ಬೆಂಗಳೂರು: ಮದ್ಯದ ಅಮಲಿನಲ್ಲಿ ಗಲಾಟೆ ಮಾಡುತ್ತಿದ್ದುದನ್ನು ಪ್ರಶ್ನಿಸಿದ ನೆರೆ ಮನೆಯವರನ್ನು ಬೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಮಾಜಿ ಸೈನಿಕ ಸೇರಿ ಇಬ್ಬರನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುಬ್ರಹ್ಮಣ್ಯಪುರದ ಬಿಡಿಎ ಲೇಔಟ್ ನಿವಾಸಿ, ಬೆಳಗಾವಿ ಮೂಲದ ಲಕ್ಷ್ಮಣ್ ಖಾಂಡೇಕರ್ (40) ಮತ್ತು ಇವರ ಸಹೋದರಿಯ 17 ವರ್ಷದ ಪುತ್ರನನ್ನು ಬಂಧಿಸಲಾಗಿದೆ.
ಕೆಲ ವರ್ಷಗಳ ಹಿಂದೆಯೇ ಸೇನೆ ತೊರೆದಿರುವ ಲಕ್ಷ್ಮಣ್, ರಾಜರಾಜೇಶ್ವರಿನಗರದ ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತ ವಾಸವಾಗಿದ್ದು, ಕ್ಯಾಬ್ ಚಾಲಕರಾಗಿದ್ದರು. ಮೂರು ತಿಂಗಳ ಹಿಂದಷ್ಟೇ ಸುಬ್ರಹ್ಮಣ್ಯಪುರದ ಬಿಡಿಎ ಲೇಔಟ್‌ಗೆ ಮನೆ ಬದಲಿಸಿದ್ದರು. ಗುರುವಾರ ರಾತ್ರಿ ಮದ್ಯ ಸೇವಿಸಿದ ಲಕ್ಷ್ಮಣ್, 12.30ರ ಸುಮಾರಿಗೆ ಮುಂದೆ ಮೊಬೈಲ್‌ನಲ್ಲಿ ಜೋರಾಗಿ ಮಾತನಾಡುತ್ತಿದ್ದರು. ಆಗ ನೆರೆ ಮನೆಯ ಮಹೇಶ್ ಎಂಬುವರು ನಿಧಾನವಾಗಿ ಮಾತನಾಡಿ, ಅಕ್ಕಪಕ್ಕದವರಿಗೆ ತೊಂದರೆಯಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ಇದರಿಂದ ಕೋಪಗೊಂಡ ಲಕ್ಷ್ಮಣ್, ಮಹೇಶ್ ಜತೆ ವಾಗ್ವಾದ ನಡೆಸಿದ್ದಾರೆ. ಇದನ್ನು ಗಮನಿಸುತ್ತಿದ್ದ ಲಕ್ಷ್ಮಣ್ ಸಹೋದರಿಯ ಪುತ್ರ, ಮಾವನ ಮೇಲೆ ಮಹೇಶ್ ಹಲ್ಲೆ ನಡೆಸುತ್ತಾನೆ ಎಂದು ಭಾವಿಸಿ ಮನೆಯಲ್ಲಿದ್ದ ಪಿಸ್ತೂಲ್ ಹೊರತಂದಿದ್ದಾನೆ. ಬಳಿಕ ಮನೆಯ 2ನೇ ಮಹಡಿಗೆ ಹೋಗಿ ಮಹೇಶ್ ಕಡೆ ಪಿಸ್ತೂಲ್ ತೋರಿಸಿ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಇದರಿಂದ ಆತಂಕಗೊಂಡ ಮಹೇಶ್ ಮನೆಗೆ ವಾಪಸ್ ಹೋಗಿದ್ದಾರೆ. ಈ ಸಂಬಂಧ ಶುಕ್ರವಾರ ಬೆಳಗ್ಗೆ ಮಹೇಶ್ ದೂರು ನೀಡಿದ್ದಾರೆ ಎಂದು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ತಿಳಿಸಿದರು.
ಪರವಾನಗಿ ನವೀಕರಣ ಮಾಡಿಲ್ಲ: ದೂರಿನ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಲಕ್ಷ್ಮಣ್ ಮತ್ತು ಇವರ ಸಹೋದರಿಯ ಪುತ್ರನನ್ನು ಬಂಧಿಸಿರುವ ಪೊಲೀಸರು, ಪಿಸ್ತೂಲ್ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪಿಸ್ತೂಲ್‌ಗೆ ಪರವಾನಗಿ ಪಡೆದಿದ್ದು, ಎರಡು ವರ್ಷಗಳಿಂದ ನವೀಕರಣ ಮಾಡಿಸಿಲ್ಲ ಎಂಬುದು ತಿಳಿದು ಬಂದಿದೆ. ಹೀಗಾಗಿ ದಾಖಲೆಯಿಲ್ಲದೆ ಪಿಸ್ತೂಲ್‌ನ್ನು ಅಕ್ರಮವಾಗಿ ಇರಿಸಿಕೊಂಡ ಆರೋಪದಡಿ ಲಕ್ಷ್ಮಣ್‌ರನ್ನು ಬಂಧಿಸಿದ್ದು, ಗಾಳಿಯಲ್ಲಿ ಗುಂಡು ಹಾರಿಸಿದ್ದ ಆರೋಪದಡಿ ಈತನ ಅಕ್ಕನ ಮಗನನ್ನು ಬಂಧಿಸಿ ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.