Advertisement
“ಸುದಿನ’ ವಾರ್ಡ್ ಸುತ್ತಾಟದಲ್ಲಿ ಕಂಡಾಗ ಕೋಡಿ ಮಧ್ಯ ವಾರ್ಡ್‌ನಲ್ಲಿ ಜನರಿಗೆ ಬಹುವಾಗಿ ಕಾಡುತ್ತಿರುವುದು ಉಪ್ಪುನೀರಿನ ಸಮಸ್ಯೆ.
ಕೆಲವು ಮನೆಗಳಲ್ಲಿ ಎರಡೆರಡು ಬಾವಿಗಳಿದ್ದರೂ ಕುಡಿಯಲು ನೀರಿಲ್ಲದ ಸ್ಥಿತಿ ಇದೆ. ಅಮಾವಾಸ್ಯೆ ಹುಣ್ಣಮೆ ಸಂದರ್ಭದ ಸಮುದ್ರದ ಉಬ್ಬರ ಇಳಿತದ ಸನ್ನಿವೇಶದಲ್ಲಿ ಇಲ್ಲಿ ಉಪ್ಪುನೀರಿನ ಹಿನ್ನೀರು ಹೆಚ್ಚಾಗಿರುತ್ತದೆ. ಆಗ ಸಮುದ್ರದಲ್ಲಿ, ತೋಡಿನಲ್ಲಿ ಸಾಗುವ ಕಸಕಡ್ಡಿ ಕೂಡಾ ಮನೆಯಂಗಳಕ್ಕೆ ಬಂದು ರಾಶಿಯಾಗುತ್ತದೆ. ಕೆಲವರ ಮನೆಯೊಳಗೆ ನುಗ್ಗುವುದೂ ಇದೆ. ಉಬ್ಬರವಿಳಿತದ ಸಂದರ್ಭ ಬಾವಿಗೆ ಹಾಕಿದ ಪಂಪ್ ಚಾಲೂ ಮಾಡಿದರೆ ಉಪ್ಪು ನೀರು ಬಾವಿ ಮಣ್ಣು ಹೀರಿಕೊಂಡು ಬಾವಿ ನೀರು ಸೇರಿಕೊಳ್ಳುತ್ತದೆ. ಎಪ್ರಿಲ್ ನಂತರವಂತೂ ಕುಡಿಯಲು ಬಾವಿ ನೀರೂ ಇಲ್ಲ, ಬೇರೆ ನೀರೂ ಇಲ್ಲ ಎಂಬ ಸ್ಥಿತಿ. ಪಕ್ಕದಲ್ಲಿ ರಸ್ತೆಯ ಇನ್ನೊಂದು ಮಗ್ಗುಲಲ್ಲಿ ಇರುವ ಬಾವಿಯ ಸಿಹಿನೀರೇ ಸುತ್ತಲಿನ ಹತ್ತಾರು ಮನೆಗಳಿಗೆ ಆಶ್ರಯ. ಕೃಷಿ ಇಲ್ಲ
ಭತ್ತದ ಬೆಳೆ ಮಾಡುತ್ತಿದ್ದ ಗದ್ದೆಯೀಗ ಪಾಳು ಬಿದ್ದಿದೆ. ಉದ್ದಿನ ಬೆಳೆಯ ಸದ್ದೇ ಇಲ್ಲ ಎಂಬಂತಾಗಿದೆ. ಸುತ್ತ ನೆಟ್ಟ ತೆಂಗಿನ ಮರಗಳು ಗರಿ ಕಳಚಿಕೊಂಡು ಬೋಳಾಗಿ ನಿಂತು ದುರಂತವೊಂದನ್ನು ಸಾರುತ್ತಿವೆ. ಮಾವಿನ ಮರದಂತಹ ಫಲಬರುವ ಹಣ್ಣಿನ ಮರಗಳೂ ಹಸಿರು ಎಲೆಯ ಬದಲಾಗಿ ಒಣಗಿದ ಕರಟಿದ ಎಲೆಯನ್ನು ಇಟ್ಟುಕೊಂಡು ಉಪ್ಪು ನೀರಿನ ಅವಸ್ಥೆಯನ್ನು ನೋಟಕರಿಗೆ ಸಾರುತ್ತಿದೆ. ಮನೆ ಸುತ್ತ ತೆಂಗಿನ ಮರಗಳಿದ್ದರೂ ಪದಾರ್ಥಕ್ಕೆ ತೆಂಗಿನಕಾಯಿ ಪೇಟೆಯಿಂದ ದುಡ್ಡು ತರುವ ಸ್ಥಿತಿ. ಮನೆ ಸಮೀಪದಲ್ಲೇ ಭತ್ತದ ಗದ್ದೆಯಿದ್ದರೂ ಊಟಕ್ಕೆ ಅಕ್ಕಿ ಕ್ರಯಕ್ಕೆ ತರಬೇಕಾದ ಅನಿವಾರ್ಯ. ಸುತ್ತಮುತ್ತ ನೀರೇ ಇದ್ದರೂ ಕುಡಿಯಲೂ ಆಗದೇ ಉಪಯೋಗಕ್ಕೂ ದೊರೆಯದ ವಿಚಿತ್ರ ಸ್ಥಿತಿ. ಎಲ್ಲಿವರೆಗೆ ಅಂದರೆ ಎಪ್ರಿಲ್ ನಂತರ ಈ ನೀರಿನಲ್ಲಿ ಬಟ್ಟೆ ಒಗೆಯಲೂ ಆಗದು.
