Advertisement
ಚೊಕ್ಕಾಡಿಯವರೇ ಒಂದು ಒಲವಿನ ಕವಿತೆ ಮತ್ತು ಪ್ರೀತಿ.
Related Articles
Advertisement
ಜತೆಯಿರದ ಬಾಳ ಜಾತ್ರೆಯಲಿ
ಸೊಗಸೇನಿದೆ
ಅರಳಿ ಅನೇಕ ಹೂಗಳು
ಬರಿದೆ ಕಾದಿವೆ
ಹಿಮದ ಕಠೋರ ಕೈಯಲಿ
ನರಳಿ ಕೆಡೆದಿವೆ
ಜತೆಯ ಕಾಣದೀಗ ಹಕ್ಕಿ
ಅನಾಥವಾಗಿದೆ
ಋತು ಚೈತ್ರ ಜಾರಿ ಹೋಗಿದೆ
ಗ್ರೀಷ್ಮ ಬರುತಿದೆ
ದುಗುಡ ನಿಧಾನ ಬೆಳೆಯುತ
ಬಾಳ ಮುಸುಕಿದೆ
ಉಳಿದೇನಿತಾಂತ ಕಾಯುತ
ಕನಸು ಮಾಸಿದೆ
– ಸುಬ್ರಾಯ ಚೊಕ್ಕಾಡಿ.
ಈ ಕವನ ಆಧರಿಸಿಕೊಂಡು ಇಲ್ಲೊಂದು ಕಥೆ ನನ್ನೊಳಗೆ ಮೂಡಿದೆ.
ಕನಸು ಮಾಸಿದೆ
ಅವಳ ಪತ್ರ ಇವತ್ತೇ ಯಾಕೆ ಪುನಃ ನನ್ನ ಕೈಗೆ ಸಿಕ್ಕಿತೋ ಗೊತ್ತಿಲ್ಲ! ಏಳು ವರುಷದ ಹಿಂದೆ ಇದೇ ದಿನ ಅವಳು ಕಾಣೆಯಾಗಿದ್ದು. ಅಲ್ಲ, ಓಡಿ ಹೋಗಿದ್ದು. ಅವಳಿಂದ ‘ನನ್ನನ್ನು ಹುಡುಕ ಬೇಡಿ, ನಾನು ಸುಖವಾಗಿದ್ದೇನೆ’ ಎಂಬ ಪತ್ರ ಬಂದ ಮೇಲೆ ನಮ್ಮ ಮನೆಯಲ್ಲಿ ಯಾರೂ ಅವಳನ್ನು ಹುಡುಕುವ ಗೋಜಿಗೆ ಹೋಗಲಿಲ್ಲ; ನಾನೂ.
***
ನಾನು ಊರು ಬಿಟ್ಟಮೇಲೆ ಅವಳು ಈ ಪತ್ರವನ್ನು ಬರೆದಿದ್ದಳು. ಇವತ್ತು ಮತ್ತೆ ಓದಿಕೊಂಡೆ.
