ಕಾಗವಾಡ: ಅನೇಕ ವರ್ಷಗಳ ಬಳಿಕ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ತಾಲೂಕಾಡಳಿತ ಅಧಿಕಾರಿಗಳ ವಿಶೇಷ ಪ್ರಯತ್ನದಿಂದ ನ. 1 ರಂದು ಕನ್ನಡ ಹಾಗೂ ಮರಾಠಿ ಭಾಷಿಕರು ಒಗ್ಗೂಡಿ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸಿದರು.
ಸೋಮವಾರ ಮಂಗಸೂಳಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ತಹಶೀಲ್ದಾರ ರಾಜೇಶ ಬುರಲಿ, ಅಥಣಿ ಸಿಪಿಐ ಶಂಕರಗೌಡ ಬಸನಗೌಡರ, ಗ್ರಾಮ ಪಂಚಾಯತಿ ಅಧ್ಯಕ್ಷೆ ಸರೀತಾ ಪಾಟೀಲ, ಎಪಿಎಂಸಿ ಸಂಚಾಲಕ ರವೀಂದ್ರ ಪೂಜಾರಿ, ಸೇರಿದಂತೆ ಎಲ್ಲ ಅಧಿಕಾರಿಗಳು, ಚುನಾಯಿತ ಸದಸ್ಯರು ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಾಜ್ಯೋತ್ಸವ ಆಚರಿಸಿದರು.
ಎಪಿಎಂಸಿ ಸಂಚಾಲಕ ರವೀಂದ್ರ ಪೂಜಾರಿ ಮಾತನಾಡಿ, ಗಡಿ ಭಾಗದ ಮಂಗಸೂಳಿ ಗ್ರಾಮ ಮರಾಠಿ ಸಂಸ್ಕೃತಿಯ ಊರು. ಕೆಲವು ಮರಾಠಿ ಸಹೋದರರು ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಕಾರಣಾಂತರಗಳಿಂದ ವಿರೋಧ ಮಾಡುತ್ತ ಬಂದಿದ್ದರು. ಇತ್ತೀಚೆಗೆ ಕನ್ನಡ ವಾತಾವರಣ ಗ್ರಾಮದಲ್ಲಿ ಗಟ್ಟಿಗೊಳ್ಳುತ್ತಿದೆ. ಮರಾಠಿಗರು ಕೂಡ ಕನ್ನಡ ಭಾಷೆ, ಸಂಸ್ಕೃತಿಯನ್ನು ಪ್ರೀತಿಸುತ್ತ, ಗೌರವಿಸುತ್ತ ಬರುತ್ತಿರುವುದಕ್ಕೆ ಇಂದಿನ ಭವ್ಯ ಮೆರವಣಿಗೆಯೇ ಸಾಕ್ಷಿ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಅಮರ ಪಾಟೀಲ, ಅಭಯ ಪಾಟೀಲ, ಪಿಎಸ್‌ಐ ಬಿ.ಎಂ.ರಬಕವಿ, ತಾಲೂಕಾ ಪಂಚಾಯತಿ ಇಒ ವೀರಣಗೌಡ ಎಗಣಗೌಡರ, ಉಪತಹಶೀಲ್ದಾರ ಅಣ್ಣಾಸಾಹೇಬ ಕೋರೆ, ಪಿಕೆಪಿಎಸ್ ಅಧ್ಯಕ್ಷ ಸಂಜಯ ಶೆಟ್ಟಿ, ವ್ಯಾಪಾರಿ ಸಂಘಟನೆಯ ಅಧ್ಯಕ್ಷ ರಾಜು ಶೆಟ್ಟಿ, ಕರವೇ ಅಧ್ಯಕ್ಷ ಪ್ರಮೋದ ಪೂಜಾರಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಪಂ ಸದಸ್ಯರು, ದಲಿತ ಮುಖಂಡ ಸಂಜಯ ತಳವಲಕರ, ಪಿಡಿಒ ಮಲ್ಲಯ್ನಾ ಹಿರೇಮಠ, ಕನ್ನಡ ಅಭಿಮಾನಿಗಳು ಪಾಲ್ಗೊಂಡಿದ್ದರು.
ಕರಾಳ ದಿನಕ್ಕೆ ಬ್ರೇಕ್: ಮಂಗಸೂಳಿ ಗ್ರಾಮದಲ್ಲಿ ನವೆಂಬರ್ 1 ರಂದು ಮರಾಠಿಗರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಕರಾಳ ದಿನ ಆಚರಿಸುವ ಮೂಲಕ ಉದ್ಧಟತನ ಪ್ರದರ್ಶಿಸುತ್ತಿದ್ದರು. ಆದರೆ ಈ ವರ್ಷ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿಯವರ ಆದೇಶದ ಮೇರೆಗೆ ಡಿವೈಎಸ್‌ಪಿ ಎಸ್.ವಿ.ಗಿರೀಶ, ತಹಶೀಲ್ದಾರ್ ರಾಜೇಶ ಬುರಲಿ, ಸಿಪಿಐ ಶಂಕರಗೌಡ ಬಸಗೌಡರ, ಪಿಎಸ್‌ಐ ಬಿ.ಎಂ.ರಬಕವಿ ನೇತೃತ್ವದಲ್ಲಿ ಕರಾಳ ದಿನ ಆಚರಿಸದಂತೆ ಮರಾಠಿಗರಿಗೆ ಖಡಕ್ ಎಚ್ಚರಿಕೆ ನೀಡಿ ಕರಾಳ ದಿನಾಚರಣೆಗೆ ಬ್ರೇಕ್ ಹಾಕಿದ್ದಾರೆ.