ಚನ್ನಪಟ್ಟಣದಲ್ಲಿ ಮರದ ಆಟಿಕೆಗಳ ನಡುವೆ 14 ಕೋಣೆಗಳ 1 ಡಬ್ಬಿಯನ್ನು ಕಂಡೆ. ಅದರ ಕುರಿತು ಕೇಳಲು ಅದು ಚೆನ್ನೆಮಣೆ (ಅಳಿ ಗುಳಿ ಮಣೆಯೆಂದು ತಿಳಿಯಿತು. ಕೇರಳದಲ್ಲಿ ನಿಕ್ಕಕ್ಕಳಿ, ತಮಿಳಿನಲ್ಲಿ ಪನ್ನಾಂ ಗುಯಿ ಎಂಬ ಹೆಸರೂ ಇದೆ. ಆಟಕ್ಕೆ ಕವಡೆಕಾಯಿ, ಮಂಜೊಟ್ಟಿ ಕಾಯಿ, ಹೊಂಗಾರಕನ ಕಾಯಿ, ಹುಣಸೆ ಬೀಜ ಉಪಯೋಗಿಸುತ್ತಾರೆ.
ಹಿಂದಿನ ಕಾಲದಲ್ಲಿ ಕರಾವಳಿಯಲ್ಲಿ ಮನೆಯ ಪ್ರತಿಯೊಬ್ಬರೂ ಮಳೆಗಾಲದ ಸಮಯದಲ್ಲಿ ಕುಳಿತು ಈ ಆಟ ಆಡುತ್ತಿದ್ದರು. ಚೆನ್ನೆ ಮಣೆಯೊಂದರಲ್ಲಿ ತಲಾ ಏಳರಂತೆ ಎರಡು ಸಾಲಿನಲ್ಲಿ ಒಟ್ಟು 14 ಗುಳಿಗಳಿರುತ್ತವೆ. ಎಡ ಮತ್ತು ಬಲದಲ್ಲಿ ಸಂಗ್ರಹಕ್ಕಾಗಿ ಎರಡು ದೊಡ್ಡ ಗುಳಿಗಳಿರುತ್ತವೆ. ಚೆನ್ನೆಬೀಜ (ಚೆನ್ನೆಕಾಯಿ)ಗಳನ್ನು ಒಂದರ ಬಳಿಕ ಒಂದರಂತೆ ಗುಳಿಗಳಿಗೆ ಹಾಕುತ್ತಾ ಬರಬೇಕು. 4 ಕೋಣೆಗಳನ್ನು 4-4 ಕಾಯಿಗಳಿಂದ ತುಂಬಿಸುತ್ತಾರೆ.
ಒಬ್ಬ ಆಟಗಾರನು ತನಗೆ ಸಂಬಂಧಿಸಿದ ಒಂದು ಕೋಣೆಯಿಂದ ಎಲ್ಲಾ ಕಾಯಿಗಳನ್ನು ಒಂದೊಂದರಂತೆ ಅಪ್ರದಕ್ಷಿಣೆಯಾಗಿ ಮುಂದಿನ ಕೋಣೆಗಳಿಗೆ ಹಾಕುತ್ತಾ ಹೋಗುತ್ತಾನೆ. ಕೈಯಲ್ಲಿರುವ ಕಾಯಿಮುಗಿದ ನಂತರ, ಕೊನೆಗೆ ಕಾಯಿಹಾಕಿದ ಕೋಣೆಯಿಂದ ಕಾಯಿಗಳನ್ನು ಮತ್ತೆ ಹಂಚುತ್ತಾ ಹೋಗುತ್ತಾರೆ. ಕೈಯಲ್ಲಿರುವ ಕಾಯಿಗಳೆಲ್ಲಾ ಮುಗಿ ಯುತ್ತಾ, ಕೊನೆಯ ಕಾಯಿಯನ್ನು ಒಂದು ಕೋಣೆಗೆ ಹಾಕಿದ ಬಳಿಕ ಕಾಯಿಯಿಲ್ಲದ ಖಾಲಿ ಕೋಣೆ ಸಿಕ್ಕಿದರೆ, ಆಗ ಆಟಗಾರನು ಆಟ ನಿಲ್ಲಿಸಬೇಕಾಗುತ್ತದೆ.
ಅದರ ಹಿಂದಿನ ಕೋಣೆಗೆ ಹಾಕಿದ ಏಕೈಕ ಕಾಯಿ ಯನ್ನು “ಜೆಪ್ಪೆ’ ಎಂದು ಕರೆಯುತ್ತಾರೆ . ಅಲ್ಲಿಗೆ ಅವನ ಆಟ ಮುಗಿಯುತ್ತದೆ. ಆದರೆ ಅವನು ಏಕೈಕ ಕಾಯಿ ಯಿಂದ ಅಂದರೆ ಜೆಪ್ಪೆಯಿಂದ, ಆಟ ಪ್ರಾರಂಭಿಸಬ ಹುದು. ಚೆನ್ನೆಮಣೆ ಆಟವಾಡಲು ಒಟ್ಟು 56 ಕಾಯಿಗಳು ಇರಲೇಬೇಕಾಗುತ್ತದೆ. ಒಂದು ಕಾಯಿ ತಪ್ಪಿಹೋದರೂ ಆಟ ತಪ್ಪಾಗಿ ಹೋಗುತ್ತದೆ.
* ಸಾವಿತ್ರಿ ಶ್ಯಾನುಭಾಗ