Advertisement

ಮಹಿಳಾ ಪ್ರಾತಿನಿಧ್ಯ, ಕನ್ನಡಿಯೊಳಗಿನ ಗಂಟು

12:56 AM Mar 07, 2023 | Team Udayavani |

ಬೆಂಗಳೂರು: ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ, ಶಾಸನಸಭೆ­ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಎಂಬ “ಕನ್ನಡಿಯೊಳಗಿನ ಗಂಟು’ ಪ್ರತೀ ಚುನಾವಣೆ ಸಂದ­ರ್ಭದಲ್ಲೂ ಮುನ್ನೆಲೆಗೆ ಬರು­ತ್ತದೆ. ರಾಜ­ಕೀಯ ಪಕ್ಷಗಳಿಗೆ ಈ ವಿಷಯ “ಭಾಷಣಕ್ಕೆ ಭೂಷಣ’ ಮಾತ್ರ. ಮಹಿಳಾ ಸಶಕ್ತೀ­ಕರಣದ ಮಾತುಗಳನ್ನಾಡುವ ಎಲ್ಲ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಪ್ರಾತಿನಿಧ್ಯ ಕೊಡಬೇಕಾ­ದಾಗ ಮಾತ್ರ ಪುರುಷ ಪ್ರಧಾನ ಮನಸ್ಥಿತಿಯನ್ನೇ ತೋರುತ್ತಾ ಬಂದಿವೆ.

Advertisement

ರಾಜ್ಯದ ಈವರೆಗಿನ ಚುನಾವಣ ರಾಜಕಾರಣದ ಇತಿಹಾಸ ಗಮನಿಸಿದರೆ ಶೇ.33ರಷ್ಟು ಮೀಸಲಾತಿ ಮಾತಂತೂ ದೂರ ಉಳಿದಿದೆ. ಮಹಿಳಾ ಪ್ರಾತಿನಿಧ್ಯ ಮೂರು ಮತ್ತೊಂದು ಎಂಬಂತಿದೆ. ಮಹಿಳಾ ಸಶಕ್ತೀಕರಣದ ಬಗ್ಗೆ ದೊಡ್ಡದಾಗಿ ಪ್ರತಿಪಾದಿಸುವ ಎಲ್ಲ ಪಕ್ಷಗಳಲ್ಲಿ ತನ್ನ ಪ್ರಾತಿನಿಧ್ಯ ಪಡೆದುಕೊಳ್ಳುವಲ್ಲಿ ಮಹಿಳೆ ಇನ್ನೂ ಅಬಲೆಯಾಗಿಯೇ ಉಳಿದಿದ್ದಾಳೆ. ರಾಜಕೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್‌ ಕೊಡುವುದರಲ್ಲಿ ಜಿಪುಣತನ ತೋರಿಸುತ್ತವೆ. ಕೊಟ್ಟರೂ ಅವರನ್ನು ಗೆಲುವಿನ ದಡ ಸೇರಿಸುವ ಪ್ರಯತ್ನ ಅಷ್ಟಕ್ಕಷ್ಟೇ, ಗೆದ್ದರೆ ಅದೃಷ್ಟ. ರಾಜಕೀಯ ಪಕ್ಷಗಳ “ಗೆಲುವಿನ ಮಾನದಂಡ’ಗಳಿಂದ ಮಹಿಳೆ ಇನ್ನೂ ಗಾವುದ ದೂರ ಇದ್ದಾಳೆ ಅನ್ನುವುದು ವೇದ್ಯವಾಗುತ್ತದೆ.

