ್ಸೆ ನೀಡುವ ಶಾಸ್ತ್ರವಲ್ಲ. ಬದಲಿಗೆ ಅದು ರೋಗ ಬರದಂತೆ ತಡೆದು ಸ್ವಾಸ್ಥ್ಯ ಕಾಪಾಡುವ ಶಾಸ್ತ್ರವಾಗಿದೆ ಎಂದರು.

ಆಧುನಿಕ ಯುಗದಲ್ಲೂ ಆಯುರ್ವೇದ ಪ್ರಸ್ತುತ ಎಂಬುದನ್ನು ಡಾ. ಗಿರಿಧರ ಕಜೆ ಅವರು ಸಾಧಿಸಿ ತೋರಿಸಿದ್ದಾರೆ. ಋಷಿ ಸಂಸ್ಕೃತಿಯ ಬೇರನ್ನು ಹೊಸ ಸಂಸ್ಕೃತಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಖಾನಾಪುರ ಮಾಜಿ ಶಾಸಕ ಅರವಿಂದ ಪಾಟೀಲ ಅವರು ಡಾ. ಗಿರಿಧರ ಕಜೆ ಅವರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ತಮ್ಮ ಅನುಭವವನ್ನು ವಿವರಿಸಿದರು. ಕಾಹೆರ್‌ ರಜಿಸ್ಟ್ರಾರ್‌ ಡಾ| ವಿ.ಎ. ಕೋಟಿವಾಲೆ ಅಧ್ಯಕ್ಷತೆ ವಹಿಸಿದ್ದರು. ಡಾ. ಗಿರಿಧರ ಕಜೆ, ಎಸ್‌. ಸುರೇಶ ಕುಮಾರ ಅವರನ್ನು ಸನ್ಮಾನಿಸಲಾಯಿತು.

ಎಸ್‌ಬಿಜಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಡಿವೇಶ ಅರಕೇರಿ, ಡಾ. ರವಿ ಪಾಟೀಲ, ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಕಿರಣ ಖೋತ ಪಾಟೀಲ, ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇತರರು ಇದ್ದರು.

ಸೆಲ್ಕೋ ಸೋಲಾರ್‌ ಕಾರ್ಯಕ್ರಮ ಆಯೋಜಿಸಿತ್ತು. ವಿನಾಯಕ ಹೆಗಡೆ ಸ್ವಾಗತಿಸಿದರು. ಸುಬ್ರಮಣ್ಯ ಭಟ್‌ ನಿರೂಪಿಸಿದರು. ಬಿ.ಎಂ. ಕಂಕಣವಾಡಿ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ| ಸುಹಾಸ ಶೆಟ್ಟಿ ವಂದಿಸಿದರು.

ಎಲ್ಲೆಡೆ ಔಷಧ ತಲುಪಿಸಿದರೆ ಆರೋಗ್ಯ ಲಭಿಸುವುದಿಲ್ಲ. ಆಯುರ್ವೇದ ಸಿದ್ಧಾಂತದ ಜೀವನ ಶೈಲಿಯಿಂದ ಮಾತ್ರ ವಿಶ್ವದಾದ್ಯಂತ ಪ್ರತಿಯೊಬ್ಬರಿಗೂ ಆರೋಗ್ಯ ಭಾಗ್ಯ ಸಾಧ್ಯ. -ಗಿರಿಧರ ಕಜೆ, ಕೃತಿಕಾರ

Advertisement

Udayavani is now on Telegram. Click here to join our channel and stay updated with the latest news.

Next