Advertisement

ಡಬ್ಲ್ಯೂಎಚ್‌ಒ ಹೆಸರಲ್ಲಿ ನಕಲಿ ಸಂದೇಶ: ಎಚ್ಚರ

12:01 PM Feb 06, 2023 | Team Udayavani |

ಬೆಂಗಳೂರು: ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ಹೆಸರಲ್ಲಿ ಕೊರೊನಾನಿಯಂತ್ರಣಕ್ಕೆ ಅನುದಾನ ನೀಡುವಂತೆ ನಿಮ್ಮ ಮೊಬೈಲ್‌, ಇ-ಮೇಲ್‌ಗೆ ಸಂದೇಶ ಬಂದರೆ ಎಚ್ಚರ! ಇದನ್ನು ನಂಬಿ ಹಣ ಜಮೆ ಮಾಡಿದರೆ ನಿಮ್ಮ ಹಣ ಸೈಬರ್‌ ಕಳ್ಳರ ಪಾಲಾಗಬಹುದು.

Advertisement

ಕೊರೊನಾ ವೈರಸ್‌ನಿಂದ ಸೃಷ್ಟಿಯಾಗಿರುವ ಆತಂಕದ ವಾತಾವರಣವನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್‌ ಚೋರರು ಡಬ್ಲ್ಯೂಎಚ್‌ಒ ಹೆಸರಲ್ಲಿ ಅಮಾಯಕರಿಗೆ ನಕಲಿ ಸಂದೇಶ ಕಳುಹಿಸಿ ಹೊಸ ವಂಚನೆಯ ಮಾರ್ಗ ಕಂಡುಕೊಂಡಿದ್ದಾರೆ.ವಿಶ್ವ ಸಂಸ್ಥೆ ಹೆಸರಿನಲ್ಲಿ ಇ-ಮೇಲ್‌, ವಾಟ್ಸ್‌ ಆ್ಯಪ್‌ಗಳಿಗೆ ನಕಲಿ ಸಂದೇಶ ಕಳುಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸೈಬರ್‌ ವಂಚನೆ ಜಾಲದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಡಬ್ಲ್ಯೂಎಚ್‌ಒ ಸೂಚಿಸಿದೆ.  ಕೊರೊನಾ ವಿರುದ್ಧ ಹೋರಾಡಲು ಡಬ್ಲ್ಯೂಎಚ್‌ಒ ಯಾವುದೇ ಅನುದಾನ ಸಂಗ್ರಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

ವಂಚನೆ ಹೇಗೆ?: ವಿಶ್ವದೆಲ್ಲೆಡೆ ಕೊರೊನಾ ಉಲ್ಬಣವಾಗಿದ್ದು, ಇದರ ನಿಯಂತ್ರಣಕ್ಕಾಗಿ ಡಬ್ಲ್ಯೂಎಚ್‌ಒ ದೇಣಿಗೆ ಸಂಗ್ರಹಿಸುತ್ತಿದೆ. ನಾವು ಹೇಳುವ ಬ್ಯಾಂಕ್‌ ಖಾತೆಗೆ ನಿಮಗಿಚ್ಛೆ ಬಂದಷ್ಟು ದೇಣಿಗೆ ನೀಡಿ ಎಂದು ನಂಬಿಸಿ ಇದುವರೆಗೆ ಕೋಟ್ಯಂತರ ರೂ. ಅನ್ನು ಸೈಬರ್‌ ವಂಚಕರು ಲಪಟಾಯಿಸಿದ್ದಾರೆ. ಸಾರ್ವಜನಿಕರ ಮೊಬೈಲ್‌ಗ‌ಳಿಗೆ ಡಬ್ಲ್ಯೂಎಚ್‌ಒ ಹೆಸರಲ್ಲಿ ಲಿಂಕ್‌ ಕಳುಹಿಸಿ ಅದನ್ನು ಕ್ಲಿಕ್‌ ಮಾಡಿ ವೈಯಕ್ತಿಕ ಮಾಹಿತಿ ತುಂಬುವಂತೆ ಹೇಳಿ ಬ್ಯಾಂಕ್‌ ಖಾತೆಗೆ ಕನ್ನ ಹಾಕುತ್ತಾರೆ. ಯೂಸರ್‌ನೇಮ್‌, ಪಾಸ್‌ವರ್ಡ್‌ ಮಾಹಿತಿ ಪಡೆದು ಬ್ಯಾಂಕ್‌ಗೆ ಕನ್ನ ಹಾಕಿದ ಸಾಕಷ್ಟು ಪ್ರಕರಣಗಳು ದೇಶಾದ್ಯಂತ ದಾಖಲಾಗಿದೆ. ಸೈಬರ್‌ ಕಳ್ಳರು ಸಂಸ್ಥೆಯ ಹೆಸರಲ್ಲಿ ಈ ಮಾದರಿಯಲ್ಲಿ ಕೈ ಚಳಕ ತೋರಿಸಿರುವ ಸಂಗತಿ ಡಬ್ಲ್ಯೂಎಚ್‌ಒ ಗಮನಕ್ಕೆ ಬಂದ ಕೂಡಲೇ ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ಕೊಟ್ಟಿದೆ.

