Advertisement

Siddapura ಮಗನ ಹುಟ್ಟುಹಬ್ಬಕ್ಕೆ ಊರಿಗೆ ಬಂದ ತಂದೆ ಸಿಡಿಲಾಘಾತಕ್ಕೆ ಬಲಿ!

12:11 AM May 15, 2024 | Team Udayavani |

ಸಿದ್ದಾಪುರ: ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸಿದ್ದಾಪುರ ಗ್ರಾಮದ ಸ್ವಾಮಿಹಾಡಿಯ ಸುರೇಶ್‌ ಶೆಟ್ಟಿ (38) ಮೃತಪಟ್ಟವರು.

Advertisement

ಮಂಗಳವಾರ ಸಂಜೆ ಸಿದ್ದಾಪುರದಲ್ಲಿ ಸಿಡಿಲು ಸಹಿತ ಮಳೆಯಾಗಿದ್ದು, ಈ ಸಂದರ್ಭ ಸುರೇಶ್‌ ಅವರು ತನ್ನ ಕಿರಿಯ ಮಗನೊಂದಿಗೆ ಮನೆ ಸಮೀಪವೇ ಇದ್ದ ಮಾವಿನ ಮರದಿಂದ ಬಿದ್ದ ಮಾವಿನಹಣ್ಣು ತರಲು ತೆರಳಿದ್ದರು. ಆಗ ಭಾರೀ ಶಬ್ದದೊಂದಿಗೆ ಸಿಡಿಲು ಎರಗಿದ್ದು, ಅದು ಸುರೇಶ್‌ ಅವರ ಎದೆಯ ಭಾಗಕ್ಕೆ ಬಡಿದಿದೆ. ತಂದೆ ಬಿದ್ದಿರುವುದನ್ನು ಗಮನಿಸಿ ಮಗು ಮನೆಗೆ ಓಡಿ ಹೋಗಿ ಮನೆಯವರಿಗೆ ವಿಷಯ ತಿಳಿಸಿತು.

ಅಸ್ವಸ್ಥಗೊಂಡು ಬಿದ್ದಿದ್ದ ಅವರನ್ನು ಬದುಕಿಸುವ ಪ್ರಯತ್ನ ಮಾಡಲಾಗಿತ್ತಾದರೂ ಇದೇ ವೇಳೆ ಸಿದ್ಧಾಪುರ ಭಾಗದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಎದುರಾಗಿದ್ದರಿಂದ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಆಸ್ಪತ್ರೆಗೆ ಕರೆದೊಯ್ಯಲು ವಿಳಂಬವಾಗಿದ್ದರಿಂದ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

ನಾಳೆ ಮಗುವಿನ ಜನ್ಮದಿನ
ಸುರೇಶ್‌ ಅವರ ಎರಡನೇ ಪುತ್ರನ ನಾಲ್ಕನೇ ವರ್ಷದ ಹುಟ್ಟುಹಬ್ಬ ಮೇ 16ರಂದು ನಡೆಯಲಿಕ್ಕಿತ್ತು. ಅದಕ್ಕಾಗಿಯೇ ಅವರು ಬೆಂಗಳೂರಿನಿಂದ ಬಂದು ಮನೆಯವರ ಜತೆ ಸಿದ್ಧತೆಯನ್ನೂ ನಡೆಸಿದ್ದರು. ಈ ನಡುವೆ ಕುಟುಂಬವನ್ನೇ ಸಿಡಿಲು ಕಣ್ಣೀರಿನಲ್ಲಿ ಮುಳುಗಿಸಿದೆ.

ಹೊಟೇಲ್‌ ಉದ್ಯೋಗಿ: ಹೆನ್ನಾಬೈಲುವಿನ ಬಸವ ಶೆಟ್ಟಿ ಅವರ ಪುತ್ರರಾದ ಸುರೇಶ್‌ ಬೆಂಗಳೂರಿನಲ್ಲಿ ಹೊಟೇಲ್‌ ಉದ್ಯೋಗಿಯಾಗಿದ್ದು, ಮಂಗಳವಾರ ಬೆಳಗ್ಗೆಯಷ್ಟೇ ಊರಿಗೆ ಬಂದಿದ್ದು, ಸಿದ್ದಾಪುರ ಸ್ವಾಮಿಹಾಡಿಯಲ್ಲಿರುವ ಪತ್ನಿಯ ತವರು ಮನೆಯಲ್ಲಿ ಉಳಿದುಕೊಂಡಿದ್ದರು.

Advertisement

ಸಿಡಿಲಾಘಾತದ ವೇಳೆ ಸುರೇಶ್‌ ಅವರ ಮಡದಿ, ಅತ್ತೆ, ನಾದಿನಿ ಹಾಗೂ ಓರ್ವ ಮಗ ಮನೆಯ ಒಳಗಿದ್ದುದರಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿದ್ದಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಯಿತು.

ಮೃತರು ಪತ್ನಿ ವಿನೋದಾ, ಪುತ್ರರಾದ 8 ವರ್ಷದ ಸುಮೋದ್‌ ಹಾಗೂ 4 ವರ್ಷದ ಸವೊìದ ಅವರನ್ನು ಅಗಲಿದ್ದಾರೆ. ಕುಂದಾಪುರ ತಹಶೀಲ್ದಾರ್‌ ಶೋಭಾಲಕ್ಷ್ಮೀ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿಡಿಲಾಘಾತಕ್ಕೆ ಸಿದ್ದಾಪುರ ಪರಿಸರದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಹಾಗೂ ವಿದ್ಯುತ್‌ ಸಮಸ್ಯೆ ಎದುರಾಗಿದ್ದು ರಾತ್ರಿಯ ತನಕವೂ ದುರಸ್ತಿಯಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next