ಮುಂಬೈ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಶುಕ್ರವಾರ ನಡೆದ ರೋಚಕ ಪಂದ್ಯದಲ್ಲಿ ಭಾರತ ತಂಡ ಜಯಗಳಿಸಿದೆ. ಕೆ.ಎಲ್. ರಾಹುಲ್ ಅವರ ಸಮಯೋಚಿತ ಆಟದ ನೆರವಿನಿಂದ 5 ವಿಕೆಟ್ ಅಂತರದ ಗೆಲುವು ಸಾಧಿಸಿತು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಆಸೀಸ್ ಅನ್ನು 35.4 ಓವರ್ ಗಳಲ್ಲಿ 188 ರನ್ ಗಳಿಗೆ ಕಟ್ಟಿ ಹಾಕಿತು. ಆರಂಭಿಕ ಆಟಗಾರ ಹೆಡ್ 5 ರನ್ ಗಳಿಗೆ ಔಟಾದರು. ಏಕಾಂಗಿ ಹೋರಾಟ ನೀಡಿದ ಮಿಚೆಲ್ ಮಾರ್ಷ್ 81 ರನ್ ಗಳಿಸಿ ಔಟಾದರು. ನಾಯಕ ಸ್ಟೀವನ್ ಸ್ಮಿತ್ 22 ರನ್ ಗಳಿಸಿ ನಿರ್ಗಮಿಸಿದರು. ಲಬುಸ್ಚಾಗ್ನೆ 15 ರನ್ , ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ 26 ರನ್, ಗ್ರೀನ್ 12 ರನ್ ಗಳಿಸಿದರು. ಉಳಿದ ಆಟಗಾರರು ಒಂದಂಕಿ ದಾಟಲಿಲ್ಲ.
ಬಿಗಿ ಬೌಲಿಂಗ್ ದಾಳಿ ನಡೆಸಿದ ಭಾರತದ ಬೌಲರ್ ಗಳ ಪೈಕಿ ಶಮಿ ಮತ್ತು ಸಿರಾಜ್ ತಲಾ 3 ವಿಕೆಟ್, ರವೀಂದ್ರ ಜಡೇಜಾ 2 ವಿಕೆಟ್ ಪಾಂಡ್ಯ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಭಾರತ 5 ರನ್ ಆಗುವಷ್ಟರಲ್ಲಿ 3 ರನ್ ಗಳಿಸಿದ್ದ ಇಶಾನ್ ಕಿಶನ್ ಅವರ ವಿಕೆಟ್ ಕಳೆದುಕೊಂಡಿತು. ವಿರಾಟ್ ಕೊಹ್ಲಿ 4 ರನ್ ಗಳಿಸಿ ಔಟಾದರು. ಶುಭಮನ್ ಗಿಲ್ 20 ರನ್ ಕೊಡುಗೆ ಸಲ್ಲಿಸಿದರು. ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ನಿರ್ಗಮಿಸಿದರು. ಕೊಹ್ಲಿ ಮತ್ತು ಯಾದವ್ ಅವರಿಗೆ ವೇಗಿ ಸ್ಟಾರ್ಕ್ ಮಾರಕವಾದರೂ. ಇಬ್ಬರನ್ನೂ ಎಲ್ಬಿಡಬ್ಲ್ಯೂ ಮಾಡಿ ಪೆವಿಲಿಯನ್ ಗೆ ಕಳುಹಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 25 ರನ್ ಗಳಿಸಿ ಔಟಾದರು.
Related Articles
ರಾಹುಲ್ ಕಮಾಲ್
ಕೆ ಎಲ್ ರಾಹುಲ್ ಅವರ ಸಮಯೋಚಿತ ಆಟ ತಂಡದ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿತು. 39ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಆಟಕ್ಕಿಳಿದ ರಾಹುಲ್ ತಾಳ್ಮೆಯ ಆಟವಾಡಿದರು. ಆಸೀಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರು ಅರ್ಧ ಶತಕ ಪೂರ್ತಿ ಗೊಳಿಸಿ ಗೆಲುವಿನ ಭರವಸೆ ಮೂಡಿಸಿದರು. ಅವರಿಗೆ 6 ನೇ ವಿಕೆಟ್ ಗೆ ಸಾಥ್ ನೀಡಿದ ರವೀಂದ್ರ ಜಡೇಜಾ ಗೆಲುವಿನಲ್ಲಿ ಮಹತ್ವದ ಕೊಡುಗೆ ಸಲ್ಲಿಸಿದರು. 108 ರನ್ ಗಳ ಜೊತೆಯಾಟವಾಡಿದರು. ತಂಡ 39.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ 5 ವಿಕೆಟ್ ಅಂತರದ ಜಯ ಸಾಧಿಸಿತು.
ರಾಹುಲ್ ಅವರು 91 ಎಸೆತಗಳಲ್ಲಿ 7 ಬೌಂಡರಿ ಮತ್ತು ಆಕರ್ಷಕ 1 ಸಿಕ್ಸರ್ ಒಳಗೊಂದು 75 ರನ್ ಗಳಿಸಿ ಅಜೇಯರಾಗಿ ಉಳಿದರು. ಜಡೇಜಾ 69 ಎಸೆತಗಳಲ್ಲಿ 45 ರನ್ ಕೊಡುಗೆ ಸಲ್ಲಿಸಿ ಅಜೇಯರಾಗಿ ಉಳಿದು ಗೆಲುವಿನ ಸಂಭ್ರಮದಲ್ಲಿ ಭಾಗಿಯಾದರು.
ಆಸೀಸ್ ಪರ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಕಬಳಿಸಿದರು. ಮಾರ್ಕಸ್ ಸ್ಟೊಯಿನಿಸ್ 2 ವಿಕೆಟ್ ಪಡೆದರು.