“ನೀ ನನ್ನ ಪ್ರೀತಿ ಎನ್ನುವಾಗ ಎದೆ ನೋಯುತ್ತದೆ. ನೀ ನನ್ನ ಸೋಲು ಅಂತಲೇ ಈ ಪತ್ರ ಶುರುಮಾಡುವೆ. ನೀನು ಮನೆ ಬಿಟ್ಟಿದ್ದು ನಿನಗೆ ನಾನು ಇಷ್ಟವಿಲ್ಲದ್ದಕ್ಕೆ ಎಂಬುದು ಗೊತ್ತು. ಆದರೆ ನಿನ್ನಜ್ಜ ಮಾಡಿದ ಪುಣ್ಯದ ಕೆಲಸದಲ್ಲಿ ಹುಟ್ಟಿಕೊಂಡ ಪಾಪಿ ನಾನು. ನಿನ್ನಪ್ಪ-ಚಿಕ್ಕಪ್ಪಂದಿರು ಅನಾಥೆಯಾದ ನನ್ನನ್ನು ಮುಂದೆ ಸರಿಯಾಗಿ ನೋಡಿಕೊಳ್ಳದೇ ಹೋದರೆ ಎಂಬ ಖಾಳಜಿಯಿಂದ ನಿನ್ನ ಜೊತೆ ನನ್ನ ಮದುವೆಯ ಶಾಸ್ತ್ರವನ್ನೂ ಮಾಡಿಸಿದ್ದರಂತೆ ನಿನ್ನಜ್ಜ. ಇದನ್ನು ಪ್ರಾಯಕ್ಕೆ ಬಂದ ನಮಗೆ ನಿನ್ನ ಅಮ್ಮ-ಅಪ್ಪ ತಿಳಿಸಿದ ದಿನದಿಂದ ನೀನು ನನ್ನಿಂದ ದೂರಾದೆ. ಮುಖಕ್ಕೆ ಮುಖ ಕೊಟ್ಟು ನೋಡಲಿಲ್ಲ; ಮಾತಾಡಲಿಲ್ಲ. ನನ್ನನ್ನು ತಪ್ಪಿಸಿಕೊಂಡೇ ಇರುತ್ತಿದ್ದ ನೀನು, ಇದ್ದಕ್ಕಿದ್ದಂತೆ ಊರುಬಿಟ್ಟು ಹೋಗಿಬಿಟ್ಟೆ.
ಇದಕ್ಕೆ ನೀನು ಕೊಟ್ಟ ಕಾರಣವೂ ಗೊತ್ತು. ನಾನು ಇಷ್ಟವಿಲ್ಲವಂತೇನೂ ಅಲ್ಲವಂತೆ, ನಿನಗೆ ನನ್ನ ಮೇಲೆ ಹೆಂಡತಿಯೆಂಬ ಭಾವನೆ ಹುಟ್ಟುವುದೇ ಇಲ್ಲವಂತೆ. ಹಾಗಾಗಿ ಜೊತೆಗಿರಲೂ ಆಗುವುದೇ ಇಲ್ಲವಂತೆ. ಆದರೆ ಏನು ಮಾಡಲಿ ಹೇಳು? ನನಗೆ ನಿನ್ನ ಮೇಲೆ ಪ್ರೀತಿ ಸಂಭವಿಸಿದ್ದೇ ನಾವು ಗಂಡ-ಹೆಂಡತಿ ಎಂಬುದು ತಿಳಿದಮೇಲೆ. ಮೊನ್ನೆಮೊನ್ನೆಯ ತನಕ ಮನೆಯ ಅಂಗಳದಲ್ಲಿ ಆಡಿಕೊಂಡಿದ್ದಾಗ ಇದ್ದ ಪ್ರೀತಿಯೂ ನಿನ್ನಲ್ಲಿ ಸತ್ತು ಹೋಯಿತಾ? ನನಗೆ ಚಿಕ್ಕಂದಿನಿಂದಲೂ ಎಲ್ಲರಿಗಿಂತಲೂ ನೀನೇ ಇಷ್ಟ ಎಂಬುದು ನಿನಗೆ ಗೊತ್ತಿಲ್ಲದ ವಿಷಯವೇನಲ್ಲ. ಆಗಾಗ ನಿನ್ನ ಹಳೆಯ ಅಂಗಿಯನ್ನು ಹಾಕಿಕೊಂಡು ಆನಂದ ಪಡುತ್ತಿದ್ದೆ. ನಿನಗಾಗಿ ಹುಣಸೇಹಣ್ಣು ಕದ್ದು, ಸೂಜಿಮೆಣಸು ತಂದು, ಉಪ್ಪು ಹಾಕಿ ಉಂಡೆ ಮಾಡಿಕೊಡುತ್ತಿದ್ದೆ. ನಾವಿಬ್ಬರೂ ಅಡಗಿ ಕುಳಿತು ಅದನ್ನು ಚಪ್ಪರಿಸುತ್ತಿದ್ದ ಪ್ರೀತಿ ಈಗ ಎಲ್ಲಿಗೆ ಹೋಯಿತೋ? ಬರಿದೆ ಕಾಯಲು ನಾನು ಅರಳಿದ ಹೂವಾದೆ; ಸಾಯದೆ.
