Advertisement
ಧನವಿನಿಯೋಗ ವಿಧೇಯಕದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರು ವಿಚಾರ ಪ್ರಸ್ತಾಪಿಸಿ, ಕಾಂಗ್ರೆಸ್, ಜೆಡಿಎಸ್‌ನ ಹಲವು ಶಾಸಕರ ಅನುದಾನದಲ್ಲಿ ಕಡಿತವಾಗಿದೆ. ಈ ರೀತಿಯ ತಾರತಮ್ಯ ಬೇಡ. ಈಗಾಗಲೇ ನೀಡಿರುವ ಅನುದಾನ ಕಡಿತ ಸರಿಯಲ್ಲ ಎಂದು ಹೇಳಿದರು. ಇದಕ್ಕೆ ದನಿಗೂಡಿಸಿದ ಎಚ್.ಡಿ.ಕುಮಾರಸ್ವಾಮಿ, ಈ ಹಿಂದೆ ಅನುಮೋದನೆಯಾಗಿದ್ದ ಹಲವು ಕಾರ್ಯಕ್ರಮಗಳನ್ನು ತಡೆಹಿಡಿದಿದ್ದು ಗೊಂದಲ ಸೃಷ್ಟಿಯಾಗಿದೆ. ಮುಖ್ಯಮಂತ್ರಿಗಳು ಇತ್ತ ಗಮನ ಹರಿಸಿದರೆ ಸಮಸ್ಯೆ ಬಗೆಹರಿಸಲಿದೆ ಎಂದು ತಿಳಿಸಿದರು.
Related Articles
Advertisement
ಶೂನ್ಯ ಅನುದಾನ: ಬಿಜೆಪಿಯ ಅರವಿಂದ ಲಿಂಬಾವಳಿ, ನನ್ನ ಕ್ಷೇತ್ರದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹವಾಗುತ್ತದೆ. ಆದರೆ ನನ್ನ ಕ್ಷೇತ್ರಕ್ಕೆ ನೀಡುವುದು ನಗರದ ಕಸ. ಬೆಳ್ಳಂದೂರು ಕೆರೆಗೆ ಕೊಳಚೆ ನೀರು. 8 ಲಕ್ಷ ಜನ ಕ್ಷೇತ್ರದಲ್ಲಿ ನೆಲೆಸಿದ್ದು, 15 ಲಕ್ಷ ಮಂದಿ ಬಂದು ಹೋಗುತ್ತಾರೆ. ಅಂತಹ ಕ್ಷೇತ್ರಕ್ಕೆ ಕಳೆದ ವರ್ಷ ನೀಡಿರುವ ಅನುದಾನ ಶೂನ್ಯ. ಹಿಂದಿನಿಂದ ತಾರತಮ್ಯವಾಗಿದೆ. ಇದೀಗ ಹೆಚ್ಚು ಅನುದಾನ ಕೇಳುತ್ತಿದ್ದೇವೆ ಎಂದು ಹೇಳಿದರು.
ಬಳಿಕ ಎಚ್.ಡಿ.ಕುಮಾರಸ್ವಾಮಿ, ನನ್ನ ಅಧಿಕಾರಾವಧಿಯಲ್ಲಿ ಸಾಧ್ಯವಾದಷ್ಟು ಅನುದಾನ ಹಂಚಿಕೆ ಮಾಡಿದ್ದೇನೆ. ಆದರೆ ನನಗೆ ಪೂರ್ಣ ಅಧಿಕಾರ ಇರಲಿಲ್ಲ ಎಂದರು. ಮತ್ತೆ ಮಾತು ಮುಂದುವರಿಸಿದ ಸಿದ್ದರಾಮಯ್ಯ, ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಯಾದ ಕಾಮಗಾರಿಗಳನ್ನು ತಡೆ ಹಿಡಿಯಲಾಗಿದೆ ಎಂಬ ದೂರುಗಳಿವೆ. ಹಾಗಾಗಿ ನಗರದ ಶಾಸಕರ ಸಭೆ ಕರೆದು ಚರ್ಚಿಸಿ ನಂತರ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವತ್ತ ಮುಖ್ಯಮಂತ್ರಿಗಳು ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಯಡಿಯೂರಪ್ಪ, ದ್ವೇಷದ ಕಾರಣಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿಲ್ಲ. 2009ರಲ್ಲಿ ನಗರದ ಕ್ಷೇತ್ರಗಳಿಗೆ ನಾನು