ಕಾಪು: ಉಳಿಯಾರಗೋಳಿ ಸಮುದ್ರ ಕಿನಾರೆಯಲ್ಲಿ ಟ್ಯೂಬ್ ಧರಿಸಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಸಮುದ್ರ ಪಾಲಾಗಿದ್ದ ಯಾರ್ಡ್ ಬಳಿ ನಿವಾಸಿ ಸಂತೋಷ್ (45) ಅವರ ಮೃತದೇಹವು ಗುರುವಾರ ಮಧ್ಯಾಹ್ನ ಪೊಲಿಪು ಬಳಿ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.
ಬುಧವಾರ ಸಂಜೆ ಟ್ಯೂಬ್ ಮೂಲಕ ಮೀನುಗಾರಿಕೆಗೆ ತೆರಳಿದ್ದ ಸಂತೋಷ್ ಬಲೆ ಬೀಸಿ ವಾಪಸಾಗುತ್ತಿದ್ದ ವೇಳೆ ತೆರೆಯ ಅಬ್ಬರಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿದ್ದರು. ಸ್ಥಳೀಯರು ಗಮನಿಸಿ ಕೂಡಲೇ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದರಾದರೂ, ರಕ್ಷಿಸಲು ಸಾಧ್ಯವಾಗಿರಲಿಲ್ಲ. ಮುಳುಗು ತಜ¡ ಈಶ್ವರ್ ಮಲ್ಪೆ ಸೇರಿದಂತೆ ರಕ್ಷಣ ತಂಡವು ರಾತ್ರಿಯವರೆಗೂ ಸಂತೋಷ್ ಅವರ ಪತ್ತೆ ಕಾರ್ಯಾಚರಣೆ ನಡೆಸಿದ್ದರು.
ಗುರುವಾರ ಮಧ್ಯಾಹ್ನ ಪೊಲಿಪು ಬಳಿಯ ಸಮುದ್ರ ತೀರದಲ್ಲಿ ಶವ ತೇಲಿಕೊಂಡು ಬಂದಿದ್ದು, ಸ್ಥಳೀಯ ಮೀನುಗಾರ ರಿತೇಶ್ ಅವರು ಮೃತದೇಹವನ್ನು ಮೇಲಕ್ಕೆತ್ತಿ ತಂದು ಪರಿಶೀಲಿಸಿದಾಗ ಅದು ಸಂತೋಷ್ ಅವರ ಮೃತದೇಹವೆಂದು ಗುರುತಿಸಲಾಯಿತು. ಬಳಿಕ ಸೂರಿ ಶೆಟ್ಟಿ ನೇತೃತೃದಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.