ಮಾಗಡಿ: ಬಡ ರೈತರ ಬೆಲೆಯಾಗಿದ್ದ ರಾಗಿ ಇಂದು ಉತ್ತಮ ಆದಾಯ ನೀಡುವ ಬೆಳೆಯಾಗಿದ್ದು , ರೈತರು ದೊಡ್ಡ ಮಟ್ಟದಲ್ಲಿ ರಾಗಿ ಬೆಳೆ ಬೆಳೆಯುವ ಮೂಲಕ ತಮ್ಮ ಆದಾಯ ವೃದ್ಧಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ತಾಲೂಕಿನ ತಗ್ಗಿಕುಪ್ಪೆಗ್ರಾಮದ ಮಂಡಿ ರಂಗೇಗೌಡ ಎಂಬುವವರು ಸುಮಾರು 40 ಎಕರೆ ಬಂಪರ್ ರಾಗಿ ಬೆಳದು ರಾಗಿ ಫಸಲಿನಿಂದ ಲಾಭಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಕಲ್ಲಾ ಬೆಟ್ಟದ ತಪ್ಪಲಿನಲ್ಲಿ ಸುಮಾರು 40 ಎಕರೆ ಜಮೀನಿನಲ್ಲಿ 700 ಕ್ಕೂ ಅಧಿಕ ಮೂಟೆ ರಾಗಿಯನ್ನು ತಗ್ಗಿಕುಪ್ಪೆ ಗ್ರಾಮದ ಮಂಡಿ ರಂಗೇಗೌಡರು ರಾಗಿ ಜಮೀನಿನಲ್ಲಿ ಬೆಳೆದಿದ್ದು, ಜಿಲ್ಲೆಯಲ್ಲಿಯೇ ಅತೀ ಹೆಚ್ಚು ರಾಗಿ ಬೆಳೆ ಪ್ರದೇಶ ಎನ್ನಬಹುದಾಗಿದ್ದು, ಈ ಜಮೀನಿನಲ್ಲಿ ಈಗಾಗಲೇ ರಾಗಿ ಕಟಾವ್ ಮಾಡಿ ಒಕ್ಕಣೆಗಾಗಿ ಎರಡು ದೊಡ್ಡ ಮೆದೆಗಳನ್ನು ಹಾಕಲಾಗಿದ್ದು, ಒಂದು ಮೆದೆ ಸುಮಾರು 126 ಅಡಿ (25 ಮಾರು) ಹಾಗೂ 2 ನೇ ಮೆದೆ 109 ಅಡಿ (20 ಮಾರು) ಉದ್ದವಿದ್ದು, ಸುಮಾರು 700 ಮೂಟೆಗೂ ಅಧಿಕ ರಾಗಿಯಾಗುವ ನಿರೀಕ್ಷೆ ಇದೆ.
ರಾಗಿ ಬೆಳೆಯಿಂದ ಲಕ್ಷಾಂತರ ಲಾಭ: ಮಾಗಡಿ ಭಾಗದಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದು, ರಂಗೇಗೌಡ ಅವರು ಒಟ್ಟು 80 ಎಕರೆ ಜಮೀನಿನಲ್ಲಿ 40 ಎಕರೆ ತೆಂಗು, ಅಡಿಕೆ ಬೆಳೆದಿದ್ದು, ಇನ್ನುಳಿದ 40 ಎಕರೆಯಲ್ಲಿ, ಎಂಆರ್.6 ಮತ್ತು ಎಂ.ಆರ್.2 ತಳಿಯ ರಾಗಿಯನ್ನು ಬೆಳೆದಿದ್ದಾರೆ. 40 ಎಕರೆ ಪ್ರದೇಶದಲ್ಲಿ ರಾಗಿ ಕೃಷಿಗೆ ಈ ವರೆಗೆ ಸುಮಾರು 8 ಲಕ್ಷ ರೂ.ಖರ್ಚು ಮಾಡಿದ್ದು, ಈಗ ಒಂದು ಮೂಟೆ ರಾಗಿಗೆ (100 ಕೆ.ಜಿ.) 2300 ರೂ. ಬೆಲೆಯಿದ್ದು, 15 ಲಕ್ಷ ರೂ.ಗೆ ಮಾರಾಟವಾಗಬಹುದು ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ 8 ಲಕ್ಷ ರೂ. ಮೌಲ್ಯದ ಹುಲ್ಲು ದೊರಕಲಿದ್ದು, ಹಸುಗಳಿಗೆ ಹುಲ್ಲನ್ನು ಖರೀದಿಸುವುದು ತಪ್ಪಿಸಬಹುದು ಎನ್ನಲಾಗಿದೆ.