ನೀಡಿದಷ್ಟು ಅನುದಾನವನ್ನು ಯಾವ ಮುಖ್ಯಮಂತ್ರಿಯೂ ನೀಡಿಲ್ಲ ಎಂಬುದನ್ನು ಜನರೇ ಮಾತಾಡಿಕೊಳ್ಳುತ್ತಾರೆ. ಹಣಕಾಸಿನ ಸ್ಥಿತಿ ನೋಡಿಕೊಂಡು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ರಾಮಲಿಂಗಾ ರೆಡ್ಡಿ-ಸತೀಶ್ ರೆಡ್ಡಿ ಜಟಾಪಟಿ: ಕಾಂಗ್ರೆಸ್‌ನ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಬಿಟಿಎಂ ಲೇಔಟ್ ಕ್ಷೇತ್ರಕ್ಕೆ ನೀಡಿದ್ದ ಸಾಕಷ್ಟು ಅನುದಾನ ಕಡಿತ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಬಿಜೆಪಿ ಶಾಸಕ ಸತೀಶ್‌ರೆಡ್ಡಿ, ಬಿಟಿಎಂ ಲೇಔಟ್ ಕ್ಷೇತ್ರ ಹಿಂದಿನಿಂದ ಪಾಲಿಕೆ ವ್ಯಾಪ್ತಿಯಲ್ಲಿದೆ. ಆದರೆ ನಮ್ಮ ಕ್ಷೇತ್ರಗಳು ಹೊಸದಾಗಿ ಸೇರ್ಪಡೆಯಾಗಿವೆ. ಆದರೂ ಕಳೆದ ಬಾರಿ ನನ್ನ ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಬಿಡಿಗಾಸು ಅನುದಾನ ನೀಡಿಲ್ಲ. ಆದರೆ ಆ ಕ್ಷೇತ್ರಗಳಿಗೆ ನೂರಾರು ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದರಿಂದ ಸಿಡಿಮಿಡಿಗೊಂಡ ರಾಮಲಿಂಗಾರೆಡ್ಡಿ, ಹಿಂದೆ ಅವರು ಕೊಟ್ಟಿರಲಿಲ್ಲ ಎಂದು ಈಗ ನೀವು ಅನುದಾನ ಕೊಡುವುದಿಲ್ಲವೇ. ಇದು ದ್ವೇಷದ ರಾಜಕಾರಣವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು. ಇದಕ್ಕೆ ಸುಮ್ಮನಾಗದ ಸತೀಶ್ ರೆಡ್ಡಿ, ಹಿಂದೆಲ್ಲಾ ನಮಗೆ ಸಾಕಷ್ಟು ಅನ್ಯಾಯವಾಗಿದೆ. ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಸಾಕಷ್ಟು ಹಣ ನೀಡಲಾಗಿದೆ. ಹಳೆಯ ಪ್ರದೇಶವಾದ ಬಿಟಿಎಂ ಲೇಔಟ್‌ಗೂ ಸಾಕಷ್ಟು ಹಣ ನೀಡಲಾಗಿದೆ ಎಂದು ಆರೋಪಿಸಿದರು.
ಇದಕ್ಕೆ ಕೋಪಗೊಂಡ ರಾಮಲಿಂಗಾರೆಡ್ಡಿ, ಬಿಟಿಎಂ ಲೇಔಟ್ ಕ್ಷೇತ್ರಕ್ಕೆ ಸಂಬಂಧಪಟ್ಟ ಎರಡು ಫ್ಲೈಓವರ್‌ಗಳಿಗೆ ಅನುದಾನ ಪಡೆಯಲಾಗಿತ್ತು. ಈಜಿಪುರದಲ್ಲಿ ಫ್ಲೈಓವರ್ ನಿರ್ಮಿಸಿದರೆ ನಾನೊಬ್ಬನೆ ಓಡಾಡುತ್ತೇನೆಯೇ. ಆರ್.ಅಶೋಕ್, ವಿ.ಸೋಮಣ್ಣ ಅವರು ಸೇರಿ ಮಾಡಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಯಾರೋ ನಾಲ್ಕು ಮಂದಿ ಸೇರಿ ಈ ರೀತಿ ತಾರತಮ್ಯ ಮಾಡಿದ್ದಾರೆ ಎಂದು ಕಿಡಿ ಕಾರಿದರು.