ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲು ಕೇರಳದಿಂದ ಬಂದಿದ್ದ ಪೊಲೀಸರಿಗೆ ನಕಲಿ ಪಿಸ್ತೂಲ್ ತೋರಿಸಿ ಪರಾರಿಯಾಗಿದ್ದ ಡ್ರಗ್ಸ್ ಪೆಡ್ಲರ್‌ನನ್ನು ಎಚ್‌ಎಸ್‌ಆರ್ ಲೇಔಟ್ ಪೊಲೀಸರ ಸಹಾಯದಿಂದ ಕೇರಳದಲ್ಲಿ ಬಂಧಿಸಲಾಗಿದೆ.
ಕೇರಳದ ಕುರುತಿಕಾಡ್ ನಿವಾಸಿ ಜಾಫರ್(32) ಬಂಧಿತ. ಈತ ಯಾರಿಗೆ ಡ್ರಗ್ಸ್ ಪೂರೈಕೆ ಮಾಡಲು ಬಂದಿದ್ದ ಎಂಬ ಬಗ್ಗೆ ವಿಚಾರಣೆ ನಡೆಸಬೇಕಿದೆ ಎಂದು ಪೊಲೀಸರು ಹೇಳಿದರು.
ಏನಿದು ಘಟನೆ?: 15 ದಿನಗಳ ಹಿಂದೆ ಕುರುತಿಕಾಡ್ ಠಾಣೆ ವ್ಯಾಪ್ತಿಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಆರೋಪಿ ಜಾಫರ್‌ನನ್ನು ಬೆನ್ನು ಬಿದ್ದಿದ್ದ ಠಾಣೆಯ ಪಿಎಸ್‌ಐ ಸುನೋಮೋನ್ ಹಾಗೂ ಕಾನ್‌ಸ್ಟೇಬಲ್‌ಗಳಾದ ಸತೀಶ್ ಕುಮಾರ್, ಸಾಥಿಕ್ ಪಾಶಾ ಮೊಬೈಲ್ ಲೋಕೇಷನ್ ಆಧರಿಸಿ ಬೆಂಗಳೂರಿಗೆ ಬಂದಿದ್ದರು. ಆರೋಪಿ ಜಾಫರ್ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಪ್ರತಿಷ್ಠಿತ ಹೋಟೆಲ್‌ವೊಂದಕ್ಕೆ ಊಟಕ್ಕೆ ಹೋದಾಗ ಆತನನ್ನು ಹಿಂಬಾಲಿಸಿದ ಪೊಲೀಸರು ಸೆರೆಹಿಡಿಯಲು ಮುಂದಾಗಿದ್ದಾರೆ. ಆದರೆ, ಆರೋಪಿ ತನ್ನ ಬಳಿಯಿದ್ದ ಆಟಿಕೆ ಪಿಸ್ತೂಲ್ ತೋರಿಸಿ ಪೊಲೀಸರಿಗೆ ಹೆದರಿಸಿ ಕಾರಿನಲ್ಲಿ ಕೇರಳಕ್ಕೆ ಪರಾರಿಯಾಗಿದ್ದ.
ಇದನ್ನೂ ಓದಿ:ಕೇರಳ ಪತ್ರಕರ್ತ ಸಿದ್ದಿಕ್ ಕಪ್ಪನ್‌ಗೆ ಸುಪ್ರೀಂ ಕೋರ್ಟ್ ಜಾಮೀನು
ಈ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದರು. ಬಳಿಕ ತನಿಖೆ ನಡೆಸಿದಾಗ ಆತ ಕೇರಳ ದಲ್ಲಿಯೇ ಅಡಗಿರುವುದು ದೃಢಪಟ್ಟಿತ್ತು. ಹೀಗಾಗಿ ಎಚ್ ಎಸ್‌ಆರ್ ಲೇಔಟ್ ಪೊಲೀಸರು ಕೇರಳ ಪೊಲೀಸರಿಗೆ ಆರೋಪಿಯ ಬಗ್ಗೆ ಮಾಹಿತಿ ನೀಡಿ, ಬಂಧಿಸಲಾಗಿದೆ.
ಸದ್ಯ ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿ ದರು. ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.