ರಾಜ್ಯದಲ್ಲಿ ಈಗ ಮತ್ತೇ ವಿಧಾನಸಭೆ ಚುನಾವಣೆ ಬರುತ್ತಿದೆ. ಟಿಕೆಟ್‌ ಪ್ರಹಸನ ಎಲ್ಲಾ ಪಕ್ಷಗಳಲ್ಲೂ ಜೋರಾಗಿದೆ. ಟಿಕೆಟ್‌ ಗಿಟ್ಟಿಸಿಕೊಳ್ಳಲು ಶಕ್ತಿ ಪ್ರದರ್ಶನ, ಲಾಬಿ, ಪಕ್ಷ ನಿಷ್ಠೆ, ನಾಯಕರ ಪರ ನಿಯತ್ತು, ಹಣಬಲ, ತೋಳ್ಬಲಗಳ ಭರಾಟೆ ಎದ್ದಿದೆ. ಆದರೆ, ಈ ವೃತ್ತಾಂತದಲ್ಲಿ ಬಿಜೆಪಿ-ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೂರು ಪಕ್ಷಗಳಲ್ಲಿ ಮಹಿಳೆಯಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ಕಾಣುತ್ತಿದ್ದಾರೆ. ಉಳಿದಂತೆ ಅದೇ “ಪುರುಷ ಪ್ರಧಾನ’ ವ್ಯವಸ್ಥೆ­ಯದ್ದೇ ಮೇಲುಗೈ ಇದೆ. ಮಹಿಳೆಯರು ಪಕ್ಷಕ್ಕಾಗಿ ದುಡಿಯಬೇಕು. ಆದರೆ, ದುಡಿಮೆ ಫ‌ಲ ಮಾತ್ರ ಕೈಗೆ ಎಟುಕದ ಹುಳಿ ದ್ರಾಕ್ಷಿ ಆಗುತ್ತದೆ.

ರಾಜ್ಯದಲ್ಲಿ ಈವರೆಗೆ 15 ಸಾರ್ವತ್ರಿಕ ವಿಧಾನಸಭೆ ಚುನಾವಣೆಗಳು ನಡೆದಿವೆ. 1967ರಿಂದ 2018ರ ಚುನಾವಣೆ­ವರೆಗೆ ಒಟ್ಟು ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಅದರಲ್ಲಿ ಗೆದ್ದಿದ್ದು ಮಾತ್ರ 100 ಜನ. ಇದರಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಗೆದ್ದಿರುವುದು ಸೇರಿದಂತೆ ಕಾಂಗ್ರೆಸ್‌ನಿಂದ ಅತಿ ಹೆಚ್ಚು 70ಕ್ಕೂ ಅಧಿಕ ಮಹಿಳೆಯರು. ಜನತಾ ಪರಿವಾರ (ಜನತಾಪಾರ್ಟಿ, ಜನತಾದಳ, ಜೆಡಿಎಸ್‌, ಜೆಡಿಯು)ದಿಂದ 17, ಬಿಜೆಪಿಯಿಂದ 10 ಹಾಗೂ ಇತರ ನಾಲ್ವರು ಗೆದ್ದಿದ್ದಾರೆ. ಪ್ರಸ್ತುತ ವಿಧಾನಸಭೆಯಲ್ಲಿ ಕಾಂಗ್ರೆಸ್‌ನಿಂದ 6, ಬಿಜೆಪಿಯಿಂದ ಮೂವರು ಹಾಗೂ ಜೆಡಿಎಸ್‌ನ ಒಬ್ಬರು ಸೇರಿ ಒಟ್ಟು 10 ಮಂದಿ ಮಹಿಳಾ ಶಾಸಕಿಯರು ಇದ್ದಾರೆ.