ವಂಚನೆಗೊಳಗಾಗದಿರಲು ಸೂಚನೆ:

ಡಬ್ಲ್ಯೂಎಚ್‌ಒ ಹೆಸರಿನಲ್ಲಿ ಆನ್‌ಲೈನ್‌ ಮೂಲಕ ಯಾರಾದರೂ ನಿಮ್ಮನ್ನು ಸಂಪರ್ಕಿಸಿದರೆ ಅವರ ದೃಢೀಕರಣ ಪರಿಶೀಲಿಸಿ ಪ್ರತಿಕ್ರಿಯಿಸಿ. ಈ ಸಂಸ್ಥೆ ಯಾವುದೇ ವ್ಯಕ್ತಿಯ ಯೂಸರ್‌ ನೇಮ್‌, ಪಾಸ್‌ವರ್ಡ್‌ ಸೇರಿದಂತೆ ಗೌಪ್ಯ ಮಾಹಿತಿ ಕೇಳುವುದಿಲ್ಲ. ನೀವು ಸಂಸ್ಥೆಯೊಂದಿಗೆ ವ್ಯವಹರಿಸದಿದ್ದರೆ ಯಾವುದೇ ಇ-ಮೇಲ್‌ ಸಂದೇಶ ಕಳುಹಿಸುವುದಿಲ್ಲ. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು, ಸಮ್ಮೇಳನಕ್ಕಾಗಿ ನೋಂದಾಯಿಸಿಕೊಳ್ಳಲು ಅಥವಾ ಹೋಟೆಲ್‌ ಕಾಯ್ದಿರಿಸಲು ಸಾರ್ವಜನಿಕರಿಂದ ಶುಲ್ಕ ಸಂಗ್ರಹಿಸುವುದಿಲ್ಲ. ಲಾಟರಿ, ಆಫ‌ರ್‌ ಪ್ರೈಜ್‌ಗಳು,ಸಂಸ್ಥೆಯ ಪ್ರಮಾಣ ಪತ್ರ, ಅನುದಾನವನ್ನು ಇ-ಮೇಲ್‌ನಲ್ಲಿ ಕಳುಹಿಸಲು ಹಣ ಕೇಳಿವುದಿಲ್ಲ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.

Advertisement

ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆ: 

  • ಬ್ಯಾಂಕ್‌ ಖಾತೆ ಅಥವಾ ಇ-ಮೇಲ್‌ಗೆ ಸಂಬಂಧಿಸಿದ ಗೌಪ್ಯ ಮಾಹಿತಿ ಹಂಚಿಕೊಳ್ಳಬೇಡಿ.
  • ಸಂಪರ್ಕಿಸುವ ನೆಟ್‌ವರ್ಕ್‌ ಕಾನೂನು ಬದ್ಧವಾಗಿದ್ದರೆ ಮಾತ್ರ ಸಾರ್ವಜನಿಕ ಪ್ರದೇಶಗಳಲ್ಲಿ ವೈ-ಫೈ ಬಳಸಿ.
  • ಅನುಮಾನಾಸ್ಪದವಾಗಿ ಬರುವ ಇ-ಮೇಲ್‌ ಬಗ್ಗೆ ಎಚ್ಚರ
  • ಸೈಬರ್‌ ವಂಚನೆಯಾದರೆ ಕೂಡಲೇ ಪೊಲೀಸರಿಗೆ ತಿಳಿಸಿ
  • ಕೊರೊನಾ ದೇಣಿಗೆ, ಔಷಧ, ಟೆಸ್ಟಿಂಗ್‌ ಕಿಟ್‌ ಹೆಸರಲ್ಲಿ ಲಿಂಕ್‌ ಕಳುಹಿಸಿ ಹ್ಯಾಕ್‌ ಮಾಡಬಹುದು ಎಚ್ಚರ

ಡಬ್ಲ್ಯೂಎಚ್‌ಒ ಅಧಿಕೃತ ಇ-ಮೇಲ್‌ ಪತ್ತೆ ಹೇಗೆ? :

 ಡಬ್ಲ್ಯೂಎಚ್‌ಒ ಹೆಸರಲ್ಲಿರುವ ನಕಲಿ ವೆಬ್‌ಸೈಟ್‌ ಗಳಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆವಹಿಸಬೇಕಿದೆ.

 ಲಿಂಕ್‌ ಮೂಲಕ ಇ ಮೇಲ್‌ ಸ್ವೀಕರಿಸಿದರೆ, https://www.who.int  ನೊಂದಿಗೆ ಪ್ರಾರಂಭವಾಗುವುದನ್ನು ನೀವು ಖಚಿತಪಡಿಸಿಕೊಳ್ಳಿ. ನಿಮ್ಮ ಬ್ರೌಸರ್‌ನಲ್ಲಿ https://www.who.int  ಎಂದು ಟೈಪ್‌ ಮಾಡಿ ಡಬ್ಲೂéಎಚ್‌ಒ ಸಂಸ್ಥೆಯ ವೆಬ್‌ ಸೈಟ್‌ಗೆ ಹೋಗಿ ಹೆಚ್ಚಿನ ಮಾಹಿತಿ ಪಡೆಯಬಹುದು.

 ಡಬ್ಲೂಎಚ್‌ಒ ವೆಬ್‌ಸೈಟ್‌ ಪ್ರಕಾರ ಚಿಹ್ನೆ ನಂತರ https://www.who.int  ಬಿಟ್ಟು ಬೇರೆ ಯಾವುದಾದರೂ ಇದ್ದರೆ ಡಬ್ಲೂಎಚ್‌ಒ ಸಂಸ್ಥೆಯ ಅಧಿಕೃತ ಇ-ಮೇಲ್‌ ಅಲ್ಲ ಎಂಬುದನು ತಿಳಿದುಕೊಳ್ಳಬಹುದು.

 ಡಬ್ಲ್ಯೂಎಚ್‌ಒ ಸಂಸ್ಥೆಯಿಂದ ಬಂದ ಇ-ಮೇಲ್‌ ಆದರೆ ಇ-ಮೇಲ್‌ ಮಾಡುವ ವ್ಯಕ್ತಿ ಹೆಸರಿನ ಮುಂದೆ https://www.who.int  ಎಂದಿರುತ್ತದೆ.

-ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next