ಸಂಜೆಯ ಹೊತ್ತು ಕಾಲೇಜು ಮುಗಿಸಿದ ನಾವು ಎಂದಿನಂತೆ ಮನೆಗೆ ಮರಳಲೆಂದು ರೈಲು ಹತ್ತಿ ಕುಳಿತೆವು. ಪಿರಿ ಪಿರಿ ಸುರಿಯುತ್ತಿದ್ದ ಮಳೆಯು ಅದಾಗಲೇ “ಧೋ’ ಎಂದು ರಭಸವಾಗಿ ಸುರಿಯಲಾರಂಭಿಸಿತು. ಆಕಾಶವೇ ಭುವಿ ಮೇಲೆ ಕುಸಿದು ಬಿದ್ದಂತೆ ಭಾಸವಾಯಿತು. ಆ ದಿನ ಮಂಗಳೂರು ಸೆಂಟ್ರಲ್‌ನಿಂದ ರೈಲುಗಾಡಿ ಹೊರಟದ್ದು ತಡವಾಗಿಯೇ. ಅದಲ್ಲದೆ ಶುಕ್ರವಾರದ ಕ್ರಾಸಿಂಗ್ ಬೇರೆ. ಟ್ರೈನಿನೊಳಗೆ ಗಂಟೆಗಟ್ಟಲೆ ಕುಳಿತ ನಮಗೆ ನಮ್ಮನ್ನು ಬಂಧನದಲ್ಲಿರಿಸಿದಂತೆ ಅನುಭವವಾಯಿತು. ಹೊರಗಡೆ ಮಳೆರಾಯ ಎಡೆಬಿಡದೆ ಆರ್ಭಟಿಸುತ್ತಿದ್ದ. ಕೊನೆಗೂ ನಮ್ಮ ಸ್ಟೇಷನಿಗೆ ರೈಲುಗಾಡಿಯು ತಲುಪಿಯೇ ಬಿಟ್ಟಿತು. ಹೊರಗಡೆ ವಿದ್ಯಾರ್ಥಿಗಳು ಕಿರುಚಿದಂಥ ಸದ್ದು ಕೇಳಿಸುತ್ತಲೇ ನಾವು ಬೆಚ್ಚಿಬಿದ್ದೆವು. ಹೊರಗಿಳಿದಾಗ ಕಂಡದ್ದೇನೆಂದರೆ ಕುಂಬಳೆ ರೈಲು ನಿಲ್ದಾಣ ಪೂರ್ತಿ ಜಲಾವೃತವಾಗಿತ್ತು. ಸ್ಟೇಷನಿನ ಬಾಗಿಲಿನಿಂದ ರಭಸವಾಗಿ ನೀರು ಮುನ್ನುಗ್ಗಿ ರೈಲು ಹಳಿಯ ಮೇಲೆರಗುತ್ತಿತ್ತು. ಕೆಲವರು ಭಯಪಟ್ಟು ನಿಂತಿದ್ದರೆ, ಇನ್ನು ಕೆಲವು ಸಣ್ಣ ಮಕ್ಕಳಂತೂ ನೀರಿನ ರಭಸ ಕಂಡು ಆನಂದಿಸುತ್ತಿದ್ದರು. ನಮ್ಮಲ್ಲಿ ಹೇಗಾದರೂ ಮಾಡಿ ಮನೆ ಸೇರುವ ತವಕ ಎದ್ದು ನಿಂತಿತ್ತು.