Related Articles
ಚಕ್ರಮ್ಮ ದೇವಸ್ಥಾನದಿಂದ ಸರಿಸುಮಾರು ಗುತ್ತೇದಾರ್ ದೊಡ್ಮನೆವರೆಗೆ ಇಂತಹ ಸ್ಥಿತಿ ಇದೆ. ಹಿನ್ನೀರು ಬರದಂತೆ ತಡೆಗೋಡೆ ಕಟ್ಟಿದರೆ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರ ಕಾಣಲಿದೆ. ಚರ್ಚ್‌ರಸ್ತೆ ಮೂಲಕ ಕೋಡಿಗೆ ಸಂಪರ್ಕ ಕಲ್ಪಿಸುವ ಸೇತುವೆ ಆದ ಬಳಿಕ ಅಭಿವೃದ್ಧಿಯ ಪರ್ವ ಆಯಿತು ಎಂದೇ ಭಾವಿಸಲಾಯಿತು. ಪಂಚಗಂಗಾವಳಿಗೆ ಅಲ್ಲಲ್ಲಿ ಅಣೆಕಟ್ಟುಗಳೂ ರಚನೆಯಾದವು. ಅದರ ಪರಿಣಾಮ ಈ ಭಾಗದಲ್ಲಿ ಉಪ್ಪುನೀರಿನ ಹಿನ್ನೀರಿನ ಪ್ರಮಾಣ ಹೆಚ್ಚಾಯಿತು. ಒಂದೆಡೆ ಅಭಿವೃದ್ಧಿಯ ಕನಸಾದರೆ ಇಲ್ಲಿ ಕೃಷಿಯಿಂದ ಒಂದು ಇಡೀ ಸಮೂಹ ವಿಮುಖವಾಗುವಂತಾಯಿತು. ಸುಮಾರು 30ಕ್ಕಿಂತ ಹೆಚ್ಚು ಕುಟುಂಬಗಳು ಗದ್ದೆ ಇದ್ದರೂ ಭತ್ತ, ಉದ್ದು ಬೆಳೆ ಬೆಳೆಯುತ್ತಿಲ್ಲ. ಕಣ್ಣೆದುರೇ ಕರಟುತ್ತಿರುವ ತೆಂಗಿನ, ಮಾವಿನ ಮರಗಳನ್ನು ನೋಡಿಕೊಂಡು ಕನಸನ್ನು ಕಮರಿ ಹಾಕಿಕೊಳ್ಳುತ್ತಾ ದಿನದೂಡುತ್ತಿದ್ದಾರೆ.
