ಉತ್ತರಾಖಂಡ: ತಮ್ಮ ಮದುವೆಯ ದಿನ ವರ ತನ್ನ ಕುಟುಂಬಸ್ಥರೊಂದಿಗೆ ಮತ್ತು ಬಳಗದವರೊಂದಿಗೆ ವಧುವಿನ ಮನೆಗೆ ಮೆರವಣಿಗೆಯಲ್ಲಿ ತೆರಳುವ ಸಂಪ್ರದಾಯ ಉತ್ತರಭಾರತದಲ್ಲಿ ಜನಪ್ರಿಯ ಆಚರಣೆಗಳಲ್ಲಿ ಒಂದಾಗಿದೆ ನಮ್ಮ ಕಡೆ ಇದನ್ನು ‘ದಿಬ್ಬಣ’ ಎಂದು ಕರೆದರೆ ಉತ್ತರ ಭಾರತದಲ್ಲಿ ಇದನ್ನು ‘ಬಾರಾತ್’ ಎಂದು ಕರೆಯುತ್ತಾರೆ. ಮತ್ತು ಯಾವುದೇ ವರ ಈ ಆಚರಣೆಯನ್ನು ನಿರಾಕರಿಸುವಂತಿಲ್ಲ ಎನ್ನುವುದು ಇದರ ವಿಶೇಷತೆಗಳಲ್ಲಿ ಒಂದು. ಇಂತಹ ಒಂದು ಬಾರಾತ್ (ವಧುವಿನ ಮನೆಗೆ ವರನ ಮೆರವಣಿಗೆ) ಇದೀಗ ಒಂದು ವಿಶೇಷ ಕಾರಣಕ್ಕೆ ಸುದ್ದಿಯಾಗಿದೆ.
ಉತ್ತರಾಖಂಡದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಈ ಹಿಮಪಾತ ಇದೀಗ ಮದುಮಗನೊಬ್ಬನ ದಿಬ್ಬಣ ಮೆರವಣಿಗೆಗೆ ತೊಡಕಾಗಿದೆ. ಆದರೆ ಇದರಿಂದ ಎದೆಗುಂದದ ಈ ವರ ತನ್ನ ವಧುವಿನ ಮನೆಗೆ ಸುಮಾರು ನಾಲ್ಕು ಕಿಲೋ ಮೀಟರ್ ಗಳಷ್ಟು ದೂರ ನಡೆದುಕೊಂಡೇ ಸಾಗಿದ್ದಾನೆ. ವರನ ಈ ಹಿಮ ಪಾದಯಾತ್ರೆಗೆ ಆತನ ಕುಟುಂಬದವರು ಮತ್ತು ಬಳಗದವರೂ ಸಹ ಸಾಥ್ ನೀಡಿದ್ದಾರೆ.
ಭಾರೀ ಹಿಮಪಾತದ ಕಾರಣ ರಸ್ತೆಗಳೆಲ್ಲಾ ಹಿಮಾವೃತಗೊಂಡಿದ್ದು ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇಂತಹ ಸ್ಥಿತಿಯಲ್ಲಿ ವರನ ದಿಬ್ಬಣಕ್ಕೆ ಹಿಮದ ಹಾದಿಯಲ್ಲಿ ನಡೆದು ಸಾಗದೆ ಬೇರೆ ದಾರಿಯೇ ಇರಲಿಲ್ಲ. ಇದನ್ನೊಂದು ಸವಾಲಾಗಿ ಸ್ವೀಕರಿಸಿದ ವರ ಸಾಂಪ್ರದಾಯಿಕ ದಿರಿಸು ಶೇರ್ವಾಣಿಯನ್ನು ತೊಟ್ಟುಕೊಂಡು, ಛತ್ರಿಯನ್ನು ಹಿಡಿದುಕೊಂಡು ಆತ್ಮವಿಶ್ವಾಸದ ನಗುವಿನೊಂದಿಗೆ ತನ್ನವರ ಜೊತೆ ನಡೆದುಕೊಂಡು ಹೋಗುತ್ತಿರುವ ಫೊಟೋ ಇದೀಗ ವೈರಲ್ ಆಗಿದೆ.
ಈ ಬಾರಾತ್ ಮೆರವಣಿಗೆಯ ಫೊಟೋಗಳನ್ನು ಎ.ಎನ್.ಐ. ಸುದ್ದಿಸಂಸ್ಥೆ ತನ್ನ ಟ್ವಿಟ್ಟರ್ ಅಕೌಂಟ್ ನಲ್ಲಿ ಇಂದು ಪೋಸ್ಟ್ ಮಾಡಿದ್ದು ಇದಕ್ಕೆ ನೆಟ್ಟಿಗರಿಂದ ಭಾರೀ ಪ್ರಶಂಸೆ ಮತ್ತು ಸ್ಪಂದನೆ ವ್ಯಕ್ತವಾಗಿದೆ. ವರನ ಧೈರ್ಯವನ್ನು ಹಲವರು ಪ್ರಶಂಸಿಸಿದ್ದಾರೆ.
Related Articles
ಕೆಲವರಂತು ತುಂಬಾ ತಮಾಷೆಯ ಕಮೆಂಟ್ ಮೂಲಕ ಈ ಘಟನೆಯನ್ನು ಎಂಜಾಯ್ ಮಾಡಿದ್ದಾರೆ. ಒಬ್ಬರಂತೂ, ‘ಇಫ್ ದೇರ್ ಇಸ್ ಎ ವಿಲ್, ದೇರ್ ಇಸ್ ಎ ವೈಫ್!’ ಎಂದು ಕಮೆಂಟ್ ಮಾಡಿದ್ದಾರೆ. ‘ಲಕ ಲಕನೆ ಹೊಳೆಯುತ್ತಿರುವ ಮದುಮಗ ತನ್ನ ನಗುಮೊಗದಿಂದಲೇ ಪ್ರೀತಿಗೊಂದು ಹೊಸ ಭಾಷ್ಯವನ್ನು ಬರೆದಿದ್ದಾನೆ’ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಅಂತೂ ಮದುವೆಯ ಬಂಧನಕ್ಕೆ ಒಳಗಾಗಲು ಸುದೀರ್ಘ ಹಿಮದ ಹಾದಿಯನ್ನು ಕ್ರಮಿಸಿದ ಈ ಯುವಕ ದಾಂಪತ್ಯ ಜೀವನದಲ್ಲಿ ಗೆಲ್ಲುವದರಲ್ಲಿ ಸಂಶಯವಿಲ್ಲ ಅಲ್ಲವೇ?