ಕಟಾವು ಮಾಡಲು ಆಂಧ್ರದ ಕೂಲಿಗಾರರು: ಕೃಷಿ ಚಟುವಟಿಕೆಗಳಿಗೆ ಕೂಲಿಕಾರರ ಸಮಸ್ಯೆ ಇರುವುದರಿಂದ ನೆರೆಯ ಅಂಧ್ರಪ್ರದೇಶದಿಂದ ಸುಮಾರು 70 ಕ್ಕೂ ಅಧಿಕ ಕೂಲಿ ಕಾರ್ಮಿಕರನ್ನು ಕರೆಸಲಾಗಿದ್ದು, 40 ಎಕರೆ ರಾಗಿ ಬೆಳೆ ಕಟಾವು ಮಾಡಿ ಮೆದೆ ಹಾಕಲು 3 ಲಕ್ಷಕ್ಕೂ ಅಧಿಕ ಖರ್ಚಾಗಿದೆ. ಕೂಲಿ ಕಾರ್ಮಿಕರ ಸಮಸ್ಯೆಯಿಂದ ಯಂತ್ರಗಳನ್ನು ಬಳಸಿ ಕಣ ಮಾಡಲಾಗುತ್ತದೆ.
ರಾಗಿ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದರೆ ಹೆಚ್ಚು ಅದಾಯ ಬರುವುದಿಲ್ಲ ಎಂಬ ಕಾರಣದಿಂದ ಜಿಲ್ಲೆಯ ರೈತರು ವಾಣಿಜ್ಯ ಬೆಳೆಗಳನ್ನು ಬೆಳೆಯುವ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ರಾಗಿ ಬೆಳೆಯುವವರ
ಪ್ರಮಾಣ ಇಳಿಮುಖವಾಗುತ್ತಿದೆ. ಇಂತಹ ಸಮದಲ್ಲಿಯೂ ಸಹ ರಂಗೇಗೌಡರು 40 ಎಕರೆ ಪ್ರದೇಶದಲ್ಲಿ ರಾಗಿ ಬೆಳೆ ಬೆಳದಿರುವುದು ಪ್ರಶಂಸನೀಯ. ರಂಗೇಗೌಡರ ಜಮೀನಿನಲ್ಲಿ ಹಾಕಿರುವ ಎರಡು ಮೆದೆಗಳು ರೈತರ ಆಕರ್ಷಣೆಯ ಕೇಂದ್ರವಾಗಿ ಮಾರ್ಪಟ್ಟಿದೆ.
●ಅಶೋಕ್, ಸಹಾಯಕ ಕೃಷಿ ನಿರ್ದೇಶಕ.
ರಾಗಿ ಬೆಳೆ ಬೆಳೆಯುವುದೇ ಕಡಿಮೆಯಾಗಿದೆ, ಕೂಲಿ ಆಳುಗಳ ಸಮಸ್ಯೆ ಹೆಚ್ಚಾಗಿದ್ದು, ಸರ್ಕಾರ ರಾಗಿಗೆ ಪ್ರೋತ್ಸಾಹ ಧನ ನೀಡುವುದರ ಜೊತೆಗೆ ಈಗಿನಿಂದಲೇ ರಾಗಿ ಖರೀದಿಸುವ ಕೇಂದ್ರ ಆರಂಭಿಸಿ ರೈತರಿಗೆ ಉತ್ತಮ ಬೆಲೆ ಸಿಗುವಂತೆ
ಕ್ರಮಕೈಗೊಳ್ಳಬೇಕು.
●ಲೋಕೇಶ್, ತಾಲೂಕು ರೈತ ಸಂಘ ಅಧ್ಯಕ
●ತಿರುಮಲೆ ಶ್ರೀನಿವಾಸ್