Advertisement
ನೀರು ಬರಲಿದೆಈ ಭಾಗಕ್ಕೆ ಕುಡಿಯುವ ನೀರು ಒದಗಿಸಲು ಪುರಸಭೆ ವತಿಯಿಂದ ಕೋಡಿಯಲ್ಲಿ ಟ್ಯಾಂಕಿ ರಚನೆಯಾಗುತ್ತಿದೆ. ಪೈಪ್‌ಲೈನ್ ಕಾಮಗಾರಿ ಪೂರ್ಣವಾಗುತ್ತಾ ಬಂದಿದೆ. ಆದ್ದರಿಂದ ಕುಡಿಯುವ ನೀರಿಗೆ ಪರಿಹಾರ ಈ ಬೇಸಗೆಯಲ್ಲಿ ದೊರೆಯಬಹುದು ಎಂಬ ನಿರೀಕ್ಷೆಯಿದೆ. ಉಪ್ಪುನೀರಿಗೆ ತಡೆಗೋಡೆ ಕಟ್ಟಿದರೆ ಇನ್ನಷ್ಟು ಸಮಸ್ಯೆ ನಿವಾರಣೆಯಾಗಲಿದೆ. ರಿಂಗ್‌ರೋಡ್ ಬೇಕು
ಕೋಡಿಯ ಜನರ ಪಾಲಿಗೆ ಶಾಪದ ರೀತಿಯಲ್ಲಿ ಪರಿಹಾರ ಆಗದೆ ಕಾಡುತ್ತಲೇ ಇದೆ ಉಪ್ಪುನೀರು. ಒಮ್ಮೆ ನದಿಯ ತಟ ಕಟ್ಟಲು ಹಣ ಮಂಜೂರಾಗಿದ್ದು ಕಳಪೆ ಕಾಮಗಾರಿ ಮಾಡಿದ್ದರಿಂದ ಪ್ರಯೋಜನ ಇಲ್ಲದಂತಾಯಿತು. ಐದರಿಂದ ಆರು ತಿಂಗಳ ಹಿಂದೆ ನಾಶವಾದ ಕೃಷಿಭೂಮಿಯಮನ್ನು ಪುರಸಭಾ ಅಧಿಕಾರಿಗಳು ವೀಕ್ಷಿಸಿ ಮಾರನೆಯ ದಿನವೇ ಕೆಲಸ ಪ್ರಾರಂಭಿಸಿ ಎಂದಿದ್ದರೂ ಉದ್ದೇಶಪೂರ್ವಕವಾಗಿ ಯಾವುದೋ ಸಂಚಿನಿಂದ ತಡೆಹಿಡಿಯಲಾಯಿತು. ಉಪ್ಪು ನೀರಿನ ಸಮಸ್ಯೆಯಿಂದ ಸೊಳ್ಳೆ ಉತ್ಪತ್ತಿಯಾಗುತ್ತಿದೆ. ಇದಕ್ಕೆ ಪರಿಹಾರದ ಮಾರ್ಗ ರಿಂಗ್ ರೋಡ್ ಮಾತ್ರ ಎನ್ನುತ್ತಾರೆ ಕೋಡಿ ಅಶೋಕ್ ಪೂಜಾರಿ. ಕೋಡಿ ಮಧ್ಯ ವಾರ್ಡ್
ವೀಕ್ಷಿಸಿ ಹೋಗಿದ್ದಾರೆ
ಉಪ್ಪುನೀರಿಗೆ ತಡೆಗೋಡೆ ಕಟ್ಟುವ ಕುರಿತು ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಿದ್ದೆ. ಕೋಟ ಅವರಿಗೆ ನೀಡಿದ ಮನವಿಗೆ ಪ್ರತಿಯಾಗಿ ಎಂಜಿನಿಯರ್ ಆಗಮಿಸಿ ವೀಕ್ಷಿಸಿ ಹೋಗಿದ್ದಾರೆ. ಜಿಲ್ಲಾಧಿಕಾರಿಗೆ ನೀಡಿದ ಪತ್ರಕ್ಕೆ ಮಂಗಳವಾರ ಪ್ರತ್ಯುತ್ತರ ಬಂದಿದೆ.
– ಕಮಲ ಮಂಜುನಾಥ್ ಪೂಜಾರಿ,ಸದಸ್ಯರು,ಪುರಸಭೆ ತೆಂಗಿನ ಮರಗಳು ಸತ್ತವು
ಉಪ್ಪು ನೀರಿನಿಂದಾಗಿ ಹತ್ತಾರು ತೆಂಗಿನ ಮರಗಳು ಸತ್ತವು. ಫಲಭರಿತವಾಗಿದ್ದಾಗ ಸಾವಿರಾರು ಕಾಯಿ ದೊರೆಯುತ್ತಿತ್ತು. ಈಗ ಕಣ್ಣೆದುರೇ ಸಾವಿಗೀಡಾಗುತ್ತಿದೆ. ಮಾವಿನ ಮರವೂ ಸಾಯುತ್ತಿದೆ.
-ತಿಮ್ಮಪ್ಪ ಪೂಜಾರಿ,ಕೋಡಿ ಕುಡಿಯಲು ನೀರು ಕ್ರಯಕ್ಕೆ
ಕುಡಿಯಲು ಶುದ್ಧ ನೀರು ಹಣ ಕೊಟ್ಟು ತರುವಂತಾಗಿದೆ. ಬಾವಿ ಇದ್ದರೂ ಉಪ್ಪುನೀರು ಬರುತ್ತದೆ. ಉಪ್ಪು ನೀರಿನಿಂದಾಗಿ ಕೃಷಿ ಮಾಡವುದನ್ನೇ ಕೈ ಬಿಟ್ಟಿದ್ದೇವೆ.
-ರಮೇಶ್ ಪೂಜಾರಿ, ಕೋಡಿ