Advertisement

Chamarajanagar: ಮಲೆ ಮಹದೇಶ್ವರ ಬೆಟ್ಟದ ಲಾಡು ತಯಾರಿಕಾ ಪಾಕಶಾಲೆಯಲ್ಲಿ ಬೆಂಕಿ ಅವಘಡ

08:00 PM Dec 01, 2023 | Team Udayavani |

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಲಾಡು ತಯಾರಿಕಾ ಘಟಕದಲ್ಲಿ ಅನಿಲ ಸೋರಿಕೆಯಿಂದ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಲಾಡು ತಯಾರಿಕಾ ಸಾಮಾಗ್ರಿಗಳು ಹಾಗೂ ಕಟ್ಟಡಕ್ಕೆ ಹಾನಿಯುಂಟಾಗಿರುವ ಘಟನೆ ಜರುಗಿದೆ.

Advertisement

ಏನಿದು ಘಟನೆ?: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಲಾಡು ತಯಾರಿಕಾ ಘಟಕದಲ್ಲಿ ಮಧ್ಯಾಹ್ನ 2 ಗಂಟೆಯ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಇದನ್ನು ಗಮನಿಸಿದ ಘಟಕದ ಸಿಬ್ಬಂದಿ ಎಚ್ಚೆತ್ತು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ ಅಗ್ನಿಶಾಮಕ ಇಲಾಖೆಗೆ ದೂರವಾಣಿ ಮುಖಾಂತರ ಮಾಹಿತಿ ನೀಡಿದ್ದಾರೆ. ಈ ವೇಳೆಗೆ ಬೆಂಕಿಯ ಕೆನ್ನಾಲಿಗೆ ಕಟ್ಟಡದ ತುಂಬೆಲ್ಲಾ ಆವರಿಸುತ್ತಿತ್ತು. ತಕ್ಷಣ ಸ್ಥಳದಲ್ಲಿದ್ದ ಸಿಬ್ಬಂದಿ ಸ್ಥಳದಲ್ಲಿದ್ದ ನೀರು ಮತ್ತು ಮಣ್ಣನ್ನು ಬಳಸಿಕೊಂಡು ಬೆಂಕಿಯನ್ನು ನಂದಿಸಿ ಹತೋಟಿಗೆ ತಂದಿದ್ದರು. ಈ ವೇಳೆಗೆ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಟ್ಟಡದಲ್ಲಿ ಆವರಿಸಿದ್ದ ಹೊಗೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ಈ ವೇಳೆಗಾಗಲೇ ಲಾಡು ತಯಾರಿಕೆಗೆ ಬಳಸುತ್ತಿದ್ದ ಕೆಲ ಪದಾರ್ಥಗಳು ಬೆಂಕಿಗೆ ಆಹುತಿಯಾಗಿದ್ದು, ಪಾತ್ರೆ ಮತ್ತು ಬಾಣಲೆಗಳು ಮತ್ತು ಕಟ್ಟಡದ ಗೋಡೆಗಳು ಸುಟ್ಟು ಕರಕಲಾದಂತಾಗಿವೆ.

ಘಟನೆಗೆ ಕಾರಣವೇನು?: ಎಂದಿನಂತೆ ಶ್ರೀ ಕ್ಷೇತ್ರದ ಲಾಡು ತಯಾರಿಕ ಘಟಕದಲ್ಲಿ ಸಿಬ್ಬಂದಿ ಲಾಡು ತಯರಿಕೆಯಲ್ಲಿ ನಿರತರಾಗಿದ್ದರು. ಈ ವೇಳೆಗೆ ಘಟಕದ ಹೊರಭಾಗದಲ್ಲಿ ಅನಿಲದ ಸಿಲಿಂಡರ್‌ಗಳನ್ನು ಬದಲಾಯಿಸಲಾಗಿತ್ತು. ಈ ವೇಳೆ ಒಂದು ಸಿಲಿಂಡರನ್ನು ಸಮರ್ಪಕವಾಗಿ ಅಳವಡಿಸದೆ ಇದ್ದುದರಿಂದ ಅನಿಲ ಸೋರಿಕೆ ಉಂಟಾಗಿ ಬಳಿಕ ಬೆಂಕಿ ತಗುಲಿ ಹೊತ್ತಿ ಉರಿದಿದೆ ಎನ್ನಲಾಗಿದೆ. ಇದಲ್ಲದೆ ತಯಾರಿಕಾ ಘಟಕದ ಗೋಡೆಗಳಲ್ಲಿ ಎಣ್ಣೆ ಮತ್ತು ತುಪ್ಪದ ಜಿಡ್ಡು ಹೆಚ್ಚಿನ ಪ್ರಮಾಣದಲ್ಲಿ ಇದ್ದುದರಿಂದ ಬೆಂಕಿಯು ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next