Advertisement

ಸೀವೇವ್‌ ಬ್ರೇಕರ್‌ ಪ್ರಯೋಗಕ್ಕೆ ಉಳ್ಳಾಲ ಸಜ್ಜು

01:16 AM Jul 14, 2022 | Team Udayavani |

ಮಂಗಳೂರು: ಕಡಲ್ಕೊರೆತದಿಂದ ಕಂಗೆಟ್ಟಿರುವ ಉಳ್ಳಾಲದಲ್ಲಿ ಮತ್ತೊಂದು ನೂತನ ತಂತ್ರಜ್ಞಾನ ಪ್ರಯೋಗಕ್ಕೆ ಸರಕಾರ ಮುಂದಾಗಿದೆ. ಈ ಬಾರಿ “ಸೀವೇವ್‌ ಬ್ರೇಕರ್‌’ ಸರದಿ.

Advertisement

ಉಳ್ಳಾಲದಲ್ಲಿ ಈ ಮೊದಲು ಬರ್ಮ್, ಬ್ರೇಕ್‌ವಾಟರ್‌, ಗ್ರೋಯಿನ್‌, ಸೀ ವಾಲ್‌ ಇತ್ಯಾದಿ ತಂತ್ರಜ್ಞಾನ ಬಳಸಿ ಕಡಲ್ಕೊರೆತಕ್ಕೆ ತಡೆ ಯೊಡ್ಡುವ ಪ್ರಯತ್ನಗಳು ನಡೆದಿವೆ.

ಇದೀಗ ರಾಜ್ಯದಲ್ಲೇ ಮೊದಲ ಬಾರಿಗೆ ಉಳ್ಳಾಲವನ್ನು ಸೀವೇವ್‌ ಬ್ರೇಕರ್‌ ತಂತ್ರಜ್ಞಾನ ಅನುಷ್ಠಾನ ಗೊಳಿಸಲು ಆಯ್ಕೆ ಮಾಡಿ ರುವುದಾಗಿ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಕಡಲ್ಕೊರೆತ ವೀಕ್ಷಣೆಯ ಬಳಿಕ ತಿಳಿಸಿದ್ದರು.

ಇದು ವಿದೇಶದ ಟೆಕ್ನಾಲಜಿ ಯೇನೂ ಅಲ್ಲ, ನೆರೆಯ ಕಾಸರ ಗೋಡು ಜಿಲ್ಲೆಯ ನೆಲ್ಲಿಕುನ್ನು ಎಂಬ ಕಡಲತೀರದಲ್ಲಿ ಅಲ್ಲಿನ ಉದ್ಯಮಿ ಯೊಬ್ಬರು ಪ್ರಾಯೋಗಿಕವಾಗಿ ಕೈಗೊಂಡಿರುವ ಕಡಲ್ಕೊರೆತ ತಡೆ ಯುವ ವಿಧಾನ. ಇದು ತೀರಾ ಹೊಸದಾಗಿ ಕಂಡುಕೊಂಡ ವ್ಯವಸ್ಥೆ. ಇಲ್ಲಿ ಕಡಲಿಗೆ ಕಲ್ಲು ಹಾಕುವುದು,

ಟೆಟ್ರಾಪೋಡ್‌ಗಳನ್ನು ಹಾಕುವ ವಿಚಾರವೇ ಇಲ್ಲ. ಬದಲಿಗೆ 50 ಅಡಿ ಉದ್ದ, 20 ಅಡಿ ಅಗಲ ಹಾಗೂ 15ರಿಂದ 20 ಅಡಿ ಎತ್ತರದ ಕಾಂಕ್ರೀಟ್‌ ಫ್ರೇಮ್‌ಗಳನ್ನು ನಿರ್ಮಿಸಿ ಕಡಲಿನಲ್ಲಿ ಅಳವಡಿಸುವುದು ಇದರ ಮುಖ್ಯ ಅಂಶ.