ಮುಂಬರುವ ಚುನಾವಣೆಗೆ ಹಾಲಿ ಮಹಿಳಾ ಶಾಸಕಿಯರ ಪೈಕಿ ಬಹುತೇಕ ಎಲ್ಲರಿಗೂ ಟಿಕೆಟ್‌ ಖಾತರಿಯಾಗಿದೆ. ಉಳಿದಂತೆ, ಮೂರು ಪಕ್ಷಗಳಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಈ ಪೈಕಿ ಕೆಲವರಿಗೆ ಟಿಕೆಟ್‌ ಖಚಿತ ಎಂದೂ ಹೇಳಲಾಗುತ್ತಿದೆ. ಕೆಲವರು ಟಿಕೆಟ್‌ ಸಿಕ್ಕರೆ ಒಂದು ಕೈ ನೋಡೇ ಬಿಡೋಣ ಎಂಬ ಸ್ಥಿತಿಯಲ್ಲಿದ್ದಾರೆ. ಆದರೆ, ಆಕಾಂಕ್ಷಿಗಳಿಗೆ ಟಿಕೆಟ್‌ ದಕ್ಕಿಸಿಕೊಳ್ಳುವುದು ಅಷ್ಟು ಸುಲಭವಂತೂ ಅಲ್ಲ. ಆಯಾ ಪಕ್ಷಗಳ ರಾಜ್ಯದ ನಾಯಕರ ಮತ್ತು ಹೈಕಮಾಂಡ್‌ ದಾಕ್ಷಿಣ್ಯ ಬೇಕು. ಬಿಜೆಪಿ ಚುನಾವಣೆಗೆ ಮಹಿಳಾ ಮತದಾರರನ್ನು ಸೆಳೆಯಲು ಬಿಜೆಪಿ “ಗೃಹಿಣಿ ಶಕ್ತಿ’ ಯೋಜನೆ ಘೋಷಿಸಿದೆ. ಕಾಂಗ್ರೆಸ್‌ “ಗೃಹಲಕ್ಷ್ಮೀ’ಯ ವಾಗ್ಧಾನ ಮಾಡಿದೆ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಜೆಡಿಎಸ್‌ ಭರವಸೆ ನೀಡಿದೆ. ಆದರೆ, ಮಹಿಳೆಯರಿಗೆ ಟಿಕೆಟ್‌ ನೀಡುವ ವಿಚಾರದಲ್ಲಿ ಮೂರು ಪಕ್ಷಗಳು ಎಷ್ಟು “ಉದಾರತೆ’ ತೋರುತ್ತವೆ ಎಂದು ಕಾದು ನೋಡಬೇಕಿದೆ.

Advertisement

ಮಹಿಳಾ ಮಣಿಗಳ ಟಿಕೆಟ್‌ ಲಾಬಿ
ಬಿಜೆಪಿ
ಆಡಳಿತಾ­ರೂಢ ಬಿಜೆಪಿ ಪಕ್ಷದಲ್ಲಿ ಹಾಲಿ ಶಾಸಕಿಯ­ರಾದ ಶಶಿಕಲಾ ಜೊಲ್ಲೆ, ರೂಪಾಲಿ ನಾಯ್ಕ, ಕೆ. ಪೂರ್ಣಿಮಾ ಅವರಿಗೆ ಈ ಬಾರಿಯೂ ಟಿಕೆಟ್‌ ಖಾತರಿ ಎನ್ನಲಾಗಿದೆ. ಇದರ ಜತೆಗೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ವಿಧಾನಪರಿಷತ್‌ ಮಾಜಿ ಸದಸ್ಯೆ ತಾರಾ ಅನುರಾಧಾ, ಪಕ್ಷದ ವಕ್ತಾರೆ ಮಾಳವಿಕಾ ಅವಿನಾಶ್‌, ಶಿಲ್ಪಾ ಗಣೇಶ್‌, ಶಾರದಾ ನಾಯಕ್‌ ಆಕಾಂಕ್ಷಿಗಳಾಗಿದ್ದಾರೆ.