ನನಗೆ ಗೊತ್ತು, ನಿನಗೆ ದ್ವೇಷಿಸುವುದಕ್ಕಾಗಲೀ ದೂರವಿಡುವುದಕ್ಕಾಗಲೀ ಬರುವುದೇ ಇಲ್ಲ. ಆದರೆ ನನ್ನ ವಿಚಾರದಲ್ಲಿ ಇವು ಸುಳ್ಳಾಗಿಬಿಟ್ಟಿತ್ತು! ನಿನ್ನ ಅಕ್ಕನ ಮದುವೆಯಲ್ಲಿ ಕಂಡ ಬೆಡಗಿಯ ಮೇಲೆ ಒಲವು ಹುಟ್ಟಿದಂತಿತ್ತು. ಅದಕ್ಕೇ ನಾನು ಬೇಡವಾದೆ. ನನಗೆ ಒಂದು ಅವಕಾಶ ಕೊಟ್ಟಿದ್ದರೆ ನಾನು ಖಂಡಿತಾ ನಿನ್ನ ಗೆಲ್ಲುತ್ತಿದ್ದೆ. ಜಂಟಿಯಾಗುತ್ತಿದ್ದೆ. ನೀನಿಲ್ಲದ ಬಾಳಲ್ಲಿ ಸೊಗಸಿಲ್ಲ. ಕನಸುಗಳನ್ನು ಕಾಣಲು ನೆಪವೂ ಇಲ್ಲ.
ನೋವಿಗೆ ಸಾವಿಲ್ಲ. ನೀನಿಲ್ಲದ ಮನೆಯಲ್ಲಿ ನಾನೂ ಇರಲಾರೆ. ಬದುಕಲೇ ಬೇಕೆಂಬ ಹಂಬಲವಿಲ್ಲ. ಬೇಕೆನಿಸಿದರೆ ಹೇಗಾದರೂ ಎಲ್ಲಿಯಾದರೂ ಬದುಕಿಯೇನು. ಅಥವಾ ಸತ್ತೇನು. ನಾನು ಅನಾಥೆ; ನೀನಿದ್ದೂ.
ಆದರೆ, ಇದೇ ಪ್ರೀತಿಯನ್ನು ಹೊತ್ತುಕೊಂಡು ನಿನ್ನನ್ನು ಒಂದಲ್ಲ ಒಂದು ದಿನ ಹುಡುಕಿಕೊಂಡು ಬಂದು ನಿನ್ನ ಮನೆಯ ಬಾಗಿಲು ತಟ್ಟುವೆ. ಅಲ್ಲಿಯತನಕ ನಾನು ಉಳಿಯುವೆ.
ಮತ್ತು
ಬಂದೇ ಬರುವೆ.
ಮಾಸಿದ ಕನಸ ಹೊತ್ತವಳು.
***
ಪತ್ರ ಓದಿ ಮುಗಿಯುತ್ತಿದ್ದಂತೆ ಕಾಲಿಂಗ ಬೆಲ್ ಸದ್ದು ಮಾಡಿತು. ಆರು ವರುಷದ ನನ್ನ ಮಗ ಬಾಗಿಲು ತೆರೆದ. ನಾನು ಹೋಗಿ ನೋಡುವ ಮೊದಲೇ ಅವಳು ಹೋಗಿಯಾಗಿತ್ತು!
*ವಿಷ್ಣು ಭಟ್ ಹೊಸ್ಮನೆ