Advertisement

ಕಡಲ್ಕೊರೆತ ತಡೆಗೆ
ಹೊಸ ವಿಧಾನ
ಕಾಸರಗೋಡಿನ ಉದ್ಯಮಿ ಯು.ಕೆ. ಯೂಸುಫ್‌ ತಮ್ಮದೇ ಈ ಆವಿ ಷ್ಕಾರಕ್ಕೆ ಪೇಟೆಂಟ್‌ ಕೂಡ ಪಡೆದಿದ್ದಾರೆ. ಕೇರಳ ಸರಕಾರದ ಅಧೀನದ ಕೇರಳ ಎಂಜಿನಿಯರಿಂಗ್‌ ಸಂಶೋಧನ ಸಂಸ್ಥೆಯವರು ಈ ಟೆಕ್ನಾಲಜಿಯನ್ನು ಪರಿಶೀಲಿಸಿದ ಬಳಿಕ ನೆಲ್ಲಿಕುನ್ನುವಿನಲ್ಲಿ ಇದನ್ನು ಕೈಗೊಳ್ಳಲಾಗಿದೆ. ಎರಡು ತಿಂಗಳ ಹಿಂದೆಯಷ್ಟೇ ಇದು ಪೂರ್ಣಗೊಂಡಿದೆ. ಈ ಮಳೆಗಾಲದಲ್ಲಿ ಇಷ್ಟರವರೆಗೆ ಸೀವೇವ್‌ ಬ್ರೇಕರ್‌ ಹಾಕಿದ ಸ್ಥಳದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಹೊಸ ರಚನೆಯಾದ್ದರಿಂದ ಕಡಲಕೊರೆತ ನೆಲ್ಲಿಕುನ್ನುವಿನಿಂದ ಉತ್ತರಕ್ಕೋ ದಕ್ಷಿಣಕ್ಕೋ ಸ್ಥಳಾಂತರಗೊಂಡಿಲ್ಲ. ಸೀ ವೇವ್‌ ಬ್ರೇಕರ್‌ ಅನ್ನು ಬೇರೆ ಎಲ್ಲೂ ಇದುವರೆಗೆ ಇದನ್ನು ಅನುಷ್ಠಾನ ಮಾಡಿಲ್ಲ. ಆದರೆ ಇದು ಗ್ರೋಯಿನ್‌ಗಳ ರಚನೆ, ಬರ್ಮ್, ಇತ್ಯಾದಿಗೆ ಹೋಲಿಸಿದರೆ ಶೇ. 15ರಷ್ಟು ಕಡಿಮೆ ವೆಚ್ಚದ್ದು ಎನ್ನಲಾಗುತ್ತಿದೆ.

ಬಂದರು ಇಲಾಖೆಯ ಎಂಜಿನಿ ಯರ್‌ಗಳಿಗೂ ಈ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ರಾಜ್ಯ ಬಂದರು ಸಚಿವ ಎಸ್‌.ಅಂಗಾರ ಈ ಟೆಕ್ನಾಲಜಿಯನ್ನು ವೀಕ್ಷಿಸಿ ಬಂದಿದ್ದಾರೆ. ಅಷ್ಟೇ ಅಲ್ಲ ಯೂಸುಫ್‌ ಅವರು ಕೂಡ ಉಳ್ಳಾಲದಲ್ಲಿ ಕಡಲ್ಕೊ ರೆತ ಬಾಧಿತ ಬಟ್ಟಪಾಡಿ ಪ್ರದೇಶವನ್ನು ವೀಕ್ಷಿಸಿ ಇಲ್ಲಿಗೆ ಬೇಕಾದಂತೆ ಅಂದಾಜುಪಟ್ಟಿ ಸಿದ್ಧಗೊಳಿಸಿದ್ದಾರೆ.