ಕಾಂಗ್ರೆಸ್‌
ಕಾಂಗ್ರೆಸ್‌ನಲ್ಲಿ ಹಾಲಿ ಲಕ್ಷ್ಮೀ ಹೆಬ್ಬಾಳ್ಕರ್, ಡಾ| ಅಂಜಲಿ ನಿಂಬಾಳ್ಕರ್‌, ಖನೀಜ್‌ ಫಾತೀಮಾ, ಕುಸುಮಾ ಶಿವಳ್ಳಿ , ಸೌಮ್ಯಾರೆಡ್ಡಿ, ರೂಪಕಲಾಗೆ ಟಿಕೆಟ್‌ ಆಬಾಧಿತ ಎನ್ನಲಾಗು­ತ್ತಿದೆ. ಇದರ ಜತೆಗೆ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಮಾಜಿ ಸಚಿವೆ ಮೋಟಮ್ಮ ಅಥವಾ ಅವರ ಪುತ್ರಿ ನಯನಾ, ಬಿಬಿಎಂಪಿ ಮಾಜಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಲಾವಣ್ಯಾ ಬಲ್ಲಾಳ್‌ ಅವರೂ ಪ್ರಬಲ ಆಕಾಂಕ್ಷಿಗಳಾಗಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ, ಮಾಜಿ ಸಚಿವ ಶಿವಾನಂದ ಪಾಟೀಲ್‌ ಪುತ್ರಿ ಸಂಯುಕ್ತಾ ಪಾಟೀಲ್‌ ಹೆಸರುಗಳು ಕೇಳಿ ಬರುತ್ತಿವೆ.

ಜೆಡಿಎಸ್‌
ಜೆಡಿಎಸ್‌ನ ಏಕೈಕ ಶಾಸಕಿಯಾಗಿದ್ದ ಅನಿತಾ ಕುಮಾರಸ್ವಾಮಿಯವರು ತಮ್ಮ ಮಗ ನಿಖೀಲ್‌ ಕುಮಾರಸ್ವಾಮಿಯವರಿಗೆ ರಾಮನಗರ ಕ್ಷೇತ್ರ ತ್ಯಾಗ ಮಾಡಿದ್ದಾರೆ. ಹಾಗಾಗಿ ಅವರು ಮುಂದಿನ ಬಾರಿ ಕಣದಲ್ಲಿ ಇರುವುದಿಲ್ಲ. ಜತೆಗೆ ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣ ಸ್ಪರ್ಧೆ ಕುರಿತ ವಿಚಾರ ಇನ್ನೂ ಇತ್ಯರ್ಥಗೊಂಡಿಲ್ಲ. ಉಳಿದಂತೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಮಾಜಿ ಶಾಸಕಿ ಶಾರದಾ ಪೂರ್ಯಾನಾಯಕ್‌, ಭದ್ರಾ­ವತಿಯ ಮಾಜಿ ಶಾಸಕ ದಿ| ಅಪ್ಪಾಜಿಗೌಡ ಅವರ ಪತ್ನಿ ಶಾರದಾ ಅಪ್ಪಾಜಿಗೌಡ, ದೇವದುರ್ಗ ಕ್ಷೇತ್ರದಿಂದ ಕರೆಮ್ಮ ನಾಯಕ್‌ಗೆ ಮೊದಲ ಹಂತದಲ್ಲಿ ಟಿಕೆಟ್‌ ಘೋಷಿಸಲಾಗಿದೆ. ಇದೇ ವೇಳೆ ಸಿಂದಗಿ ಕ್ಷೇತ್ರದಿಂದ ಟಿಕೆಟ್‌ ಘೋಷಿಸಿದ್ದ ಅಭ್ಯರ್ಥಿ ಅಕಾಲಿಕ ನಿಧನ ಹೊಂದಿರುವ ಹಿನ್ನೆಲೆ­ಯಲ್ಲಿ ಅವರ ಪತ್ನಿಗೆ ಟಿಕೆಟ್‌ ಖಚಿತಪಡಿಸಲಾಗಿದೆ. ಎರಡನೇ ಹಂತದಲ್ಲಿ ಕೆಲವು ಹೆಸರುಗಳು ಕೇಳಿ ಬರುತ್ತಿವೆ.

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next