ನಾವು ಸ್ಟೇಷನಿನ ಇನ್ನೊಂದು ದಾರಿ ಹಿಡಿದು ರಸ್ತೆ ತಲುಪಿದೆವು. ಹೆಸರಿಗೆ ಮಾತ್ರ ಕೊಡೆ. ಆದರೆ, ನಾವು ಮಾತ್ರ ಮಳೆಯಲ್ಲಿ ನೆನೆದ ಕಪ್ಪೆಯಂತೆ ಪೂರ್ತಿ ಒದ್ದೆಯಾಗಿದ್ದೆವು. ರಸ್ತೆಯ ಅವಸ್ಥೆಯನ್ನಂತೂ ಹೇಳತೀರದು. ಅದು ರಸ್ತೆಯೋ ನದಿಯೋ ಎಂಬ ಸಂಶಯ ಹುಟ್ಟಿಸುವಂತಿತ್ತು. ರಸ್ತೆ ಪೂರ್ತಿಯಾಗಿ ಜಲಾವೃತಗೊಂಡಿತ್ತು. ವಿಪರೀತ ಚಳಿಯಿಂದಾಗಿ ಮೈ ಜುಮ್ಮೆನ್ನುತ್ತಿತ್ತು. ರಸ್ತೆಯಲ್ಲಿ ವೇಗವಾಗಿ ಆಗಮಿಸಿದ ಲಾರಿಯೊಂದು ರಸ್ತೆಯಲ್ಲಿದ್ದ ನೀರನ್ನು ನಮ್ಮ ಮೈಗೆ ಕಾರಂಜಿಯಂತೆ ಚಿಮುಕಿಸಿ ಕಣ್ಮರೆಯಾಯಿತು. ನಮ್ಮೊಳಗೆ ಸಿಟ್ಟು ಮತ್ತು ನಗು ಈ ಎರಡು ಭಾವನೆಗಳೂ ಒಂದೇ ಸಮಯದಲ್ಲಿ ಜೊತೆಯಾದುವು. ಹೇಗಾದರೂ ಮಾಡಿ ಬಸ್ಸಿಗೆ ಹತ್ತೋಣವೆಂದರೆ ಅದಾಗಲೇ ಬಸ್ಸಿನ ಮೆಟ್ಟಿಲು ತನಕ ಜನರಿದ್ದರು. ಜಡಿಮಳೆಯಲ್ಲಿ ಕೊಡೆ ಹಿಡಿದು ಇನ್ನೊಂದು ಬಸ್ಸಿಗಾಗಿ ಕಾದು ನಿಲ್ಲುವುದೆಂದರೆ ಯಾರಿಗೆ ತಾನೇ ಇಷ್ಟವಾದೀತು? ಆದರೆ, ನಿಲ್ಲಬೇಕಾದುದು ಅನಿವಾರ್ಯವಾಗಿತ್ತು.
ಸಂಜೆಯ ಹೊತ್ತು, ಅದಲ್ಲದೆ ಮುಗಿಲು ಪೂರ್ತಿ ಮೇಘಗಳ ಗುಂಪು. ಸುತ್ತಮುತ್ತಲೂ ಕತ್ತಲು ಆವರಿಸತೊಡಗಿತ್ತು. ಮನೆಗೆ ಕರೆ ಮಾಡಿ ವಿಷಯ ತಿಳಿಸೋಣವೆಂದರೆ ಗ್ರಹಚಾರಕ್ಕೆ ಅಂದು ಮೊಬೈಲ್ ಮನೆಯಲ್ಲೇ ಬಿಟ್ಟು ಬಂದಿದ್ದೆ. ಕೊನೆಗೂ ಬಸ್ಸಿಗೆ ಹತ್ತಿ ಕುಳಿತೆವು.ಗೆಳತಿಯ ಸ್ಟಾಪ್ ಬಂದಾಗ ಜಾಗ್ರತೆಯ ಮಾತು ಹೇಳಿ ಆಕೆ ಬಸ್ಸಿನಿಂದಿಳಿದಳು. ಆಕೆ ಇಳಿದದ್ದೇ ತಡ ಬಸ್ಸು ಸ್ವಲ್ಪ ಮುಂದೆ ಸಾಗಿದಾಗ ರಸ್ತೆ ಬ್ಲಾಕ್. ಒಂಟಿಯಾದೆನೆಂಬ ಭಾವ ಮನದಲ್ಲಿ ಕಾಡಿದ್ದರೂ ಧೈರ್ಯಗುಂದದೆ ಸುಮ್ಮನೆ ಕುಳಿತಿದ್ದೆ. ಸ್ವಲ್ಪ ಸಮಯದ ಬಳಿಕ ರಸ್ತೆ ಸರಿಯಾಗಿ ಬಸ್ಸು ಮುಂದೆ ಸಾಗಿತು. ಸುತ್ತಲೂ ಕಗ್ಗತ್ತಲು, ಧೋ ಎಂದು ಸುರಿಯುವ ಮಳೆ, ಅದರೊಂದಿಗೆ ಕೈಯಲ್ಲಿ ಟಾರ್ಚ್ ಇಲ್ಲದುದರಿಂದ ಬಸ್ಸಿಳಿದು ನಡೆಯುವುದು ಹೇಗೆ ಎಂಬುದರ ಚಿಂತೆ ಮನವನ್ನು ಕೆದಕುತ್ತಿತ್ತು. ಕೊನೆಗೂ ನನ್ನ ಸ್ಟಾಪ್ ಬಂದೇ ಬಿಟ್ಟಿತು. ಬಸ್ಸಿನಿಂದಿಳಿದಾಗ ಸ್ಟಾಪಿನಲ್ಲಿ ಅಪ್ಪ ಕಾಯುತ್ತಲಿದ್ದರು. ಅಬ್ಟಾ! ಬದುಕಿದೆಯಾ ಬಡಜೀವವೇ ಎಂದು ನಿಟ್ಟುಸಿರುಬಿಟ್ಟೆ.
ತೇಜಶ್ರೀ ಶೆಟ್ಟಿ , ಬೇಳ
ತೃತೀಯ ಪತ್ರಿಕೋದ್ಯಮ
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು