ಗದಗ: ನಾಡಿನ ಅಂಧ, ಅನಾಥರ ಬಾಳಿಗೆ ಬೆಳಕಾದ ವೀರೇಶ್ವರ ಪುಣ್ಯಾಶ್ರಮದ ಲಿಂ. ಪಂಡಿತ ಪಂಚಾಕ್ಷರಿ ಗವಾಯಿಗಳವರ 79ನೇ ಹಾಗೂ ಲಿಂ. ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳವರ 13ನೇ ಪುಣ್ಯಸ್ಮರಣೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ (ಜೇಷ್ಠ ಬಹುಳ ಪಂಚಮಿ) ಗುರುವಾರ ಸಂಜೆ ನೆರೆದ ಸಾವಿರಾರು ಭಕ್ತರ ಮಧ್ಯೆ ಮಹಾರಥೋತ್ಸವವು ಸಡಗರ-ಸಂಭ್ರಮದಿಂದ ನೆರವೇರಿತು.
ಶ್ರೀ ವೀರೇಶ್ವರ ಪುಣ್ಯಾಶ್ರಮದಿಂದ ಗದಗ ಎಪಿಎಂಸಿ ಪ್ರಾಂಗಣದ ದ್ವಾರಬಾಗಿಲು ಬಳಿಯ ಪಾದಗಟ್ಟೆಯವರೆಗೆ ನಡೆದ ರಥೋತ್ಸವದುದ್ದಕ್ಕೂ ಶ್ರೀ ಪುಟ್ಟಯ್ಯಜ್ಜ ಹಾಗೂ ಪಂಚಾಕ್ಷರಿ ಗವಾಯಿಗಳ ಜೈಕಾರ ಹಾಕುತ್ತ ಹರ-ಹರ ಮಹಾದೇವ..ಎಂಬೆಲ್ಲ ಘೋಷಗಳು ಮೊಳಗಿದವು. ನೆರೆದ ಭಕ್ತರು ರಥೋತ್ಸವಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಪುನೀತರಾದರು.
ಮಹಾರಥೋತ್ಸವದ ಮೆರವಣಿಗೆಯಲ್ಲಿ ಕರಡಿ ಮಜಲು, ಜಾಂಜ್ ಮೇಳ, ಚಂಡಿ ಮದ್ದಳೆ, ನಂದಿಕೋಲ ಸಮ್ಮಾಳ ಮೇಳ, ಬ್ಯಾಂಜೋ ಮೇಳ, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಜನಾ ಮೇಳಗಳು ಮಹಾರಥೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರವಣಿಗೆಯ ಮೆರಗು ಹೆಚ್ಚಿಸಿದವು.
ಗದಗ ಜಿಲ್ಲೆಯ ಹೊಂಬಳ, ಬಳಗಾನೂರ, ಹುಯಿಲಗೋಳ, ಡಂಬಳ, ರೋಣ, ಗಜೇಂದ್ರಗಡ, ಲಕ್ಷ್ಮೇಶ್ವರ, ಮುಂಡರಗಿ, ನರಗುಂದ ಸೇರಿ ರಾಜ್ಯದ ದಾವಣಗೆರೆ, ಹಾವೇರಿ, ಧಾರವಾಡ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಿಂದ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದರು.