ಬಸವಕಲ್ಯಾಣ: ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿ ಬಿಲ್ ಪಾವತಿಗೆ 5 ಸಾವಿರ ರೂ. ಲಂಚ ಕೇಳಿದ್ದರಿಂದ ನೊಂದ ರೈತನೊಬ್ಬ ತನ್ನ ಜೋಡೆತ್ತುಗಳನ್ನು ತೆಗೆದುಕೊಂಡು ಬಿಲ್ ಮಂಜೂರು ಮಾಡುವಂತೆ ಮನವಿ ಮಾಡಿದ ಘಟನೆ ತಾ.ಪಂ.ನಲ್ಲಿ ನಡೆದಿದೆ.
ಬಗದೂರಿ ಗ್ರಾಮದ ಪ್ರಶಾಂತ ಬಿರಾದಾರ್ ತನ್ನ ಜೋಡೆತ್ತುಗಳ ಸಹಿತ ತಾ.ಪಂ.ಗೆ ಆಗಮಿಸಿ, “ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ವರ್ಷ ನನ್ನ ಜಮೀನಿನಲ್ಲಿರುವ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಈ ಕಾಮಗಾರಿಗೆ 1 ಲಕ್ಷ ರೂ. ಅನುದಾನ ಮಂಜೂರಾಗಿತ್ತು. ಕಾಮಗಾರಿಗೆ ಸಂಬಂಧಿಸಿ ನನಗೆ 55 ಸಾವಿರ ರೂ. ಪಾವತಿಸಲಾಗಿದೆ. ಉಳಿದ 45 ಸಾವಿರ ರೂ. ಪಾವತಿಯಾಗಿಲ್ಲ. ಅದನ್ನು ನೀಡಲು ಜೆಇ ಶೇ.5 (5 ಸಾವಿರ ರೂ.) ಲಂಚ ಕೇಳಿದ್ದಾರೆ. ಆದರೆ ಲಂಚ ನೀಡಲು ಹಣ ಇಲ್ಲದ ಕಾರಣ ಎತ್ತುಗಳನ್ನು ತೆಗೆದುಕೊಂಡು ಬಿಲ್ ಮಂಜೂರು ಮಾಡಿ’ ಎಂದು ಕೇಳಿಕೊಂಡಿದ್ದಾನೆ.
ಸುದ್ದಿ ತಿಳಿದ ತಾ.ಪಂ. ಇ.ಒ. ಸಂತೋಷ ಚೌವ್ಹಾಣ್ ಸ್ಥಳಕ್ಕೆ ಭೇಟಿ ನೀಡಿ ಬಿಲ್ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದು, ಬಳಿಕ ರೈತನು ಮನೆಗೆ ಮರಳಿದ್ದಾನೆ.