ಪ್ರಸ್ತಾವನೆ ರವಾನೆ
ಬಂದರು ಇಲಾಖೆ ಅಧಿಕಾರಿಗಳು 24 ಕೋ.ರೂ.ಗಳ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈ 24 ಕೋಟಿ ರೂ.ಗಳಲ್ಲಿ ಬಟ್ಟಪ್ಪಾಡಿಯಲ್ಲಿ 1 ಕಿ.ಮೀ. ಉದ್ದಕ್ಕೆ ಸೀ ವೇವ್‌ ಬ್ರೇಕರ್‌ ನಿರ್ಮಾಣವಷ್ಟೇ ಅಲ್ಲ, ರಸ್ತೆ ನಿರ್ಮಾಣ, ಗಾರ್ಡನ್‌ ಹಾಗೂ ಲೈಟಿಂಗ್‌ ವ್ಯವಸ್ಥೆಯನ್ನೂ ಸೇರಿಸಲಾಗಿದೆ.

ಕಾರ್ಯವಿಧಾನ ಹೇಗೆ?
ಸಾಮಾನ್ಯವಾಗಿ ಕಡಲ್ಕೊರೆತ ತಡೆಗೆ ಹಾಕುವ ಕಲ್ಲುಗಳ ತೂಕ 5-10 ಟನ್‌ ಇರುತ್ತದೆ. ಅದನ್ನು ಮುಂಗಾರಿನ ಸಂದರ್ಭದ ಬಲಿಷ್ಠ ಸಮುದ್ರದಲೆಗಳು ಕೊಚ್ಚಿ ಕೊಂಡೊಯ್ಯುತ್ತವೆ. ಆದರೆ ಸೀವೇವ್‌ ಬ್ರೇಕರ್‌ಗಳ ಒಂದೊಂದು ಕಾಂಕ್ರೀಟ್‌ ಫ್ರೇಮ್‌ 400 ಟನ್‌ ತೂಕವಿರುತ್ತದೆ. ಕಡಲ ತೀರದಲ್ಲಿ ತಳದಲ್ಲಿ ಕಲ್ಲು ಸಿಗುವ ವರೆಗೂ (ಪೈಲಿಂಗ್‌ ರೀತಿಯಲ್ಲಿ) ಮರಳನ್ನು ತೆಗೆದು, ಈ ಫ್ರೇಮ್‌ ಅಳವಡಿಸುತ್ತಾರೆ. ಆ ಬಳಿಕ ಫ್ರೇಮ್‌ನೊಳಗೆ ಮರಳು, ಮಣ್ಣು ಇತ್ಯಾದಿ ಹಾಕಲಾಗುತ್ತದೆ. ಇದರ ಮೇಲೆ ಉದ್ಯಾನವನ, ಮರ ಬೆಳೆಸ ಬಹುದು. ಇದು ಕೊಚ್ಚಿ ಹೋಗುವುದಿಲ್ಲ ಎನ್ನುತ್ತಾರೆ ಯೂಸುಫ್‌.

ನಾವು ಬಂದರು ಸಚಿವರೊಂದಿಗೆ ನೆಲ್ಲಿಕುನ್ನು ಸೀವೇವ್‌ ಬ್ರೇಕರ್‌ ನೋಡಿಬಂದಿದ್ದೇವೆ, ಅದು ಹೊಸದಾಗಿ ಆಗಿದೆ. ಉಳ್ಳಾಲ ಭಾಗಕ್ಕೆ ಹೋಲಿಸಿದರೆ ಅಲ್ಲಿ ಇಲ್ಲಿನಷ್ಟು ಬಲವಾದ ಅಲೆ ಇರಲಿಲ್ಲ. ಈಗಾಗಲೇ ಈ ಕುರಿತ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗಿದೆ.
ಮನೋಹರ ಆಚಾರ್ಯ,
ಅಸಿಸ್ಟೆಂಟ್‌ ಎಂಜಿನಿಯರ್‌, ಬಂದರು ಮತ್ತು ಮೀನುಗಾರಿಕೆ ಇಲಾಖೆ


-ವೇಣುವಿನೋದ್‌ ಕೆ.ಎಸ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next